ಹೊನ್ನಾಳಿ: ತಮಿಳುನಾಡಿಗೆ (TamilNadu) ಕಾವೇರಿ ನೀರು (Cauvery water) ಬಿಡದಂತೆ ಒತ್ತಾಯಿಸಿ ಹಾಗೂ ಭದ್ರಾ ಜಲಾಶಯದಿಂದ ನಿಲ್ಲಿಸಲಾದ ನೀರನ್ನು ಕೂಡಲೇ ಬಿಡುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ನಾಡು ರಕ್ಷಣಾ ವೇದಿಕೆ ಹೊನ್ನಾಳಿ/ನ್ಯಾಮತಿ ತಾಲೂಕು ಘಟಕ ಜಂಟಿಯಾಗಿ ಸೋಮವಾರ ಬೃಹತ್ ಪ್ರತಿಭಟನೆ (Protest) ನಡೆಸಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವ ಅಧ್ಯಕ್ಷ ಕುರ್ವ ಗಣೇಶ್ ನೇತೃತ್ವದಲ್ಲಿ ತಾಲೂಕಿನ ಟಿ.ಬಿ. ವೃತ್ತದಿಂದ ತಾಲೂಕು ಸೌಧಕ್ಕೆ ಕಾಲ್ನಡಿಗೆಯೊಂದಿಗೆ ಮೆರವಣಿಗೆಯ ಮೂಲಕ ಆಗಮಿಸಿ, ತಾಲೂಕು ಉಪ ವಿಭಾಗಾಧಿಕಾರಿ ಹುಲ್ಮನಿ ತಿಮ್ಮಣ್ಣ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇದನ್ನೂ ಓದಿ: Weather Report : ಮಾಸಾಂತ್ಯದವರೆಗೂ ಮಳೆ; 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ರಾಜ್ಯದ್ಯಂತ ಮಳೆಯ ತೀವ್ರ ಕೊರತೆ ಉಂಟಾಗಿರುವುದರಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ರೈತರು ತತ್ತರಿಸಿದ್ದಾರೆ, ಆದ್ದರಿಂದ ರಾಜ್ಯಾದ್ಯಂತ ಬರಗಾಲವೆಂದು ಕೂಡಲೇ ಸರ್ಕಾರ ಘೋಷಿಸಬೇಕು. ರೈತರಿಗೆ ಬೆಳೆ ಪರಿಹಾರವಾಗಿ ಎಕರೆಗೆ 25000 ರೂಗಳನ್ನು ಘೋಷಿಸಿ. ಜನ, ಜಾನುವಾರುಗಳಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸಬೇಕು ಎಂದರು.
ನೀರಾವರಿ ಪಂಪ್ ಸೆಟ್‌ಗಳಿಗೆ ಹಗಲಿನಲ್ಲಿ ತಡೆರಹಿತ ಗುಣಮಟ್ಟದ ಏಳು ಗಂಟೆ ವಿದ್ಯುತ್ ಅನ್ನು ಕೊಡಬೇಕು, ಆಕ್ರಮ- ಸಕ್ರಮ ಅಡಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು, ಸುಟ್ಟುಹೋದ ಟಿಸಿಗಳನ್ನು ಬದಲಾಯಿಸಿ ತಕ್ಷಣವೇ ಹೊಸ ಟಿಸಿಯನ್ನು ಹಾಕಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಾವೇರಿ ನೀರಿನ ಸಮಸ್ಯೆಯನ್ನು ತಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಗೆಹರಿಸಬೇಕು ಹಾಗೂ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ತತಕ್ಷಣದಿಂದ ನಿಲ್ಲಿಸಬೇಕು, ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನೀರಿನ ಬೇಗೆಯನ್ನು ಬಗೆಹರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಪ್ರತಿಭಟನಾ ನಿರತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
ಈ ಸಂದರ್ಭದಲ್ಲಿ ರೈತ ಮುಖಂಡರಾದ ದೊಡ್ಡೇರಿ ಬಸವರಾಜಪ್ಪ, ಉಮೇಶ್ ಬೀರಗೊಂಡನಹಳ್ಳಿ, ಶುಂಠಿ ಗಣೇಶಪ್ಪ, ಮಂಜುನಾಥ್ ಹಾಗೂ ಕರ್ನಾಟಕ ನಾಡು ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಚನ್ನಬಸಪ್ಪ ಇತರರು ಭಾಗವಹಿಸಿದ್ದರು.