Site icon Vistara News

Rama Mandir : ರಾಮ ಮಂದಿರ ಆಯಿತು, ಇನ್ನು ಹಿಂದೂ ರಾಷ್ಟ್ರ; RSS ಸಹಕಾರ್ಯವಾಹ ನಾ ತಿಪ್ಪೇಸ್ವಾಮಿ

Mandiravalle Kattidevu- Davanagere Programme

ದಾವಣಗೆರೆ: ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Rama Mandir) ನಿರ್ಮಾಣ ಆಯಿತು. ಇನ್ನು ಹಿಂದೂ ರಾಷ್ಟ್ರ ಘೋಷಣೆ ಆಗುವುದೊಂದು ಬಾಕಿ ಇದೆ ಎಂದು ಆರ್‌ಎಸ್ಎಸ್ ಕ್ಷೇತ್ರೀಯ ಸಹ ಕಾರ್ಯವಾಹ ನಾ ತಿಪ್ಪೇಸ್ವಾಮಿ (Na Thippeswami) ಅವರು ಹೇಳಿದರು. ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವುದೆಂದರೆ ಇದು ಕೇವಲ ಹಿಂದೂಗಳಿಗೆ ಸೇರಿದ ರಾಷ್ಟ್ರ ಎಂದಲ್ಲ. ಹಿಂದೂ ಎನ್ನುವುದು ಎಲ್ಲರನ್ನೂ, ಎಲ್ಲವನ್ನೂ ಒಳಗೊಂಡಿರುವಂಥದ್ದು ಎಂದೂ ಅವರು ವಿವರಿಸಿದರು

ಅಯೋಧ್ಯೆಯ ರಾಮ ಜನ್ಮಭೂಮಿ ಆಂದೋಲನದ (Rama Mandir Movement) 496 ವರ್ಷಗಳ ರೋಚಕ ಕಥನ ಕುರಿತು ಪತ್ರಕರ್ತ ರಮೇಶ್ ಕುಮಾರ್ ನಾಯಕ್ ಬರೆದಿರುವ ʻಮಂದಿರವಲ್ಲೇ ಕಟ್ಟಿದೆವು!ʼ (Mandiravalle Kattidevu!) ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ದಾವಣಗೆರೆಯ ಸೋಮೇಶ್ವರ ಶಾಲೆಯ ನೇತ್ರಾವತಿ ಕನ್ವೆನ್ಶನ್‌ ಹಾಲ್‌ನಲ್ಲಿ ಸೋಮೇಶ್ವರ ಪ್ರತಿಷ್ಠಾನದ ವತಿಯಿಂದ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

“ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಂಡು ಪ್ರಾಣಪ್ರತಿಷ್ಠೆಯಾಗಲು ರಾಮನ ಸಂಕಲ್ಪ ಹಾಗೂ ಕೋಟ್ಯಂತರ ಕಾರ್ಯಕರ್ತರ ಇಚ್ಛಾಶಕ್ತಿಯೇ ಕಾರಣ. ರಾಮ, ಕೃಷ್ಣರೆಲ್ಲರೂ ಭಾರತೀಯ ಸಂಸ್ಕೃತಿಯ ಪ್ರತೀಕ. ರಾಮನಿಗೆ ಅಪಮಾನ ಮಾಡಿದ ಕಳಂಕಿತ ಕಟ್ಟಡವನ್ನೇ ತೆಗೆದು ಅಲ್ಲಿಯೇ ರಾಮನ ಮಂದಿರ ಕಟ್ಟಲಾಗಿದೆ ಎನ್ನುವುದನ್ನು ಯಾರೂ ಮರೆಯಬಾರದು” ಎಂದರು ನಾ. ತಿಪ್ಪೇಸ್ವಾಮಿ.

ಅಯೋಧ್ಯೆಯ ರಾಮ ಮಂದಿರ ರಾಷ್ಟ್ರ ಮಂದಿರವೂ ಹೌದು. ದೇಶದಲ್ಲಿರುವ 5 ಲಕ್ಷ ಗ್ರಾಮಗಳ ಜನರ ಮಂದಿರವಿದು. ರಾಮ ಮಂದಿರ ದೇಶದ ಪ್ರತಿಯೊಬ್ಬನ ಮಂದಿರ. ಏಕೆಂದರೆ ದೇಶದ ಪ್ರತಿಯೊಬ್ಬ ನಾಗರಿಕರೂ ಒಂದಲ್ಲ ಒಂದು ರೀತಿಯಲ್ಲಿ ಮಂದಿರ ನಿರ್ಮಾಣಕ್ಕೆ ನೆರವಾಗಿದ್ದಾರೆ. ನಿಧಿ ಸಮರ್ಪಣಾ ಕಾರ್ಯಕ್ರಮಕ್ಕೆ ಹೋದಾಗ ಉತ್ತಮ ಸ್ಪಂದನೆ ಸಿಕ್ಕಿತು. ರಾಮನ ಕುರಿತ ಶ್ರದ್ಧೆ, ಭಕ್ತಿಯೇ ರಾಮ ಮಂದಿರ ನಿರ್ಮಾಣಕ್ಕೆ ಕಾರಣ ಎಂದವರು ಹೇಳಿದರು.

ರಾಮ ಮಂದಿರ ನಿರ್ಮಾಣದ ಉದ್ದೇಶದಿಂದ ಕಾರ್ಯಕರ್ತರು 12 ಕೋಟಿ ಮನೆಗಳು, 70 ಕೋಟಿ ಜನರು ಹಾಗೂ 5 ಲಕ್ಷ ಗ್ರಾಮಗಳಿಗೆ ತಲುಪಿದ್ದಾರೆ. 3000 ಕೋಟಿ ರೂಪಾಯಿ ಜನರಿಂದಲೇ ಸಂಗ್ರಹವಾಗಿದೆ. ಎಲ್ಲರೂ ಭಕ್ತಿಯಿಂದ ಶಕ್ತಿಮೀರಿ ದೇಣಿಗೆ ಕೊಟ್ಟಿದ್ದಾರೆ ಎಂದು ತಿಪ್ಪೇಸ್ವಾಮಿ ಹೇಳಿದರು.

Mandiravalle Kattidevu- Davanagere Programme

ಇದು ಹೋರಾಟ, ಬಲಿದಾನ, ತ್ಯಾಗಗಳ ಸಂಕಥನ

ಕೃತಿಯ ಲೇಖಕ ಹಾಗೂ ವಿಸ್ತಾರ ನ್ಯೂಸ್( ಡಿಜಿಟಲ್) ಸಂಪಾದಕ ರಮೇಶ್ ಕುಮಾರ್‌ ನಾಯಕ್ ಮಾತನಾಡಿ, ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಪರಿಗಣಿಸಿದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇರುವುದು 90 ವರ್ಷಗಳ ಇತಿಹಾಸ. ಆದರೆ ರಾಮ ಜನ್ಮಭೂಮಿ ಹೋರಾಟಕ್ಕೆ 496 ವರ್ಷಗಳ ಇತಿಹಾಸವಿದೆ. ಇಷ್ಟಾಗಿಯೂ ಈ ಹೋರಾಟ ಮತ್ತು ಹಲವರ ತ್ಯಾಗದ ಕುರಿತ ಸಮಗ್ರ ಮಾಹಿತಿಯ ಪುಸ್ತಕಗಳು ಇಲ್ಲ. ಹೀಗಾಗಿ ಮಂದಿರ ಉದ್ಘಾಟನೆ ವೇಳೆ ಈ ಪುಸ್ತಕ ರಚಿಸಿದ್ದೇನೆ ಎಂದರು.

ಡೋಂಗಿ ಜಾತ್ಯತೀತತೆ ಮತ್ತು ವಿಳಂಬಿತ ನ್ಯಾಯದಾನದ ಫಲವಾಗಿ, ಸ್ವಾಂತಂತ್ರ್ಯ ಬಂದು 75 ವರ್ಷ ಕಳೆದರೂ ಹಿಂದೂಗಳಿಗೆ ನ್ಯಾಯ ಸಿಕ್ಕಿರಲಿಲ್ಲ. ಕೊನೆಗೂ ರಾಮ ಜನ್ಮಭೂಮಿ ಹಿಂದೂಗಳಿಗೆ ಮರಳಿ ಸಿಕ್ಕಿದೆ. ರಾಮ ಮಂದಿರ ಶತಕೋಟಿ ಭಾರತೀಯರ ಏಕತೆಯ ದ್ಯೋತಕ. ಭಾರತೀಯರೆಲ್ಲರೂ ಅದಕ್ಕಾಗಿ ಸಂಭ್ರಮಿಸುತ್ತಿದ್ದಾರೆ. ಮಂದಿರ ಉದ್ಘಾಟನೆ ಐತಿಹಾಸಿಕ ಎಂದವರು ಹೇಳಿದರು.

Mandiravalle Kattidevu- Davanagere Programme

ಸಮಾರಂಭದ ಆರಂಭದಲ್ಲಿ ಅನುಶ್ರೀ ಬಳಗದ ವೀಣಾ ಹೆಗಡೆ ತಂಡದಿಂದ ರಾಮನ ಹಾಡುಗಳ ಗಾಯನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್‌ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ. ಸುರೇಶ್‌ ಉಪಸ್ಥಿತರಿದ್ದರು.

ನಾಲ್ಕನೇ ಆವೃತ್ತಿಗೆ ಅಣಿಯಾದ ʻಮಂದಿರವಲ್ಲೇ ಕಟ್ಟಿದೆವು” ಕೃತಿ

‘ಮಂದಿರವಲ್ಲೇ ಕಟ್ಟಿದೆವು!’ ಕೃತಿ ಕೇವಲ ನಾಲ್ಕೇ ದಿನಗಳಲ್ಲಿ ಮೂರನೇ ಆವೃತ್ತಿ ಕಂಡಿದೆ. ನಾಲ್ಕನೇ ಆವೃತ್ತಿಗೆ ಅಣಿಯಾಗುತ್ತಿದೆ. ರಾಜ್ಯ ಮಾತ್ರವಲ್ಲ ದೇಶದ ನಾನಾ ಭಾಗಗಳಿಂದ ಪುಸ್ತಕಕ್ಕೆ ಬೇಡಿಕೆ ಬಂದಿದೆ. ಜತೆಗೆ ಈ ಕೃತಿಯನ್ನು ಅಮೆರಿಕದಿಂದಲೂ ಆರ್ಡರ್‌ ಮಾಡಿ ಕೊಂಡುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Rama Mandir: ರಾಮ ಮಂದಿರ ಆಂದೋಲನದ ಕಥನ ʻಮಂದಿರವಲ್ಲೇ ಕಟ್ಟಿದೆವು!ʼ ಕೃತಿ ಮೂರನೇ ಮುದ್ರಣದತ್ತ!

ನೀವೂ ಆರ್ಡರ್‌ ಮಾಡಬಹುದು

ಪ್ರತಿಗಳನ್ನು ಮುಂಗಡ ಕಾಯ್ದಿರಿಸಿದವರಿಗೆ ವಿಶೇಷ ರಿಯಾಯಿತಿಯಲ್ಲಿ ಪುಸ್ತಕವನ್ನು ಒದಗಿಸಲಾಗುತ್ತಿದ್ದು, ಅಂಚೆ ವೆಚ್ಚವು ಉಚಿತವಾಗಿದೆ. ಜ.22ರಂದು ನಡೆಯಲಿರುವ ರಾಮೋತ್ಸವದಂದು ಹಂಚಲು, ಸ್ನೇಹಿತರಿಗೆ ನೀಡಿ ಶುಭ ಕೋರಲು ಮತ್ತು ಅಂದಿನ ಕಾರ್ಯಕ್ರಮದ ಅತಿಥಿಗಳಿಗೆ ನೀಡಲು ಇದು ಅತ್ಯಂತ ಉಪಯುಕ್ತ ಕೃತಿಯಾಗಿದೆ. ಆಸಕ್ತರು ಮೊಬೈಲ್‌ ನಂ. 98450 31335ಗೆ ಸಂಪರ್ಕಿಸಿ, ಪ್ರತಿಯನ್ನು ತರಿಸಿಕೊಳ್ಳಬಹುದಾಗಿದೆ.

ಬೆಂಗಳೂರಿನಲ್ಲಿ ಶೀಘ್ರವೇ ಬಿಡುಗಡೆ, ಅಯೋಧ್ಯೆಯಲ್ಲೂ ಅನಾವರಣ

ಈ ಕೃತಿಯನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿಯೂ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಬೆಂಗಳೂರಿನಲ್ಲಿ ಕೂಡಾ ಕಾರ್ಯಕ್ರಮ ಆಯೋಜನೆಯಾಗುತ್ತಿದೆ ಎಂದು ಕೃತಿಯ ಲೇಖಕ ರಮೇಶ್‌ ಕುಮಾರ್‌ ನಾಯಕ್‌ ತಿಳಿಸಿದ್ದಾರೆ.

Exit mobile version