Site icon Vistara News

Leopard Trapped | ಹೊನ್ನಾಳಿಯಲ್ಲಿ ಚಿರತೆ ಸೆರೆ, ತಿ. ನರಸೀಪುರದಲ್ಲಿ ಚಿರತೆ ಕಂಡಲ್ಲಿ ಶೂಟ್‌ ಮಾಡಲು ಆರ್ಡರ್

Leopard Trapped

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಎರಡು ತಿಂಗಳುಗಳಿಂದ ಭಯ ಹುಟ್ಟಿಸಿ ಜನರ ನಿದ್ದೆಗೆಡಿಸಿದ್ದ ಹಾಗೂ ಅರಣ್ಯ ಅಧಿಕಾರಿಗಳಿಗೆ ತಲೆನೋವಾಗಿದ್ದ ಚಿರತೆ (Leopard Trapped) ಸೆರೆಯಾಗಿದೆ. ಹಲವು ಕಡೆ ಬೋನು ಇಟ್ಟಿದ್ದರೂ ತಪ್ಪಿಸಿಕೊಳ್ಳತ್ತಿದ್ದ ಚಿರತೆ ಕೊನೆಗೂ ಸೆರೆಸಿಕ್ಕಿದೆ.

ಹೊನ್ನಾಳಿ ತಾಲೂಕು ಅರಭಗಟ್ಟ ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಶುಕ್ರವಾರ ಸೆರೆ ಹಿಡಿಯಲಾಗಿದೆ. ಮುಸ್ಸೆನಹಾಳ್ ಗ್ರಾಮದಲ್ಲಿ ಎರಡು ಹಸುಗಳ ಮೇಲೆ ಚಿರತೆ ಮಾಡಿ ಕೊಂದಿತ್ತು. ಇದರಿಂದ ಈ ಭಾಗದ ಜನರು ಭಯಭೀತರಾಗಿದ್ದರು.
ಶಿವಮೊಗ್ಗ-ಹೊನ್ನಾಳಿ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳಾದ ಕೃಷ್ಣಮೂರ್ತಿ, ಅಂಜಲಿ, ಉಪ ವಲಯ ಅರಣ್ಯ ಅಧಿಕಾರಿ ಬರ್ಕತ್ ಅಲಿ, ವಲಯ ಅರಣ್ಯ ಅಧಿಕಾರಿ ಚೇತನ್ ಭಾಗಿಯಾಗಿದ್ದರು.

ತಿ.ನರಸೀಪುರದಲ್ಲಿ ಚಿರತೆ ಸೆರೆಗೆ 10 ವಿಶೇಷ ತಂಡ ರಚನೆ
ಮೈಸೂರು: ಚಿರತೆ ದಾಳಿಯಿಂದ ಯುವತಿ ಸಾವು ಪ್ರಕರಣದ ಹಿನ್ನೆಲೆಯಲ್ಲಿ ತಿ.ನರಸೀಪುರದಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ 10 ವಿಶೇಷ ತಂಡ ರಚನೆಗಳನ್ನು ಮಾಡಲಾಗಿದೆ. ಯುವತಿಯನ್ನು ಚಿರತೆ ಕೊಂದಿದ್ದ ಸ್ಥಳಕ್ಕೆ ಅರಣ್ಯ ಇಲಾಖೆಯ ಮೈಸೂರು ವೃತ್ತ ಸಿಸಿಎಫ್ ಮಾಲತಿ ಪ್ರಿಯಾ ನೇತೃತ್ವದಲ್ಲಿ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಚಿರತೆ ಸೆರೆಗೆ 10 ವಿಶೇಷ ತಂಡಗಳ ರಚನೆ ಮಾಡಲಾಗಿದ್ದು, ಒಂದು ತಂಡದಲ್ಲಿ ಶೂಟರ್ ಸೇರಿ 7 ಜನರಿದ್ದಾರೆ. ಚಿರತೆ ಕಂಡಲ್ಲಿ ಶೂಟ್‌ ಮಾಡಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿ ಹೆಜ್ಜೆ ಗುರುತಿನ ಆಧಾರದ ಮೂಲಕ ಚಿರತೆ ವಯಸ್ಸು ಸೇರಿ ಇತರ ಮಾಹಿತಿಯನ್ನು ಸಿಬ್ಬಂದಿ ಕಲೆಹಾಕುತ್ತಿದ್ದಾರೆ.

ದೊಡ್ಡಬಳ್ಳಾಪುರದ ಚನ್ನಾಪುರದಲ್ಲಿ ಚಿರತೆ ಕಾಟ

ಬೆಂಗಳೂರು ಗ್ರಾಮಾಂತರ: ಚಿರತೆ ಪದೇಪದೇ ದಾಳಿ ಮಾಡಿ ಕುರಿ, ಕೋಳಿ, ನಾಯಿ, ಬೆಕ್ಕು ಹಾಗೂ ಹಸುಗಳನ್ನು ಕೊಂದು ತಿನ್ನುತ್ತಿರುವುದು ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಚನ್ನಾಪುರ ಗ್ರಾಮದಲ್ಲಿ ಭಾರಿ ಆತಂಕ ಮೂಡಿದೆ. ಕಳೆದ 15 ದಿನಗಳಿಂದ ನಿರಂತರವಾಗಿ ಚಿರತೆ ದಾಳಿ ಮಾಡುತ್ತಿರುವುದರಿಂದ ಜಾನುವಾರುಗಳನ್ನು ಮೇಯಿಸಲು ಬೆಟ್ಟದ ಕಡೆಗೆ ಹೋಗಲು ಗ್ರಾಮಸ್ಥರು ಭಯಪಡುತ್ತಿದ್ದಾರೆ. ಗ್ರಾಮದಲ್ಲಿ ಮಂಗಳವಾರ ಚಿರತೆ ದಾಳಿಗೆ ಹಸು ಬಳಿಯಾಗಿದೆ. ನಂದಿಗಿರಿ-ದಿಬ್ಬಗಿರಿ-ಚನ್ನಗಿರಿ ತಪ್ಪಲಿನಲ್ಲಿ ಗ್ರಾಮವಿರುವ ಹಿನ್ನೆಲೆಯಲ್ಲಿ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದು, ಅರಣ್ಯ ಇಲಾಖೆ ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Leopard trapped | 15 ದಿನದ ಹಿಂದೆ 3 ಹಸುಗಳನ್ನು ಬೇಟೆಯಾಡಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು, ನೋಡಲು ಜನಸಾಗರ

Exit mobile version