Site icon Vistara News

Murder Case : ಗ್ರಾಮ ದೇವತೆಯ ಜಾತ್ರೆ ದಿನವೇ ಹೆಂಡತಿ ಬಲಿ ಕೊಟ್ಟ ಕುಡುಕ ಗಂಡ

Murder Crime Sense

ದಾವಣಗೆರೆ: ಊರಲ್ಲಿ ಗ್ರಾಮ ದೇವತೆಯ ಜಾತ್ರೆಯೆಂದು ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ. ಕುಡಿದ ಅಮಲಿನಲ್ಲಿ ಪತ್ನಿಯೊಂದಿಗೆ ಕಿರಿಕ್‌ ತೆಗೆದಿದ್ದ. ಗಲಾಟೆಯು ವಿಪರೀತಕ್ಕೆ ಹೋಗಿ ಪತ್ನಿಯ ಕೊಲೆಯಲ್ಲಿ (Murder Case) ಅಂತ್ಯವಾಗಿದೆ.

ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಗ್ರಾಮ ದೇವತೆಯ ಜಾತ್ರೆಯ ದಿನದಂದು ಮನೆಗೆ ಬಂಧು ಬಾಂಧವರ ಆಗಮಿಸಿದ್ದರು. ಹಬ್ಬದ ದಿನವೂ ಕುಡಿದು ಬಂದಿದ್ದಕ್ಕೆ ಅರ್ಪಿತಾ ಸಿಟ್ಟಾಗಿದ್ದಳು. ಬುಧವಾರ ರಾತ್ರಿ‌ ಕಂಠಪೂರ್ತಿ ಕುಡಿದು ಬಂದಿದ್ದ ಹನಮಂತ (28) ಪತ್ನಿ ಅರ್ಪಿತಾಳೊಂದಿಗೆ (24) ಜಗಳಕ್ಕೆ ನಿಂತಿದ್ದ.

ಕುಡಿದ ಅಮಲಿನಲ್ಲಿ ಹನಮಂತ ಪತ್ನಿ ಅರ್ಪಿತಾಳಿಗೆ ಹೊಡೆದಿದ್ದ. ಹೊಡೆದ ರಭಸಕ್ಕೆ ಕಿವಿಯಲ್ಲಿ ರಕ್ತ ಬಂದಿದ್ದು, ಕ್ಷಣಾರ್ಧದಲ್ಲೇ ಅರ್ಪಿತಾ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Murder Case: ಮಾಜಿ ಪ್ರೇಯಸಿಯ ರುಂಡ ಕಡಿದ ಪಾಗಲ್ ಪ್ರೇಮಿಗೆ ಜೀವಾವಧಿ ಶಿಕ್ಷೆ

ಪತ್ನಿಯ ಶೀಲ ಶಂಕಿಸಿ 12 ವರ್ಷದಿಂದ ಮನೆಯೊಳಗೆ ಕೂಡಿ ಹಾಕಿದ ಪಾಪಿ ಪತಿ!

ಮೈಸೂರು: ಪಾಪಿ ಪತಿಯೊಬ್ಬ ತನ್ನ ಪತ್ನಿಯ ನಡತೆ ಶಂಕಿಸಿ 12 ವರ್ಷದಿಂದ ಗೃಹಬಂಧನದಲ್ಲಿಟ್ಟಿರುವುದು ಪತ್ತೆಯಾಗಿದೆ (Crime News). 12 ವರ್ಷದಿಂದ ಅಜ್ಞಾತವಾಸದಲ್ಲಿರುವ ಗೃಹಿಣಿ ಸುಮಾ ಅವರನ್ನು ಪೊಲೀಸರ ಸಮ್ಮುಖದಲ್ಲಿ ಕತ್ತಲೆ ಕೋಣೆಯಿಂದ ಬಿಡಿಸಲಾಗಿದೆ.

ಎಚ್.ಡಿ.ಕೋಟೆ ತಾಲೂಕಿನ ಎಚ್.ಮಟಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಣ್ಣಾಲಯ್ಯ ಎಂಬಾತನಿಂದ ಈ ಕೃತ್ಯ ನಡೆದಿದೆ. ಈತ ಮನೆ ಬಾಗಿಲಿಗೆ ಮೂರು ಬೀಗ ಜಡಿದು ಪತ್ನಿಯನ್ನು ಬಂಧನದಲ್ಲಿ ಇರಿಸಿದ್ದ. ಮೂಲತಃ ಎಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದ ಸುಮಾ ಬಂಧನಕ್ಕೆ ಒಳಗಾದ ಮಹಿಳೆಯಾಗಿದ್ದಾಳೆ.

12 ವರ್ಷದ ಹಿಂದೆ ಸಣ್ಣಾಲಯ್ಯನನ್ನು ವಿವಾಹವಾಗಿದ್ದ ಸುಮಾ ಈತನಿಗೆ 3ನೇ ಪತ್ನಿಯಾಗಿದ್ದು, ಸುಮಾಗೆ ಇಬ್ಬರು ಮಕ್ಕಳಿದ್ದಾರೆ. ಈ ಹಿಂದಿನ ಇಬ್ಬರು ಪತ್ನಿಯರು ಸಣ್ಣಾಲಯ್ಯನ ಕಾಟದಿಂದ ಬೇಸತ್ತು ಪತಿಯಿಂದ ದೂರಾಗಿದ್ದರು.

ಪತ್ನಿ ಬೇರೆ ಯಾರ ಜತೆಗೂ ಮಾತನಾಡದಂತೆ ಜಾಗರೂಕತೆ ವಹಿಸುತ್ತಿದ್ದ ಸಣ್ಣಾಲಯ್ಯ ಮನೆಯ ಕಿಟಕಿಗಳನ್ನೂ ಮುಚ್ಚಿ ಭದ್ರಪಡಿಸಿದ್ದ. ಕೋಣೆಯ ಒಳಗೆ ಶೌಚಾಲಯ ಇಲ್ಲದ ಕಾರಣ ಬಕೆಟ್ ಇರಿಸಿ ರಾತ್ರಿ ವೇಳೆ ಮಲ, ಮೂತ್ರ ಹೊರಗೆ ಸಾಗಿಸುತ್ತಿದ್ದ. ಇದರ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಈ ಬಗ್ಗೆ ಹಲವಾರು ಬಾರಿ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆದಿದ್ದರೂ ತಪ್ಪು ತಿದ್ದಿಕೊಳ್ಳದೇ ತನ್ನ ಚಾಳಿಯನ್ನು ಸಣ್ಣಾಲಯ್ಯ ಮುಂದುವರಿಸಿದ್ದ. ವಿಷಯ ತಿಳಿದು ವಕೀಲ ಸಿದ್ದಪ್ಪಾಜಿ ಸಾಂತ್ವನ ಕೇಂದ್ರದ ಜಶೀಲ ಎಎಸ್‌ಐ ಸುಭಾನ್ ಮತ್ತಿತರರ ತಂಡ ಸುಮಾ ಮನೆಗೆ ಭೇಟಿ ನೀಡಿದ್ದು, ಮನೆಯ ಬೀಗ ಮತ್ತು ಬಾಗಿಲು ಮುರಿದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ರಾತ್ರೋರಾತ್ರಿ ಸುಮಾ ಮತ್ತು ಮಕ್ಕಳ ರಕ್ಷಣೆ ಮಾಡಿ ಮಹಿಳೆ ಒಪ್ಪಿಗೆಯಂತೆ ಆಕೆಯ ತವರು ಮನೆಯಲ್ಲಿ ಆಶ್ರಯ ಕೊಡಿಸಲಾಗಿದೆ. ಪತಿ ಸಣ್ಣಾಲಯ್ಯ ತಲೆ ತಪ್ಪಿಸಿಕೊಂಡಿದ್ದಾನೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version