ಹರಿಹರ: ಬಿಜೆಪಿಯ ರಾಜ್ಯಸಭಾ ಸದಸ್ಯ ಲೆಹರ್ಸಿಂಗ್ ಅವರು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭಾನುವಾರ ಭೇಟಿ ನೀಡಿ ಜಗದ್ಗುರುಗಳಾದ ಶ್ರೀ ವಚನಾನಂದ ಸ್ವಾಮೀಜಿ ಅವರ ಜೊತೆ ಚರ್ಚೆ ನಡೆಸಿದರು. ಬಿಜೆಪಿ ಹೈಕಮಾಂಡ್ ಪ್ರತಿನಿಧಿಯಾಗಿ ಹಲವಾರು ವಿಚಾರಗಳನ್ನು ಶ್ರೀಗಳ ಜತೆ ಲೆಹರ್ಸಿಂಗ್ (Lehar Singh Siroya) ಅವರು ಚರ್ಚಿಸಿದರು.
ಈ ವೇಳೆ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರವಾಲ್ ಅವರು ಜಗದ್ಗುರುಗಳವರ ಜತೆ ದೂರವಾಣಿಯಲ್ಲಿ ಮಾತನಾಡಿದರು. ಅಲ್ಲದೇ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಜಗದ್ಗುರುಗಳವರ ಜತೆ ಚರ್ಚೆ ನಡೆಸಿದರು.
ರಾಧಾಮೋಹನ್ ಅಗರವಾಲ್ ಹಾಗೂ ದೇವೇಂದ್ರ ಫಡ್ನವೀಸ್ ಅವರ ಜೊತೆಗಿನ ದೂರವಾಣಿ ಚರ್ಚೆಯ ವೇಳೆ ಶ್ರೀಗಳು, ಬಿಜೆಪಿ ಪಕ್ಷದಿಂದ ಪಂಚಮಸಾಲಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಲ್ಲಿ ಆಗಿರುವ ಅನ್ಯಾಯವನ್ನು ಪ್ರಬಲವಾಗಿ ಪ್ರಸ್ತಾಪ ಮಾಡಿದ್ದಾರೆ. ಇದನ್ನು ಮನಗಂಡಿರುವ ಬಿಜೆಪಿ ವರಿಷ್ಠರು, ಮುಂಬರುವ ದಿನಗಳಲ್ಲಿ ಜನಪ್ರತಿನಿಧಿಗಳ ಆಯ್ಕೆ ಹಾಗೂ ಪಕ್ಷದ ಹುದ್ದೆಗಳನ್ನು ನೀಡುವಲ್ಲಿ ನಮ್ಮ ಪಂಚಮಸಾಲಿ ಸಮುದಾಯವನ್ನು ಪರಿಗಣಿಸುವುದಾಗಿ ಅವರು ಭರವಸೆ ನೀಡಿದರು.
ಇದನ್ನೂ ಓದಿ | Karnataka Drought: ಬರ ಪರಿಹಾರ ಬಗ್ಗೆ ಸುಳ್ಳು ಹೇಳಿದ ಕಾಂಗ್ರೆಸ್; ಯುಪಿಎ ಕೊಟ್ಟಿದ್ದು ಅತಿ ಕಡಿಮೆ ಎಂದ ಎಚ್‌ಡಿಕೆ
ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಹಾಗೂ ಚಂದ್ರಶೇಖರ್ ಪೂಜಾರ್ ಉಪಸ್ಥಿತರಿದ್ದರು.