ತುಮಕೂರು : “ಜಗ್ಗೇಶ್ ಬಗ್ಗೆ ಈ ಮೊದಲು ನಾನು ಏಕ ವಚನದಲ್ಲಿ ಮಾತನಾಡುತ್ತಿದ್ದೆ. ಈಗ ಅವರು ರಾಜ್ಯಸಭಾ ಸದಸ್ಯರಾದ ಬಳಿಕ ಬಹುವಚನದಲ್ಲಿ ಮಾತನಾಡಬೇಕು. ಜಗ್ಗೇಶ್ ರಾಜ್ಯಸಭೆಗೆ ಅಚ್ಚರಿಯ ಅಭ್ಯರ್ಥಿಯಾಗಿ ಆಯ್ಕೆಯಾದುದರ ಹಿಂದೆ ರಾಘವೇಂದ್ರ ಸ್ವಾಮಿಯ ಕೃಪಟಾಕ್ಷ ಇದೆ. ಹಾಗಾಗಿ ನಾನು ಜಗ್ಗೇಶಣ್ಣ ಎಂದು ಕರೆಯಬೇಕು.ʼʼ
ಇದು ಕಂದಾಯ ಸಚಿವ ಆರ್. ಅಶೋಕ್ ಅವರು ಜಗ್ಗೇಶ್ ಅವರ ಬಗ್ಗೆ ಬಣ್ಣಿಸಿದ ಪರಿ. ತುರುವೇಕೆರೆ ತಾಲೂಕಿನ ಮಾಯಸಂದ್ರದ ಸರಕಾರಿ ಹೈಸ್ಕೂಲ್ ಗ್ರೌಂಡ್‌ನಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ “ಬಿಜೆಪಿಗೆ ನಾನೇ ಅವರನ್ನು ಕರೆ ತಂದಿದ್ದು. ಅವರನ್ನು ಎಂಎಲ್‌ಸಿ ಮಾಡಿ ಕರ್ನಾಟಕದಲ್ಲಿಯೇ ಇರಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದೆವು, ಆದರೆ ಆಗಲಿಲ್ಲ. ಜಗ್ಗೇಶ್‌ಗೆ ಒಂದು ಸಲ ಎಂಪಿ ಆಗಬೇಕು ಎಂಬ ಬಯಕೆ ಇತ್ತು. ನನ್ನ ಬಳಿ ಅದನ್ನು ಹೇಳಿಕೊಂಡಿದ್ದರು. ಅದರಂತೆ ಅವರು ಈಗ ಸಂಸದರಾಗಿದ್ದಾರೆʼʼ ಎಂದರು.
ಇದನ್ನೂ ಓದಿ | ಬೆಂಗಳೂರು ಅಭಿವೃದ್ಧಿಗೆ ಸಿಎಂ ಬೊಮ್ಮಾಯಿ ಒತ್ತು; ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ
“ಜಡೆ ಮಾಯಸಂದ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುವಂತೆ ಜಗ್ಗೇಶ್ ಅವರು ಕೇಳಿಕೊಂಡಿದ್ದರು. ಹಾಗಾಗಿ ಅವರ ಊರಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ. 1 ಲಕ್ಷ ಜನರು ಅರ್ಜಿ ಕೊಟ್ಟಿದ್ದಾರೆ. ಅದರಲ್ಲಿ 50 ಸಾವಿರ ಜನರಿಗೆ ಸವಲತ್ತು ತಲುಪಿಸಿದ್ದೇನೆ. ವಾರಕ್ಕೊಮ್ಮೆ ತಾಲ್ಲೂಕು ಕಚೇರಿಗೆ ಡಿಸಿ ಭೇಟಿ ಮಾಡಬೇಕು. ಅದನ್ನು ಕಡ್ಡಾಯ ಮಾಡಿದ್ದೇನೆ.
ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಈಗ ಶಕ್ತಿಶಾಲಿ ಆಗುತ್ತಿದೆ. ಈ ಭಾಗದ ಬಹಳಷ್ಟು ಜನ ಬಿಜೆಪಿಗೆ ಬರುತಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ಶಾಸಕರು ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ಮಾಡುತ್ತಿದ್ದೇವೆ. ಹಳೇ ಮೈಸೂರು ಪ್ರಾಂತ್ಯದ ಕಾಂಗ್ರೆಸ್-ಜೆಡಿಎಸ್ ನ ಶಾಸಕರು ಬಿಜೆಪಿಗೆ ಸೇರುತ್ತಾರೆ. ೧೦-೧೨ ಜನ ಶಾಸಕರು ಬಿಜೆಪಿಗೆ ಬರುತ್ತಾರೆ. ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪನವರ ಆಶೀರ್ವಾದದಿಂದ ಬಿಜೆಪಿ ಮತ್ತೆ ಕರ್ನಾಟಕದಲ್ಲಿ ಗೆಲುವಿನ ಬಾವುಟ ಹಾರಿಸುತ್ತದೆʼʼ ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಜಗ್ಗೇಶ್ ಕೂಡ ಮಾತನಾಡಿ ತಮ್ಮ ಹುಟ್ಟೂರಿನಲ್ಲಿ ಕಾರ್ಯಕ್ರಮ ಆಯೋಜನೆಗೆ ಅವಕಾಶ ಕಲ್ಪಿಸಿಕೊಟ್ಟ ಆರ್. ಅಶೋಕ್‌ಗೆ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್. ಬಸವರಾಜ್, ಶಾಸಕರಾದ ಮಸಾಲೆ ಜಯರಾಮ್, ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಎಸ್ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಪಾಲ್ಗೊಂಡಿದ್ದರು.
ಇದನ್ನೂ ಓದಿ | ಆಯ್ಕೆಗೂ ಮುನ್ನವೇ ಫೀಲ್ಡಿಗಿಳಿದ ಜಗ್ಗೇಶ್: ಬೆಂಗಳೂರಲ್ಲೆ 50 ಸಾವಿರ ಫೇಕ್ ಪೇಜ್ ಇವೆಯಂತೆ!