Site icon Vistara News

Karnataka Election:‌ ಮತದಾರರ ಪಟ್ಟಿಯಿಂದ ಬಳ್ಳಾರಿಯ 1.17 ಲಕ್ಷ ಜನರ ಹೆಸರು ಡಿಲೀಟ್, 33 ಸಾವಿರ ಯುವಕರ ಸೇರ್ಪಡೆ

Karnataka Election

#image_title

ಬಳ್ಳಾರಿ: ಜಿಲ್ಲೆಯ ಐದು ತಾಲೂಕುಗಳಲ್ಲಿ 1.17 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಹೊಸದಾಗಿ 33 ಸಾವಿರ ಹೊಸ ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ (Karnataka Election) ತಿಳಿಸಿದ್ದಾರೆ.

ನಗರದ ಮರ್ಚೇಡ್ ಹೋಟೆಲ್ ಸಭಾಂಗಣದಲ್ಲಿ ಬಳ್ಳಾರಿ ಪತ್ರಕರ್ತರ ಒಕ್ಕೂಟ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯ ಕಂಪ್ಲಿ ಮತ್ತು ಸಂಡೂರಿನಲ್ಲಿ ಅತಿ ಹೆಚ್ಚು ಮತದಾರರನ್ನು ಮತ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದರು.

ಮತದಾರರ ಪಟ್ಟಿಯಿಂದ ಡಿಲೀಟ್

ಮತದಾರರ ಪಟ್ಟಿಯನ್ನು ಪರಿಶೀಲನೆ ವೇಳೆ ಎರೆಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಇರುವುದು ಕಂಡು ಬಂದಿದೆ. ಕೆಲವರು ನಾಲ್ಕೈದು ಕಡೆ ಸಹ ಇದ್ದರು. ಎಲ್ಲವನ್ನು ಪರಿಶೀಲನೆ ನಡೆಸಿಯೇ ಡಿಲೀಟ್ ಪ್ರಕ್ರಿಯೆ ನಡೆಸಲಾಗಿದೆ. ಸುಮಾರು 50 ಸಾವಿರದಷ್ಟು ಮತದಾರರು ಎರಡು ಕಡೆ ಮತದಾರರ ಪಟ್ಟಿಯಲ್ಲಿ ಕಂಡು ಬಂದಿದೆ. 20 ಸಾವಿರದಷ್ಟು ಜನರು ಮೃತಪಟ್ಟಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ ಎಂದರು.

33 ಸಾವಿರ ಹೊಸ ಮತದಾರರ ಸೇರ್ಪಡೆ

ಮತದಾರರ ಪಟ್ಟಿಯಿಂದ ಹೆಸರು ತೆಗೆಯುವಾಗ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಅತ್ಯಂತ ನಿಗಾವಹಿಸಿ ಕ್ರಮ ಕೈಗೊಳ್ಳಲಾಗಿದೆ. ಡಿಲೀಟ್ ವೇಳೆ ಆಯಾ ಗ್ರಾಮ ಪಂಚಾಯಿತಿ ಸದಸ್ಯರ ಜತೆ ಸಭೆ ನಡೆಸಿ ಅವರ ಗಮನಕ್ಕೆ ತರಲಾಗಿದೆ. ನಗರ ಪ್ರದೇಶಗಳಲ್ಲಿ ಕೂಡ ಪ್ರಚುರ ಪಡಿಸಿಯೇ ಡಿಲಿಟ್ ಕ್ರಮ ವಹಿಸಲಾಗಿದೆ. ಇದೇ ವೇಳೆ ಹೊಸದಾಗಿ 33 ಸಾವಿರ ಯುವ ಮತದಾರರನ್ನು ಸಹ ಸೇರ್ಪಡೆ ಮಾಡಲಾಗಿದೆ, ಏ.1ರಂದು 18 ವರ್ಷವಾಗುವವರ ಅರ್ಜಿಯನ್ನು ಪಡೆಯಲಾಗಿದೆ, ಇಂತಹ ಸುಮಾರು 3-4 ಅರ್ಜಿಗಳು ಪೆಂಡಿಂಗ್ ಇವೆ ಎಂದರು.

ಶೇ.82ರಷ್ಟು ಮತದಾನದ ಗುರಿ

ಕಳೆದ ವರ್ಷ ಶೇ.72ರಷ್ಟು ಮತದಾನವಾಗಿತ್ತು. ಈ ವರ್ಷ ಕನಿಷ್ಟ ಶೇ.82ರಷ್ಟು ಮತದಾನದ ಗುರಿ‌ ಹೊಂದಲಾಗಿದೆ. 642 ಕಡೆಗಳಲ್ಲಿ 1100 ಮತಗಟ್ಟೆಗಳಿವೆ. ವಿದ್ಯುತ್, ಫ್ಯಾನ್ ಅಳವಡಿಕೆ, ಶೌಚಾಲಯ ಮತ್ತಿತರ ದುರಸ್ತಿ ಕಾರ್ಯ ನಡೆದಿವೆ. ಮತದಾನದ ವೇಳೆ ಬಿಸಿಲಿನಿಂದ ರಕ್ಷಣೆ ಮಾಡಲು ಎಲ್ಲ ಮತಗಟ್ಟೆಗಳಲ್ಲಿ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ, ಕುಡಿವ ನೀರಿನ ಪೂರೈಕೆ ಮಾಡಲಾಗುವುದು. ಪಿಂಕ್ ಮತಕೇಂದ್ರಗಳನ್ನು ನಿರ್ಮಿಸುವ ಕುರಿತು ಯೋಚಿಸಲಾಗಿದೆ ಎಂದರು.

ಇದನ್ನೂ ಓದಿ | Panchamasali Reservation: ಪಂಚಮಸಾಲಿ ಮೀಸಲಾತಿ ಪೂರ್ಣ ವರದಿ ಸದ್ಯಕ್ಕಿಲ್ಲ: ಜಯಪ್ರಕಾಶ್‌ ಹೆಗ್ಡೆ ಸ್ಪಷ್ಟನೆ

ವಿಶೇಷ ಚೇತನರು ಮತ್ತು ವೃದ್ಧರಿಗೆ ಅಂಚೆ ಮತ

ವಿಶೇಷ ಚೇತನರಿಗೆ ಮತ್ತು 80 ವರ್ಷ ಮೇಲ್ಪಟ್ಟ, ನಡೆದಾಡಲು ಕಷ್ಡವಾಗುವ ಮತದಾರರಿಗೆ ಅಂಚೆ ಮತ ವ್ಯವಸ್ಥೆ ಮಾಡಲಾ ಗುತ್ತಿದೆ. ಸಾಧ್ಯವಾದಷ್ಟು ಮತಕೇಂದ್ರಕ್ಕೆ ಆಗಮಿಸಿ ಹಕ್ಕು ಚಲಾಯಿಸುವಂತೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಇನ್ನು ಮತಕೇಂದ್ರಕ್ಕೆ ಬರುವ ಮತದಾರರಿಗೆ ವಾಹನ
ಸೌಕರ್ಯ ಇರಲಿದೆ. ವೃದ್ಧರಿಗೆ ವ್ಹೀಲ್ ಚೇರ್‌ಗಳು ಇರಲಿವೆ ಎಂದರು.

ಡಿಎಂಎಫ್ ಹಣ ಬಳಕೆ

ಜಿಲ್ಲಾ ಖನಿಜ ನಿಧಿಯಿಂದ ಮೂರು ವರ್ಷದ ಅವಧಿಯಲ್ಲಿ 1593 ಕೋಟಿ ರೂ.ವೆಚ್ಚದ 1295 ಕಾಮಗಾರಿ ಕೈಗೆತ್ತಿ ಕೊಂಡಿದೆ. 542 ಕೋಟಿ ರೂ. ಖರ್ಚಾಗಿದೆ, ಡಿಎಂಎಫ್ ಹಣ ಸಂಡೂರಿನಲ್ಲಿ ಹೆಚ್ಚಿನ ಬಳಕೆಯಾಗುತ್ತಿದೆ, ಬಹುಗ್ರಾಮ ಕುಡಿಯುವ ನೀರಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. 5800 ಕೋಟಿ ನಾಲ್ಕು ಜಿಲ್ಲೆಗಳ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ, ಸಂಡೂರು ತಾಲೂಕಿನ ನೇರವಾಗಿ ಭಾದಿತರಿಗೆ ನಿವೇಶನ ನೀಡಿ ಮತ್ತು ಮನೆ ಕಟ್ಟುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ. ಡಿಎಂಎಫ್, ಎಚ್ ಕೆ ಮತ್ತು ಕೆಎಂಆರ್ ಇಸಿ ಅನುದಾನ ಬರುತ್ತೆ, ಹಣದ ಬಳಕೆಗೆ ಹೆಚ್ಚಿನ ಒತ್ತು ನೀಡಲು ಹೊಸ ಪಿಡ್ಲಬ್ಯುಡಿ ಮತ್ತು ಪಿಆರ್ ಇಡಿ ಎರಡು ವಿಭಾಗ ಕೊಡಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ ಎಂದರು.

Exit mobile version