ಬೆಂಗಳೂರು: ಡಿಸಿಇಟಿ-24 (DCET 2024) ತೆಗೆದುಕೊಂಡು, ಮೊದಲ ಸುತ್ತಿನಲ್ಲಿ ಎಂಜಿನಿಯರಿಂಗ್ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಚಾಯ್ಸ್ ಆಯ್ಕೆ ಮಾಡಲು ಆ.8ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಮಳೆ ಕಾರಣಕ್ಕೆ ಶುಲ್ಕ ಪಾವತಿ ಇತ್ಯಾದಿ ಸಮಸ್ಯೆಗಳು ಎದುರಾಗಿವೆ ಎಂದು ಅಭ್ಯರ್ಥಿಗಳು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ದಿನಾಂಕ ವಿಸ್ತರಿಸಲಾಗಿದೆ. ಈ ಕಾರಣಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದು, ಇಚ್ಛೆ ದಾಖಲಿಸಲು ಮತ್ತಷ್ಟು ದಿನ ಅವಕಾಶ ನೀಡಲಾಗುವುದು. ಸದ್ಯದಲ್ಲೇ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಮೊದಲ ಸುತ್ತಿನಲ್ಲಿ ಚಾಯ್ಸ್ – 1 ಮತ್ತು 2 ಅನ್ನು ಆಯ್ಕೆ ಮಾಡಿಕೊಂಡವರು ಆ.8ರೊಳಗೆ ಚಲನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಶುಲ್ಕ ಪಾವತಿಗೆ ಆ.9ರವರೆಗೆ ಅವಕಾಶ ಇರುತ್ತದೆ. ಆ.10ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಟಾಗೂ ಅವಕಾಶ
ಡಿಸಿಇಟಿ-24ಗೆ ಅರ್ಜಿ ಸಲ್ಲಿಸಿ, ದಾಖಲಾತಿ ಪೂರ್ಣಗೊಳಿಸಿರುವ ಆರ್ಕಿಟೆಕ್ಚರ್ ಅಭ್ಯರ್ಥಿಗಳು, ನಾಟಾ ಅಂಕಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸದೇ ಇದ್ದಲ್ಲಿ ಆ.8ರಂದು ಖುದ್ದು ಕೆಇಎಗೆ ಬಂದು ಸಲ್ಲಿಸಿ, ರಾಂಕ್ ಪಡೆಯಬಹುದು. ನಂತರ 2ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ | Bangalore Hotels: ಬೆಂಗಳೂರಲ್ಲಿ ಇನ್ಮುಂದೆ ಮಧ್ಯರಾತ್ರಿ 1 ಗಂಟೆವರೆಗೆ ತೆರೆದಿರಲಿವೆ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್
ನೀಟ್ ರೋಲ್ ನಂಬರ್ ದಾಖಲಿಸಲು ಅವಕಾಶ, ಲಿಂಕ್ ಪಡೆಯಲು ಹೀಗೆ ಮಾಡಿ
ಬೆಂಗಳೂರು: ಈಗಾಗಲೇ ಯುಜಿಸಿಇಟಿಗೆ ಅರ್ಜಿ ಸಲ್ಲಿಸಿರುವ ಹಾಗೂ ನೀಟ್ ಪರೀಕ್ಷೆಯಲ್ಲಿ (NEET 2024) ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್‌ಅನ್ನು ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೋಮವಾರ ಲಿಂಕ್ ಬಿಡುಗಡೆ ಮಾಡಲಿದೆ. ಆಗಸ್ಟ್ 5ರ ಬೆಳಗ್ಗೆ 11ಕ್ಕೆ ಕೆಇಎ ವೆಬ್‌ಸೈಟ್‌ನಲ್ಲಿ (KEA Website) ಯುಜಿ ನೀಟ್-2024 ಲಿಂಕ್ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 7 ರಂದು ಬೆಳಗ್ಗೆ 11ರವರೆಗೆ ರೋಲ್ ನಂಬರ್ ದಾಖಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಅಭ್ಯರ್ಥಿಗಳು ದಾಖಲಿಸುವ ರೋಲ್ ನಂಬರ್‌ಅನ್ನು ಎನ್‌ಟಿಎ ಡೇಟಾದೊಂದಿಗೆ ತಾಳೆ ಮಾಡಿ ಯುಜಿ ನೀಟ್ ಅರ್ಹತೆ ಪಡೆದಿದ್ದಲ್ಲಿ ಅರ್ಜಿ ನಮೂನೆ ಪ್ರತಿ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ನಂತರ ವೇರಿಫಿಕೇಷನ್ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಆ.7ರಿಂದ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ
ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವವರು ಇನ್ನೂ ಅರ್ಜಿ ಸಲ್ಲಿಸದೇ ಇದ್ದಲ್ಲಿ ಅಂತಹವರು ಆ.7ರಿಂದ 9ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್ ಸೈಟ್‌ಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಜುಲೈ 26ರಂದು ನೀಟ್ ಯುಜಿ 2024 ಪರೀಕ್ಷೆಯ ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸಿದೆ. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗಾಗಿ ಮೇ 5ರಂದು ನಡೆದಿದ್ದ ನೀಟ್ ಯುಜಿ ಪರೀಕ್ಷೆಯ ಫಲಿತಾಂಶವು ಜೂನ್ 4ರಂದು ಪ್ರಕಟವಾಗಿತ್ತು. ಆದರೆ, ಇದಾದ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಹಲವು ಆರೋಪ ಕೇಳಿಬಂದ ಕಾರಣ ಸುಪ್ರೀಂ ಕೋರ್ಟ್ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿತ್ತು. ಕೊನೆಗೆ ಮರು ಪರೀಕ್ಷೆ ಬೇಡ ಎಂದಿದ್ದ ನ್ಯಾಯಾಲಯವು, ಪರಿಷ್ಕೃತ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿತ್ತು.