ಚಿಕ್ಕಬಳ್ಳಾಪುರ: ಅನುಮಾನಾಸ್ಪದವಾಗಿ ತಾಯಿ- ಇಬ್ಬರು ಹೆಣ್ಣುಮಕ್ಕಳ ಮೃತ ದೇಹಗಳು ಕೆರೆಯಲ್ಲಿ ಪತ್ತೆಯಾಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಕೆರೆಯಲ್ಲಿ (Dead Body Found) ಮೃತದೇಹಗಳು ಪತ್ತೆಯಾಗಿವೆ.
ಮಿಟ್ಟೇಮರಿ ಕೆರೆಯಲ್ಲಿ ಮೃತದೇಹಗಳು ತೇಲುತ್ತಿದ್ದವು. ಇದನ್ನೂ ಕಂಡೊಡನೆ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಮಿಸಿದ ಪೊಲೀಸರು ಕೆರೆಯಲ್ಲಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತಳನ್ನು ಯಗವಕೋಟೆ ನಿವಾಸಿ ರಾಧ (32) ಎಂದು ಗುರುತಿಸಲಾಗಿದೆ.
ಕೌಟುಂಬಿಕ ಕಲಹಕ್ಕೆ ಬೇಸತ್ತು ರಾಧ, ಪೂರ್ವಿತಾ (4) ಹಾಗು ಒಂದೂವರೆ ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಾಗೇಪಲ್ಲಿ ಮೂಲದ ರಾಧಳನ್ನು ಚಿಂತಾಮಣಿ ತಾಲೂಕಿನ ಯಗವಕೋಟೆಯ ಮಲ್ಲಿಕಾರ್ಜುನ ಎಂಬುವವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.
ಸದ್ಯ ಪೊಲೀಸರು ಮೂರು ಮೃತದೇಹಗಳನ್ನು ಮರಣೋತ್ತರ ಪರೀಕ್ಷಗಾಗಿ ಬಾಗೇಪಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಾಗೇಪಲ್ಲಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಸ್ಕೂಟರ್‌ಗೆ ಬಸ್ ಡಿಕ್ಕಿ; ಪತ್ನಿ-ಮಗುವಿನ ಕಣ್ಣೇದುರಿಗೆ ನರಳಾಡಿ ಪ್ರಾಣಬಿಟ್ಟ ಪತಿ
ದೊಡ್ಡಬಳ್ಳಾಪುರ: ಸ್ಕೂಟರ್‌ನಲ್ಲಿ ಪತ್ನಿ- ಮಗುವನ್ನು ಕೂರಿಸಿಕೊಂಡು ಬರುವಾಗ ಹಿಂದಿನಿಂದ ಬಂದ ಖಾಸಗಿ ಬಸ್‌ವೊಂದು ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಮೂವರಲ್ಲಿ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವಾರನ ಪತ್ನಿ-ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.
ಮೇಲಿನನಾಯಕರಂಡಹಳ್ಳಿ ನಿವಾಸಿ ಪ್ರಕಾಶ್ ನಾಯಕ (38) ಮೃತ ದುರ್ದೈವಿ. ಪ್ರಕಾಶ್ ತಮ್ಮ ಪತ್ನಿ ಹಾಗೂ ಮಗು ಜತೆಗೆ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್ ಹಿಂದಿನಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪ್ರಕಾಶ್ ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡ ಪ್ರಕಾಶ್ ನರಳಾಡಿ ಪತ್ನಿ, ಮಗುವಿನ ಎದುರೇ ಜೀವ ಬಿಟ್ಟಿದ್ದಾರೆ.
ಪ್ರಕಾಶ್ ಅವರ ಪತ್ನಿ-ಮಗು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮನೆಯ ಆಧಾರ ಸ್ತಂಭವನ್ನೇ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಅಪಘಾತದ ನಂತರ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಪಘಾತದಲ್ಲಿ ಪೀಸ್ ಪೀಸ್ ಆಗಿದ್ದ ಸ್ಕೂಟರ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ