ಬೆಂಗಳೂರು: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಸುಮಾರು 35 ವರ್ಷ ವಯಸ್ಸಿನ ವ್ಯಕ್ತಿಯ ಮೃತದೇಹವು (Dead Body Found ) ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡಿದ ನಶೆಯಲ್ಲಿ ಬೆಟ್ಟದಿಂದ ಬಿದ್ದು ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ವಾರದ ಹಿಂದೆ ಮೃತಪಟ್ಟಿರುವ ಸಾಧ್ಯತೆ ಇದ್ದು, ಒಂದು ಕೈ ಮತ್ತು ಕಾಲನ್ನು ಕಾಡು ಪ್ರಾಣಿಗಳು ಎಳೆದೊಯ್ದಿವೆ.
ಸದ್ಯ ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಸಿದ್ದಾರೆ. ಮೃತ ವ್ಯಕ್ತಿ ಯಾರು? ಈ ಸಾವು ಆಕಸ್ಮಿಕವೋ ಅಥವಾ ಕೊಲೆಯೊ ಎಂಬುದರ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.
ಬೊಲೆರೋ ವಾಹನ ಪಲ್ಟಿ; ಐವರು ಗಂಭೀರ, 25 ಮಂದಿಗೆ ಗಾಯ
ಬಳ್ಳಾರಿಯ ಸಿರುಗುಪ್ಪ ತಾಲೂಕಿನ ಹಚ್ಚೋಳ್ಳಿ ಗ್ರಾಮದ ಬಳಿ ಬೊಲೆರೋ ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ ಐವರ ಮಹಿಳೆಯರ ಸ್ಥಿತಿ ಗಂಭೀರವಾಗಿದ್ದು, 25 ಜನರು ಗಾಯಗೊಂಡಿದ್ದಾರೆ. ಮಹಿಳಾ ಕಾರ್ಮಿಕರನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಇನ್ನು ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಿರುಗುಪ್ಪ ತಾಲೂಕು ಕೇಂದ್ರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಆಂಬ್ಯುಲೆನ್ಸ್
ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಪಟ್ಟಣದ ಬೈಚಾಪುರ ರಸ್ತೆಯಲ್ಲಿ ಚಲಿಸುತ್ತಿದ್ದ ಆಂಬ್ಯುಲೆನ್ಸ್‌ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರೋಗಿಯನ್ನು ಪಿಕಪ್ ಮಾಡಲು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್ ಮೊದಲು ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ನಂತರ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಪಲ್ಟಿ ಹೊಡೆದಿದೆ. ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ