Site icon Vistara News

Cauvery Dispute:‌ ಕಾವೇರಿ ಕಿಚ್ಚು; ಸತ್ತ ಇಲಿಯನ್ನು ಬಾಯಿ ಬಳಿ ಇಟ್ಟು ಪ್ರತಿಭಟನೆ ನಡೆಸಿದ ರೈತರು

tamil nadu

tamil nadu

ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ(Cauvery Dispute) ಗಲಾಟೆ ದಿನ ಕಳೆದಂತೆ ಕಾವೇರುತ್ತಿದೆ. ಈ ವಿಚಾರ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಒಡಕು ಮೂಡುವಂತೆ ಮಾಡಿದೆ. ಇತ್ತ ಕರ್ನಾಟಕದ ರೈತರು ನೀರು ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರೆ ಅತ್ತ ತಮಿಳುನಾಡಿನ ಕೃಷಿಕರು ಸತ್ತ ಇಲಿಯನ್ನು ತಮ್ಮ ಬಾಯಿಯ ಬಳಿ ಇಟ್ಟುಕೊಂಡು ವಿಚಿತ್ರ ರೀತಿಯಲ್ಲಿ ಹೋರಾಟಕ್ಕೆ ಇಳಿದಿದ್ದಾರೆ.

ತಮಿಳಿನಾಡಿನ ತಿರುಚಿರಪಳ್ಳಿಯಲ್ಲಿ ರೈತರು ಈ ರೀತಿಯ ವಿಚಿತ್ರ ಪ್ರತಿಭಟನೆಗೆ ಇಳಿದು ರಾಜ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಾವೇರಿ ನೀರು ಒದಗಿಸಬೇಕೆಂದು ಕರ್ನಾಟಕ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಸದ್ಯ ಈ ವಿಡಿಯೊ ವೈರಲ್‌ ಆಗಿದೆ. ಕರ್ನಾಟಕವು ಕಾವೇರಿ ನೀರನ್ನು ತಡೆಹಿಡಿಯುವುದನ್ನು ಮುಂದುವರಿಸಿದರೆ, ಭತ್ತದ ಕೃಷಿಗೆ ನೀರಿನ ಕೊರತೆ ಕಾಡಲಿದೆ. ಇದರಿಂದ ರೈತರು ಬದುಕುಳಿಯಲು ಇಲಿ ಮಾಂಸವನ್ನು ಸೇವಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎನ್ನುವುದನ್ನು ಸಂಕೇತಿಸುವಂತೆ ಇಲಿಯ ಮೃತದೇಹವನ್ನು ಕೈಯಲ್ಲಿಟ್ಟು ಪ್ರತಿಭಟನೆ ನಡೆಸಲಾಗಿದೆ.

ಇದೇ ಮೊದಲ ಸಲ ಅಲ್ಲ

ವಿಶೇಷವೆಂದರೆ ರೈತರು ಈ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಇದು ಮೊದಲ ಸಲವೇನಲ್ಲ. 2017ರಲ್ಲಿ 65 ವರ್ಷದ ಚಿನ್ನಗೊಡಂಗಿ ಪಳನಿಸ್ವಾಮಿ ಎನ್ನುವ ರೈತರೊಬ್ಬರು ಜೀವಂತ ಇಲಿಯೊಂದನ್ನು ಹಲ್ಲಿನ ನಡುವೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದರು. ಆ ಮೂಲಕ ತಮಿಳುನಾಡಿನ ರೈತರ ಸಮಸ್ಯೆಯನ್ನು ಸರ್ಕಾರದ ಗಮನ ಸೆಳೆಯಲು ಯತ್ನಿಸಿದ್ದರು.

“ಪರಿಸ್ಥಿತಿ ಸುಧಾರಿಸದಿದ್ದರೆ ನಾವು ಇಲಿಗಳನ್ನು ಸೇವಿಸ ಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬ ಸಂದೇಶವನ್ನು ನಾನು ನನ್ನ ಸಹವರ್ತಿಗಳೊಂದಿಗೆ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದೆ” ಎಂದು ಚಿನ್ನಗೊಡಂಗಿ ಪಳನಿಸ್ವಾಮಿ ತಿಳಿಸಿದ್ದರು.

ಅದಕ್ಕೂ ಮೊದಲು 2016ರಲ್ಲಿ, ತಮಿಳುನಾಡಿನ ತಿರುಚ್ಚಿಯಲ್ಲಿ ಸುಮಾರು 30 ರೈತರ ಗುಂಪು ಸತ್ತ ಇಲಿಗಳನ್ನು ಬಾಯಿ ಬಳಿ ಹಿಡಿದುಕೊಂಡು ಪ್ರತಿಭಟನೆ ನಡೆಸಿತ್ತು. ನೀರಿನ ಬಿಕ್ಕಟ್ಟು ಭತ್ತದ ಕೃಷಿಯ ಮೇಲೆ ತೀವ್ರ ಪರಿಣಾಮ ಬೀರಿದೆ ಮತ್ತು ಸರ್ಕಾರ ಕೂಡಲೇ ಕಾರ್ಯ ಪ್ರವೃತ್ತವಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಆರ್ಥಿಕ ಸಂಕಷ್ಟದ ಪರಿಣಾಮವಾಗಿ ಇಲಿ ಮಾಂಸವನ್ನೂ ರೈತರು ಸೇವಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು ಎಂಬುದನ್ನು ಆ ಗುಂಪು ವಿವರಿಸಿತ್ತು.

ಇದನ್ನೂ ಓದಿ: Cauvery Dispute : 3000 ಕ್ಯೂಸೆಕ್‌ ನೀರು ಬಿಡುಗಡೆ ಆದೇಶವನ್ನೂ ಪಾಲಿಸುತ್ತಾ ಸರ್ಕಾರ?; ಸಿಎಂ ಹೇಳಿದ್ದೇನು?

ರಾಜ್ಯಕ್ಕೆ ಹೊಡೆತ

ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee) ಮಂಗಳವಾರ ನಡೆಸಿದ ಮಹತ್ವದ ಸಭೆಯಲ್ಲಿ ಕರ್ನಾಟಕಕ್ಕೆ ಇನ್ನೊಂದು ಹೊಡೆತ ಬಿದ್ದಿದೆ. ಸೆ. 28ರಿಂದ ಅಕ್ಟೋಬರ್‌ 15ರವರೆಗೆ ಪ್ರತಿದಿನ 3,000 ಕ್ಯೂಸೆಕ್‌ ನೀರು ಬಿಡುವಂತೆ ಆದೇಶ ನೀಡಿದೆ. ಸೆಪ್ಟೆಂಬರ್‌ 13ರಂದು ಕಾವೇರಿ ನೀರು ನಿಯಂತ್ರಣ ಸಮಿತಿ 15 ದಿನಗಳವರೆಗೆ ಪ್ರತಿದಿನ 5,000 ಕ್ಯೂಸೆಕ್‌ ನೀರು ಬಿಡುವಂತೆ ಸೂಚಿಸಿತ್ತು. ಸೆ. 18ರಂದು ನಡೆದ ಪ್ರಾಧಿಕಾರದ ಸಭೆ ಅದನ್ನು ಅನುಮೋದಿಸಿತ್ತು. ಸೆಪ್ಟೆಂಬರ್‌ 21ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಈ ಆದೇಶವನ್ನು ಎತ್ತಿ ಹಿಡಿಯಲಾಗಿತ್ತು. ಇದೀಗ ಮಂಗಳವಾರ (ಸೆ. 26) ನಡೆದ ಸಭೆಯಲ್ಲಿ ಕರ್ನಾಟಕದ ಮಂಡಿಸಿದ ವಾದವನ್ನು ಪರಿಗಣಿಸಿದ ಸಮಿತಿ ನೀರೇ ಬಿಡುವುದಿಲ್ಲ ಎಂಬ ಮನವಿಯನ್ನು ಒಪ್ಪಲಿಲ್ಲ. ಐದು ಸಾವಿರ ಕ್ಯೂಸೆಕ್‌ ಬದಲಿಗೆ ಮೂರು ಸಾವಿರ ಕ್ಯೂಸೆಕ್‌ಗೆ ಇಳಿಸಿ ಎಂದು ಸೂಚನೆ ನೀಡಿದೆ.

ಇನ್ನಷ್ಟು ದೇಶದ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Exit mobile version