ಕೊಪ್ಪಳ: ಕಳೆದ ಸೋಮವಾರ (ಜೂ.5) ಇಲ್ಲಿನ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು (Contaminated water) ಸೇವಿಸಿ 9 ತಿಂಗಳ ಹಸುಳೆ ಸೇರಿ 60 ವರ್ಷದ ವೃದ್ಧೆ ಮೃತಪಟ್ಟಿದ್ದರು. ಇದೀಗ ಬಸರಿಹಾಳ ಗ್ರಾಮದಲ್ಲಿ ಕಾಲರಾ ಸೋಂಕು (Cholera disease) ಹೆಚ್ಚಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಆರೋಗ್ಯ ಸುರಕ್ಷತಾ ಹಿತದೃಷ್ಟಿಯಿಂದ ಮೂರು ದಿನಗಳ ರಜೆ ಘೋಷಣೆ (holiday announced) ಮಾಡಲಾಗಿದೆ.
ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿಗಳ ಆದೇಶದಂತೆ ಶಾಲಾ ಶಿಕ್ಷಣ ಇಲಾಖೆಯು ಜೂನ್ 7 ರಿಂದ 9 ರವರೆಗೆ ರಜೆಯನ್ನು ಘೋಷಿಸಿದೆ. ಇನ್ನು ಈ ರಜಾ ಅವಧಿಯನ್ನು ಮುಂಬರುವ ಶನಿವಾರ ಹಾಗೂ ಭಾನುವಾರಗಳಂದು ಶಾಲೆ ನಡೆಸಿ ರಜಾ ಅವಧಿಯನ್ನು ಸರಿದೂಗಿಸಲು ಶಾಲೆಗಳಿಗೆ ಸೂಚಿಸಲಾಗಿದೆ.
ವಿಬ್ರಿಯೊ ಕಾಲೆರೆ ಎಂಬ ಬ್ಯಾಕ್ಟೀರಿಯಾದಿಂದ ಕಲುಷಿತ ನೀರು ಮತ್ತು ಆಹಾರದ ಮೂಲಕ ಇದು ಮಾನವರಿಗೆ ಹರಡುತ್ತದೆ. ಕಾಲರಾ ಕರುಳಿನ ಸೋಂಕು ಆಗಿದ್ದು, ತೀವ್ರವಾದ ಅತಿಸಾರ ಭೇದಿ, ವಾಂತಿ ಇದರ ಪ್ರಮುಖ ಲಕ್ಷಣ. ಉಳಿದಂತೆ ಈ ರೋಗ ಹೆಚ್ಚಿನ ಲಕ್ಷಣಗಳು ತೋರಿಸಿಕೊಳ್ಳುವುದಿಲ್ಲ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ತೀವ್ರ ನಿರ್ಜಲೀಕರಣಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಮುನ್ನೆಚ್ಚರಿಕಾ ಕ್ರಮಗಳೇನು?
-ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು.
-ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು.
-ದೇಹವು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು.
-ವಾಂತಿ, ಭೇದಿಯಿಂದ ದೇಹದೊಳಗಿನ ನೀರಿನ ಅಂಶ ಹೊರಬರುತ್ತದೆ. ಹೀಗಾಗಿ ನೀರಿಗೆ ಎಲೆಕ್ಟ್ರೋಲೈಟ್ ಬೆರಸಿ ಕುಡಿಯಿರಿ.
-ವಾಂತಿ, ಭೇದಿ ಕಾಣಿಸಿಕೊಂಡ ಕೂಡಲೇ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಿ
-ಕಾಲರಾ ಬ್ಯಾಕ್ಟಿರಿಯಾ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾದ ಗ್ರಾಮಸ್ಥರು
ಕಲುಷಿತ ನೀರು ಸೇವನೆಯಿಂದ ಹಲವರು ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಕನಕಗಿರಿ, ಗಂಗಾವತಿಯ ಆಸ್ಪತ್ರೆಗಳಲ್ಲಿ ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸಮಸ್ಯೆ ಕಂಡು ಬಂದರೂ ಗ್ರಾಮ ಪಂಚಾಯತಿ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಬಸರಿಹಾಳ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆಯ ಗಮನಕ್ಕೆ ತಂದಿಲ್ಲ. ಹೀಗಾಗಿ ಮುನ್ನೆಚರಿಕೆ ಕ್ರಮ ವಹಿಸದಿರುವುದು ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Murder Case: ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಪತ್ನಿಯ ಕೊಂದ; ತಾನೂ ನೇಣಿಗೆ ಕೊರಳೊಡ್ಡಿದ
ಕನಕಗಿರಿ ಶಾಸಕ ಹಾಗೂ ಸಚಿವರಾಗಿರುವ ಶಿವರಾಜ ತಂಗಡಗಿ, ತಾಲೂಕಾಧಿಕಾರಿಗಳ ಜತೆಗೆ ಸಭೆ ನಡೆಸಿದ್ದರು. ಗ್ರಾಮದ ಜನರಿಗೆ ಕುಡಿಯುವ ನೀರು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಲು ಎಚ್ಚರಿಕೆ ನೀಡಿದ್ದರು. ಆದರೆ ಮರುದಿನವೇ ಇಬ್ಬರು ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದರು. ಗ್ರಾಮದ ಬಹುತೇಕ ಕುಡಿಯುವ ನೀರಿನ ನಲ್ಲಿಗಳು ಚರಂಡಿ ಬಳಿ ಇದ್ದು, ಮಿಶ್ರಣಗೊಳ್ಳುತ್ತಿವೆ. ಈ ನೀರು ಸೇವಿಸಿ ಜನರು ಅಸ್ವಸ್ಥಗೊಳ್ಳುತ್ತಿದ್ದಾರೆ ಎನ್ನಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ