ರಾಯಚೂರು: ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಮದಲ್ಲಿ ನರೇಗಾ (MGNREGA) ಕೆಲಸ ಮಾಡುವ ವೇಳೆ ಹೃದಯಾಘಾತ (Heart Attack) ಸಂಭವಿಸಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ಸಿದ್ದಣ್ಣ (40) ನರೇಗಾದಲ್ಲಿ ಮೃತಪಟ್ಟ ಕಾರ್ಮಿಕ. ಬುಧವಾರ (ಮೇ 24) ಬೆಳಗ್ಗೆ ನರೇಗಾ ಯೋಜನೆ ಅಡಿ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕರಿಗುಡ್ಡ ಕೆರೆಯ ಹೂಳು ಎತ್ತುವುದರಲ್ಲಿ ಸಿದ್ದಣ್ಣ ತೊಡಗಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರಿಗೆ ಉಪಚರಿಸಲು ನೋಡಲಾಯಿತಾದರೂ ಅಲ್ಲೇ ಮೃತಪಟ್ಟಿದ್ದಾರೆ. ಬಿಸಿಲಿನ ತಾಪಕ್ಕೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗಿದ್ದು, ಇದೂ ಸಹ ಹೃದಯಾಘಾತಕ್ಕೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.
ಓವರ್‌ಟೇಕ್ ಮಾಡುವಾಗ ಬಸ್‌ನಡಿ ಸಿಲುಕಿ ಬೈಕ್ ಸವಾರ ಸಾವು,
ಬಾಗಲಕೋಟೆ: ಬೈಕ್‌ನಲ್ಲಿ ಓವರ್ ಟೇಕ್ ಮಾಡಲು ಹೋಗಿ ಬಸ್ ಚಕ್ರಕ್ಕೆ ಸಿಲುಕಿ ಯುವಕ ಮೃತಪಟ್ಟು, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ (Bagalkot News) ಜಿಲ್ಲೆಯ ಬಾದಾಮಿ ತಾಲೂಕಿನ ಕುಟುಕನಕೇರಿ ಗ್ರಾಮದ ಬಳಿ ನಡೆದಿದೆ.
ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮ ಮಂಜಯ್ಯ ಹಿರೆಮಠ (30) ಮೃತ ಯುವಕ. ಈತ ಬೈಕ್‌ನಲ್ಲಿ ತೆರಳುತ್ತಿದ್ದಾಗ ಓವರ್‌ಟೇಕ್ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಹುಬ್ಬಳ್ಳಿ ಮಾರ್ಗದಿಂದ ಬರುತ್ತಿದ್ದ ಬಸ್ ಚಕ್ರದಡಿ ಸಿಲುಕಿದ್ದಾನೆ. ಈ ವೇಳೆ ಆತನ ತಲೆಯ ಮೇಲೆ ಬಸ್ ಹರಿದಿದೆ. ಹೀಗಾಗಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಇದೇ ವೇಳೆ ಮತ್ತೊಬ್ಬ ಯುವಕನಿಗೂ ಗಂಭೀರ ಗಾಯಗಳಾಗಿವೆ.
ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಸಾವು
ಕೊಪ್ಪಳ: ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದ ನವಲಿ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಯಲಬುರ್ಗಾ ತಾಲೂಕಿನ ರಮೇಶ ದಮ್ಮೂರು (35) ಮೃತ. ಈತ ಸೋಮಸಾಗರಕ್ಕೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಕನಕಗಿರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Murder case: ಡಾನ್ ಆಗೋ ಗೀಳಿನಿಂದ ಅಮಾಯಕನನ್ನು ಇರಿದು ಕೊಂದ ಮಾಜಿ ಶಾಸಕನ ಪುತ್ರ!
ಹುಬ್ಬಳ್ಳಿಯಲ್ಲಿ ಜಿಮ್ ತರಬೇತುದಾರ ಆತ್ಮಹತ್ಯೆ
ಹುಬ್ಬಳ್ಳಿ: ಜಿಮ್ ತರಬೇತುದಾರರೊಬ್ಬರು ಮನೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ನಗರದ ವಿದ್ಯಾನಗರದ ಶಿರೂರು ಪಾರ್ಕ್ ಬಳಿ ಬೆಳಕಿಗೆ ಬಂದಿದೆ. ಆರೆಂಜ್ ಜಿಮ್ ಮಾಲೀಕ ಹಾಗೂ ತರಬೇತುದಾರ ಜಿತೇಂದ್ರ ಶೀಗಿಹಳ್ಳಿ (48) ಮೃತ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಿತೇಂದ್ರ ಶೀಗಿಹಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಕುಟುಂಬಸ್ಥರು ಬಾಗಿಲು ಮುರಿದು ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.