ಬೆಳಗಾವಿ: ಕಿತ್ತೂರು ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವರೂ ಆಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಡಿ.ಬಿ.ಇನಾಮ್ದಾರ್ (74) ಇನ್ನಿಲ್ಲ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ (Death news).
ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಡಿ.ಬಿ.ಇನಾಮ್ದಾರ್ (DB Inamdar) ಅವರು ಕಳೆದೊಂದು ತಿಂಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಾರಿ ಅವರ ಸೊಸೆ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಲು ಮುಂದಾಗಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ನೀಡಿರಲಿಲ್ಲ.
ಒಂಬತ್ತು ಬಾರಿ ಸ್ಪರ್ಧೆ, ಐದು ಬಾರಿ ಗೆಲುವು
ಡಿ.ಬಿ. ಇನಾಮ್ದಾರ್ ಅವರು ಕಿತ್ತೂರು ಕ್ಷೇತ್ರದಿಂದ ಒಂಬತ್ತು ಬಾರಿ ಸ್ಪರ್ಧಿಸಿ 5 ಬಾರಿ ಗೆಲುವು ಸಾಧಿಸಿದ್ದಾರೆ. ಇನಾಮ್ದಾರ್ ಅವರು 1983ರಲ್ಲಿ ಜನತಾ ಪಕ್ಷದಿಂದ ಕಿತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾಗಿದ್ದರು. 1994ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿ ಇಂದಿನವರೆಗೂ ಅದೇ ಪಕ್ಷದಲ್ಲಿ ಮುಂದುವರಿದಿದ್ದಾರೆ.
ಒಟ್ಟು 9 ಚುನಾವಣೆ ಎದುರಿಸಿ ಐದು ಬಾರಿ ಗೆದ್ದಿದ್ದ ಅವರು ಎಸ್.ಎಂ ಕೃಷ್ಣ, ಎಸ್. ಬಂಗಾರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದರು. 1983, 1985ರಲ್ಲಿ ಜನತಾ ಪಕ್ಷದಿಂದ, 1994, 1999, 2013ರ ಕಾಂಗ್ರೆಸ್ ಪಕ್ಷದಿಂದ ಗೆಲುವು ಪಡೆದಿದ್ದರು.
1989, 2004, 2008 ಹಾಗೂ 2018ರ ಚುನಾವಣೆಯಲ್ಲಿ ಸೋಲನುಭವಿಸಿದ್ದ ಡಿ.ಬಿ ಇನಾಮ್ದಾರ್ ಅವರು, 2023ರ ಚುನಾವಣೆಯಲ್ಲಿ ಕಿತ್ತೂರು ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎನ್ನುವ ಆಸೆ ಹೊಂದಿದ್ದರು. ಆದರೆ, ಅಷ್ಟು ಹೊತ್ತಿಗೆ ಆರೋಗ್ಯ ಕೈಕೊಟ್ಟಿತ್ತು.
ಅನಾರೋಗ್ಯದ ಕಾರಣದಿಂದ ಸೊಸೆ ಸೊಸೆ ಲಕ್ಷ್ಮೀ ಇನಾಮ್ದಾರ್ ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಆದರೆ, ಕೊನೆಗೆ ಕಾಂಗ್ರೆಸ್ ಪಕ್ಷ ಬಾಬಾಸಾಹೇಬ್ ಪಾಟೀಲ್‌ಗೆ ಟಿಕೆಟ್ ನೀಡಿತ್ತು.
ಇದರಿಂದ ಅಸಮಾಧಾನಗೊಂಡ ಡಿ.ಬಿ.ಇನಾಮದಾರ್ ಕುಟುಂಬ ಸಾರಾಸಗಟಾಗಿ ಕಾಂಗ್ರೆಸ್‌ಗೆ ರಾಜೀನಾಮೆ ಘೋಷಿಸಿತ್ತು. ಒಂದು ಹಂತದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದ ಡಿ.ಬಿ.ಇನಾಮ್ದಾರ್ ಸೊಸೆ ಲಕ್ಷ್ಮೀ ಇನಾಮ್ದಾರ್ ಅವರು ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.