Site icon Vistara News

Death News : ಕೋಟ ಡಾ. ಶಿವರಾಮ ಕಾರಂತರ ಆಪ್ತ ಸಹಾಯಕಿಯಾಗಿದ್ದ ಮಾಲಿನಿ ಮಲ್ಯ ನಿಧನ

Manini mallya

#image_title

ಉಡುಪಿ: ಜ್ಞಾನಪೀಠ ವಿಜೇತ ಸಾಹಿತಿ ಕೋಟ ಶಿವರಾಮ ಕಾರಂತರ ಕೊನೆಗಾಲದವರೆಗೂ ಆಪ್ತ ಸಹಾಯಕಿಯಾಗಿದ್ದ, ತಾನೇ ಸ್ವತಃ ಕಾದಂಬರಿಗಾರ್ತಿಯಾಗಿದ್ದ ಮಾಲಿನಿ ಮಲ್ಯ ನಿಧನರಾಗಿದ್ದಾರೆ (Death News). ಅವರಿಗೆ 72 ವರ್ಷವಾಗಿತ್ತು.

ಕೋಟ ಡಾ. ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಅಧ್ಯಕ್ಷೆಯಾಗಿದ್ದ ಅವರು ದೀರ್ಘ ಕಾಲದ ಅಸೌಖ್ಯದ ಬಳಿಕ ಬೆಂಗಳೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಕೆಲವು ಕಾಲದಿಂದ ಪಾರ್ಕಿನ್ಸನ್ ರೋಗ ದಿಂದ ಬಳಲುತ್ತಿದ್ದಾರೆ. ಸಾಲಿಗ್ರಾಮದಲ್ಲಿದ್ದ ಮಾಲಿನಿ ಮಲ್ಯ ಅವರನ್ನು ಬಂಧುಗಳು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು.

ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಉದ್ಯೋಗಿಯಾಗಿದ್ದ ಮಾಲಿನಿ ಮಲ್ಯ ಅವರು ಶಿವರಾಮ ಕಾರಂತರನ್ನು ಕೊನೆಗಾಲದಲ್ಲಿ ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು. ಕಾರಂತರ ಆರೋಗ್ಯದಿಂದ ಹಿಡಿದು ಅವರ ಎಲ್ಲ ಕೃತಿಗಳ ವಿಚಾರದಲ್ಲೂ ಸಾಕಷ್ಟು ಜಾಗೃತಿಯನ್ನು ಹೊಂದಿದ್ದರು ಮಾಲಿನಿ ಮಲ್ಯ.

ಸಾಲಿಗ್ರಾಮದಲ್ಲಿ ಕಾರಂತ ಸ್ಮೃತಿ ಭವನ ನಿರ್ಮಿಸಿ ವರ್ಷವೂ ಕಾರಂತ ಕಾರ್ಯಕ್ರಮ ಆಯೋಜನೆ‌ ಮಾಡುತ್ತಿದ್ದರು. ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿದ ಕೀರ್ತಿ ಮಾಲಿನಿ ಮಲ್ಯ ಅವರಿಗೆ ಸಲ್ಲುತ್ತದೆ. ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಅವರು ಕೊಡುಗೆ ನೀಡಿದ್ದಾರೆ.

ಮೂಲತಃ ಉಡುಪಿಯವರಾದ ಸ್ವತಃ ಕಾದಂಬರಿಗಾರ್ತಿಯಾಗಿರುವ ಮಾಲಿನಿ ಮಲ್ಯ ಅವರು ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ) ಬರೆದಿದ್ದಾರೆ.

ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), , ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ, ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ಲೋಕ, ಬಾಲಪ್ರಪಂಚ-3’ ಅವರು ರಚಿಸಿದ ಕೃತಿಗಳು.

ಮಾಲಿನಿ ಮಲ್ಯ ಅವರಿಗೆ ಬೆಂಗಳೂರಿನ ಶಾಶ್ವತಿ ಸಂಸ್ಥೆ ’ಸದೋದಿತ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಿದೆ.

ಶಿವರಾಮ ಕಾರಂತರು ತಮ್ಮ ಕೃತಿಗಳು ಮತ್ತು ಬ್ಯಾಲೆ ಮತ್ತಿತರ ಪ್ರದರ್ಶನ ಕಲೆಗಳ ಹಕ್ಕುಸ್ವಾಮ್ಯವನ್ನು ಮಾಲಿನಿ ಮಲ್ಯ ಅವರಿಗೆ ನೀಡಿದ್ದರು. ಕಾರಂತರ ನಿಧನಾನಂತರ ಅವರ ಕೃತಿಗಳಿಗೆ ಸಂಬಂಧಿಸಿ ಎದುರಾದ ಎಲ್ಲ ಕಾನೂನು ಸಮರಗಳನ್ನು ಮಾಲಿನಿ ಮಲ್ಯ ಅವರೇ ಎದುರಿಸಿದ್ದಾರೆ.

ಇದನ್ನೂ ಓದಿ : Death News: ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಅನುಯಾಯಿ ಕಲ್ಲೂರು ನಾರಾಯಣಪ್ಪ ಗೌಡ ನಿಧನ

Exit mobile version