ಮೈಸೂರು: ಮಾರ್ಚ್ 11ರಂದು ನಿಧನರಾದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ ಅವರ ಪತ್ನಿ ವೀಣಾ ಧ್ರುವನಾರಾಯಣ ಅವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪತಿಯ ಸಾವಿನ ಕೊರಗಿನಿಂದಲೂ ಬಳಲಿದ್ದರು. ಎರಡೂ ಸೇರಿಕೊಂಡು ಅವರು ಜೀವನ ಪಯಣ ಮುಗಿಸಿದ್ದಾರೆ ಎಂದು ತಿಳಿದುಬಂದಿದೆ. ಅವರು ಮೈಸೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದ ವೀಣಾ ಅವರಿಗೆ 50 ವರ್ಷ ಆಗಿತ್ತು.
ಸಜ್ಜನ ನಾಯಕ, ದೂರದರ್ಶಿತ್ವ ಹೊಂದಿದ್ದ ಅಜಾತಶತ್ರು ಧ್ರುವನಾರಾಯಣ ಅವರು ಮಾರ್ಚ್ 11ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅದಾಗಿ ತಿಂಗಳ ಒಳಗೇ ಆ ಮನೆಯಲ್ಲಿ ಮತ್ತೊಂದು ಮೃತ್ಯು ಸಂಭವಿಸಿದೆ. ಧ್ರುವ ನಾರಾಯಣ ಅವರ ಸಾವಿಗೆ ಇಡೀ ನಾಡು ಕಂಬನಿ ಮಿಡಿದಿತ್ತು. ಅಕಾಲಿಕ ಸಾವು ಅವರ ಕುಟುಂಬವನ್ನಂತೂ ಇನ್ನಷ್ಟು ಕಂಗೆಡಿಸಿತ್ತು. ಮೊದಲೇ ಸಣ್ಣ ಪ್ರಮಾಣದ ಅನಾರೋಗ್ಯ ಎದುರಿಸುತ್ತಿದ್ದ ವೀಣಾ ಅವರು ಪತಿಯ ಸಾವಿನ ಸಂದರ್ಭದಲ್ಲಿ ತುಂಬ ನೋವು ಅನುಭವಿಸಿದ್ದರು. ಅದಾದ ಬಳಿಕ ಸಾಕಷ್ಟು ಮಾನಸಿಕವಾಗಿ ಕುಗ್ಗಿದ್ದರು. ಇದೀಗ ಅವರ ಸಾವೇ ಸಂಭವಿಸಿಬಿಟ್ಟಿದೆ.
ಧ್ರುವ ನಾರಾಯಣ ಅವರ ಪುತ್ರ ದರ್ಶನ್ ಅವರು ತಂದೆಯನ್ನು ಕಳೆದುಕೊಂಡೇ ಸಾಕಷ್ಟು ನೋವಿನಲ್ಲಿದ್ದರು. ಇದೀಗ ತಾಯಿಯ ಮರಣ ಅವರನ್ನು ಇನ್ನಷ್ಟು ಕಂಗೆಡಿಸಲಿದೆ. ದರ್ಶನ್ ಅವರಿಗೆ ನಂಜನಗೂಡು ಕ್ಷೇತ್ರ ಟಿಕೆಟ್ ನೀಡಲಾಗಿದ್ದು, ಅವರು ಚುನಾವಣಾ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಈ ವೇಳೆ ಮನೆಯಲ್ಲಿ ಸಾವು ಸಂಭವಿಸಿದೆ.
ಆಸ್ಪತ್ರೆಗೆ ಅಭಿಮಾನಿಗಳ ದೌಡು, ನಾಯಕರಿಂದ ಸಾಂತ್ವನ
ವೀಣಾ ಧ್ರುವನಾರಾಯಣ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಶಾಸಕರಾದ ಅನಿಲ್ ಚಿಕ್ಕಮಾದು, ಸಾ.ರಾ. ಮಹೇಶ್, ಇತರೆ ನಾಯಕರು ಆಸ್ಪತ್ರೆಗೆ ಧಾವಿಸಿದ್ದು, ಧ್ರುವ ನಾರಾಯಣ್ ಪುತ್ರರಿಗೆ ಧೈರ್ಯ ಹೇಳುತ್ತಿದ್ದಾರೆ. ದರ್ಶನ್‌ಗೆ ರಾಜ್ಯ ನಾಯಕರೂ ಕರೆ ಮಾಡುತ್ತಿದ್ದಾರೆ. ಇತ್ತ ಮೈಸೂರಿನ ಖಾಸಗಿ ಆಸ್ಪತ್ರೆಗೆ ಅಭಿಮಾನಿಗಳು, ಕಾರ್ಯಕರ್ತರು ಕೂಡಾ ದೌಡಾಯಿಸುತ್ತಿದ್ದಾರೆ.
ನಾಳೆ ಅಂತ್ಯಕ್ರಿಯೆ
ವೀಣಾ ಧ್ರುವನಾರಾಯಣ ಅವರ ಮೃತದೇಹದ ಅಂತ್ಯಕ್ರಿಯೆ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ಶನಿವಾರ ನಡೆಯಲಿದೆ ಎಂದು ಪುತ್ರ ದರ್ಶನ್ ಹೇಳಿದ್ದಾರೆ. ಇಂದು ಸಂಜೆ 4 ಗಂಟೆಯ ನಂತರ ಹೆಗ್ಗವಾಡಿ ಗ್ರಾಮಕ್ಕೆ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗುತ್ತಿದೆ..
ಇದನ್ನೂ ಓದಿ : Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ