Site icon Vistara News

Death of a monkey | ಪ್ರೀತಿಯಿಂದ ಸಾಕಿದ ಕೋತಿಯ ಸಾವಿಗೆ ಮನೆ ಮಾತ್ರವಲ್ಲ ಇಡೀ ಗ್ರಾಮವೇ ಕಣ್ಣೀರು ಹಾಕಿತು!

death of a monkey

ಕಾರವಾರ: ಪ್ರಾಣಿಗಳು ಮನುಷ್ಯರೊಂದಿಗೆ ಬೆರೆತಾಗ ಮನುಷ್ಯ ಕೂಡಾ ಅವುಗಳನ್ನು ತಮ್ಮಂತೆಯೇ ನೋಡಿಕೊಳ್ಳುವುದು ಮಾನವನ ಸ್ವಭಾವ. ಸಾಕಿದ ಪ್ರಾಣಿಗಳು ಕಾಣೆಯಾದಾಗ, ಮೃತಪಟ್ಟಾಗ ಮನೆಯ ಸದಸ್ಯನನ್ನೇ ಕಳೆದುಕೊಂಡ ಅನುಭವವನ್ನು ಕೆಲವರು ಹೊಂದುತ್ತಾರೆ. ಇಂಥಹುದೇ ಒಂದು ಪ್ರಾಣಿ- ಮಾನವನ ಅವಿನಾಭಾವ ಸಂಬಂಧಕ್ಕೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಟ್ಟಣ ಸಾಕ್ಷಿಯಾಗಿದೆ.

ಕಳೆದ ಎರಡು ಮೂರು ವರ್ಷಗಳಿಂದ ಸಾಕಿದ್ದ ಕೋತಿ ಮರಿಯೊಂದು ಅನಾರೋಗ್ಯದಿಂದ ಮೃತಪಟ್ಟಿದ್ದಕ್ಕೆ ಮನೆ ಮಂದಿ, ಗ್ರಾಮಸ್ಥರೆಲ್ಲ ಕಣ್ಣೀರ ವಿದಾಯ ತೋರಿದ್ದಾರೆ. ಮನೆಯ ಸದಸ್ಯನನ್ನು ಕಳೆದುಕೊಂಡಂತೆ, ಊರಿನ ಮಗನೊಬ್ಬ ದೂರವಾದಂತೆ ಮನೆಯವರು, ಗ್ರಾಮಸ್ಥರು ಅತ್ತಿದ್ದಾರೆ. ಮರಳಿ ಬಾ ಎಂದು ಭಾವುಕರಾಗಿ ಕರೆದಿದ್ದಾರೆ.

ದಾಂಡೇಲಿ ಪಟ್ಟಣದ ಕಂಜರಪೇಟೆ ಗಲ್ಲಿಯ ರೆಹೋನೆತ್ ಎನ್ನುವವರ ಮನೆಯಲ್ಲಿ ಈ ಕೋತಿ ಮರಿ ವಾಸವಿರುತ್ತಿತ್ತು. ಕೋತಿಗೆ ರಾಮು ಎಂದು ಹೆಸರನ್ನ ಇಡಲಾಗಿತ್ತು. ಕಂಜರಪೇಟೆ ಗಲ್ಲಿಯಲ್ಲಿ ಓಡಾಡಿಕೊಂಡು, ಗ್ರಾಮಸ್ಥರೊಂದಿಗೂ ಅನ್ಯೋನ್ಯತೆಯಿಂದಿದ್ದ ರಾಮು, ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ.

ಕಳೆದೆರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಮುಗೆ ಸ್ಥಳೀಯ ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯಲು ಶಿಫಾರಸು ಮಾಡಿದ್ದರು. ಆದರೆ ಹುಬ್ಬಳ್ಳಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಕೋತಿ ಮರಿ ಕೊನೆಯುಸಿರೆಳೆದಿದೆ. ಕೋತಿ ರಾಮುಗೆ ಮನೆ ಮಂದಿ, ಗ್ರಾಮಸ್ಥರು ಭಾವುಕ ವಿದಾಯ ಹೇಳಿದ್ದಾರೆ. ಧಾರ್ಮಿಕ ವಿಧಿ ವಿಧಾನಗಳ ಮೂಲಕ ಕೋತಿಯ ಅಂತ್ಯಸಂಸ್ಕಾರ ನಡೆಸಲಾಗಿದ್ದು, ಈ ವೇಳೆ ಮಕ್ಕಳು, ಮಹಿಳೆಯರು, ಹಿರಿಯರೆನ್ನದೇ ಎಲ್ಲರೂ ಕಣ್ಣೀರು ಹಾಕಿದ್ದಾರೆ.

ಕೋತಿಯ ಸಾವಿಗೆ ಮಮ್ಮಲ ಮರುಗಿದ ಮಕ್ಕಳು

ಗಾಯಗೊಂಡಾಗ ಆರೈಕೆ ಮಾಡಿದ್ದ ಜನರು: ಕೋತಿ ರಾಮು ಎರಡ್ಮೂರು ವರ್ಷಗಳ ಹಿಂದೆ ಮಾಮೂಲಿ ಕೋತಿಯಂತೆ ಇತ್ತು. ಕಾಡಿನಲ್ಲಿ ತಿರುಗಾಡಿಕೊಂಡು, ಕಪಿ ಚೇಷ್ಟೆ ಮಾಡಿಕೊಂಡಿತ್ತು. ಚಿಕ್ಕ ಮರಿಯಾಗಿದ್ದ ಕಾರಣ ಚೇಷ್ಟೆ ತುಸು ಹೆಚ್ಚೇ ಇತ್ತು. ಹೀಗೆ ಒಂದು ದಿನ ಮರದಿಂದ ಮರಕ್ಕೆ ಹಾರುತ್ತಾ ಮಂಗನಾಟ ಆಡುವ ವೇಳೆ ಆಕಸ್ಮಾತ್ ಆಗಿ ಕಂಜರಪೇಟೆ ವ್ಯಾಪ್ತಿಯಲ್ಲಿ ಮೇಲಿನಿಂದ ಕೆಳಕ್ಕೆ ಬಿದ್ದು ಗಾಯಗೊಂಡಿತ್ತು‌. ಈ ವೇಳೆ ಕಂಜರಪೇಟೆ ಗ್ರಾಮಸ್ಥರು ಈ ಕೋತಿಯನ್ನ ಹಿಡಿದು, ಶುಷ್ರೂಷೆ ನೀಡಿದ್ದರು. ವೈದ್ಯರಿಂದ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಿದ್ದರು.

ಕೊಂಚ ಚೇತರಿಸಿಕೊಂಡ ಬಳಿಕ ಈ ಕೋತಿ ಮರಿಯನ್ನ ಪುನಃ ಕಾಡಿನತ್ತ ಬಿಡಲಾಗಿತ್ತು. ಆದರೆ ಕಾಡಿನ ಇತರೆ ಕೋತಿಗಳೆಲ್ಲ ಈ ಮರಿ ಕೋತಿಯನ್ನು ಸೇರಿಸಿಕೊಳ್ಳದೇ ದೂರ ಮಾಡಿದ್ದವು. ಇದರಿಂದಾಗಿ ನೊಂದಿದ್ದ ಈ ಕೋತಿ, ಪುನಃ ಆರೈಕೆ ನೀಡಿದ್ದ ಕಂಜರಪೇಟೆ ಗ್ರಾಮಕ್ಕೆ ಬಂದಿತ್ತು. ಇದನ್ನು ಕಂಡ ಗ್ರಾಮದ ರೆಹೋನೆತ್, ಮರಿಯನ್ನ ಹಿಡಿದು ಮನೆಯ ಸದಸ್ಯನಂತೆ ಸಾಕಿದ್ದರು.

ಮನೆಯ ಮಕ್ಕಳೆಲ್ಲ ಈ ಕೋತಿಯೊಂದಿಗೆ ಸಲುಗೆಯಿಂದ, ಆಟವಾಡಿಕೊಂಡಿದ್ದರು‌. ಹೀಗೆ ಎರಡ್ಮೂರು ವರ್ಷಗಳಿಂದ ಗ್ರಾಮದಲ್ಲಿ ಓಡಾಡಿಕೊಂಡಿದ್ದ ಕೋತಿಗೆ ಗ್ರಾಮಸ್ಥರೂ ಹತ್ತಿರವಾಗಿದ್ದರು. ಹಿರಿ- ಕಿರಿಯರೆನ್ನದೆ ಎಲ್ಲರೂ ಅನ್ಯೋನ್ಯತೆಯಿಂದಿದ್ದರು. ಇದೀಗ ಕೋತಿ ರಾಮು ಅಗಲಿಕೆಯಿಂದಾಗಿ ಇಡೀ ಊರಿಗೆ ಶೋಕದ ಛಾಯೆ ಆವರಿಸಿದೆ. ದುಃಖ ಮಡುಗಟ್ಟಿದೆ.

ಇದನ್ನೂ ಓದಿ | video Viral: ಹಸಿದ ಕೋತಿ, ಮರಿಗೆ ಮಾವಿನಹಣ್ಣು ನೀಡಿದ ಕಾನ್‌ಸ್ಟೆಬಲ್ ನೆಟ್ಟಿಗರು ಫಿದಾ

Exit mobile version