ತುಮಕೂರು: ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳ ನಿರ್ಲಕ್ಷದಿಂದಾಗಿ ಮಹಿಳೆ ಹಾಗೂ ಅವಳಿ ಗಂಡು ಹಸುಗೂಸುಗಳು ಮೃತಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಅವರು ಗುರುವಾರ ಸಂಜೆ ಆಸ್ಪತ್ರೆಯಲ್ಲಿ ಸಭೆ ನಡೆಸಿದರು. ಬಳಿಕ ಅವರು ತಪ್ಪಿತಸ್ಥ ವೈದ್ಯಾಧಿಕಾರಿ ಸೇರಿದಂತೆ ನಾಲ್ವರನ್ನು ಕರ್ತವ್ಯದಿಂದ ಅಮಾನತು ಮಾಡಲು ಸೂಚನೆ ನೀಡಿದರು.
ಸಭೆಯ ಬಳಿಕ ಮಾತನಾಡಿದ ಸಚಿವ ಸುಧಾಕರ್ ಅವರು “ಮಹಿಳೆ ಬುಧವಾರ ರಾತ್ರಿ ಹೆರಿಗೆಗಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆದರೆ, ತಾಯಿ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಅವರಿಗೆ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಲು ಒಪ್ಪಿಲ್ಲ. ಹೀಗಾಗಿ ಅವರು ಮನಗೆ ಮರಳಿದ್ದರು. ಆದರೆ, ಗುರುವಾರ ಬೆಳಗ್ಗೆ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿ ಮೃತಪಟ್ಟಿದ್ದು, ಜನಿಸಿದ ಮಕ್ಕಳೂ ಮೃತಪಟ್ಟಿವೆ. ಪ್ರಕರಣದಲ್ಲಿ ಸಿಬ್ಬಂದಿ ಲೋಪ ಕಂಡು ಬಂದಿದೆ. ಇದೊಂದು ಅಮಾನುಷ ಘಟನೆ. ವಿಷಯ ತಿಳಿದು ನಾನು ದಿಗ್ಭ್ರಮೆಗೆ ಒಳಗಾದೆ. ಘಟನೆ ಕಾರಣರಾದ ವೈದ್ಯರು ಹಾಗೂ ಮೂವರು ನರ್ಸ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಡಿಹೆಚ್ ಓ ಡಾ. ಮಂಜುನಾಥ್, ಡಿ.ಎಸ್ ಡಾ.ವೀಣಾ ಹಾಗೂ ಆಸ್ಪತ್ರೆ ಭಾಗಿಯಾಗಿದ್ದರು.
ಹೆಣ್ಣು ಮಗಳಿಗೆ ಸರಕಾರದಿಂದ ಶಿಕ್ಷಣ
ಮೃತಪಟ್ಟ ಮಹಿಳೆಗೆ ಹೆಣ್ಣು ಮಗಳೊಬ್ಬಳಿದ್ದಾಳೆ. ಆಕೆಯನ್ನ ಕುಟುಂಬಸ್ಥರು ಪೋಷಿಸದಿದ್ದಲ್ಲಿ, ಜಿಲ್ಲಾಡಳಿತದಿಂದ 18 ವರ್ಷದವರೆಗೂ ಉಚಿತ ಶಿಕ್ಷಣ,ವಸತಿ ಕಲ್ಪಿಸಲು ವ್ಯವಸ್ಥೆ ಮಾಡ್ತೇವೆ. ವೈಯಕ್ತಿಕವಾಗಿ ನಾನು ಬಾಲಕಿಯ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಎಫ್‌ಡಿ ಇಡುತ್ತೇನೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಏನಿದು ಪ್ರಕರಣ?
ತುಮಕೂರು ನಗರದ ಭಾರತಿನಗರದಲ್ಲಿ ಒಂದು ಹೆಣ್ಣು ಮಗು ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕಸ್ತೂರಿ, 9 ತಿಂಗಳ ತುಂಬು ಗರ್ಭಿಣಿ ಆಗಿದ್ದರು. ಬುಧವಾರ ಸಂಜೆ ಮನೆಯಲ್ಲಿ ಕಸ್ತೂರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಆಕೆಯ ಕಷ್ಟ ನೋಡಲಾರದೇ ಸ್ಥಳೀಯರು ಸೇರಿ ಹಣ ಸಂಗ್ರಹಿಸಿ ಪಕ್ಕದ ಮನೆಯ ಅಜ್ಜಿಯ ಜತೆ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.
ಈ ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರು ತಾಯಿ ಕಾರ್ಡ್ ಇಲ್ಲ ಎಂದು ಚಿಕಿತ್ಸೆ ಕೊಡದೆ ವಾಪಸ್ ಕಳುಹಿಸಿದ್ದಾರೆ. ವೈದ್ಯೆಯ ಬಳಿ ಅಂಗಲಾಚಿದರೂ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ನಾವು ಚಿಕಿತ್ಸೆ ಕೊಡುವುದಿಲ್ಲ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಡುತ್ತೇನೆ ಎಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದಾರೆ.
ಹಣವಿಲ್ಲದೆ ಹೊಟ್ಟೆ ನೋವಿನಲ್ಲೇ ಗರ್ಭಿಣಿ ಮನೆಗೆ ವಾಪಸ್ ಬಂದಿದ್ದಾರೆ. ಆದರೆ, ಗುರುವಾರ ಬೆಳಗಿನ ಜಾವ ಹೊಟ್ಟೆ ನೋವಿನಿಂದ ಕಿರುಚಾಡಿ ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿ ಅವಳಿ ಗಂಡು ಮಕ್ಕಳೊಂದಿಗೆ ತಾಯಿ ಕೂಡ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ | Negligence | ಅವಳಿ ಮಕ್ಕಳ ಸಹಿತ ತಾಯಿ ಸಾವು; ತಾಯಿ ಕಾರ್ಡ್ ಇಲ್ಲವೆಂದು ವಾಪಸ್ ಕಳಿಸಿದ ಸರ್ಕಾರಿ ಆಸ್ಪತ್ರೆ