ಬಳ್ಳಾರಿ: ಮಾಜಿ ಶಾಸಕ ಸೂರ್ಯ ನಾರಾಯಣ ರೆಡ್ಡಿ, ಪುತ್ರ ಭರತ್ ರೆಡ್ಡಿ ಅವರು ತಮಗೆ ಜೀವಬೆದರಿಕೆ (Death threat) ಒಡ್ಡಿದ್ದಾರೆ ಎಂದು ದೇವರೆಡ್ಡಿ ಅವರ ಮಕ್ಕಳ ಪರವಾಗಿ ದೂರು ನೀಡಲಾಗಿದೆ. ವ್ಯವಹಾರದ ಪಾಲುದಾರಿಕೆ ಮತ್ತು ಆಸ್ತಿ ವಿಚಾರದಲ್ಲಿ ದೇವರೆಡ್ಡಿ ಮಕ್ಕಳು ನ್ಯಾಯಾಲಯದಲ್ಲಿ ಹೂಡಿದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸೂರ್ಯನಾರಾಯಣ ರೆಡ್ಡಿ, ಭರತ್ ರೆಡ್ಡಿ ಸೇರಿದಂತೆ 9 ಜನರ ಮೇಲೆ ಬಳ್ಳಾರಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಸ್ತಿ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿರುವುದ್ದಕ್ಕೆ ಸಂಬಂಧಪಟ್ಟಂತೆ ದೇವರೆಡ್ಡಿ ಕುಟುಂಬ ಸಂಬಂಧಿ, ಅವರ ಅಳಿಯ ಸುನೀಲ್ ಕುಮಾರ್ ಅವರು ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಮೇಲೆ ಎಫ್ ಐಆರ್ ದಾಖಲಾಗಿದೆ. ಕೆಲ ದಿನಗಳ ಹಿಂದೆ ದೇವರೆಡ್ಡಿ ಅವರ ಮಕ್ಕಳಾದ ಪೂರ್ಣಿಮಾ, ಅರುಣಾರೆಡ್ಡಿ ಸೇರಿದಂತೆ ಇತರರು ಎಸ್ಪಿ ಕಚೇರಿಗೆ ತೆರಳಿ ಕೊಲೆ ಬೆದರಿಕೆಯ ಇರುವ ಬಗ್ಗೆ ದೂರು ನೀಡಿದ್ದರು.
ಎಫ್ಐಆರ್ ಸಾರಾಂಶ
ಭರತ್ ರೆಡ್ಡಿಯವರ ಆಪ್ತ ರತ್ನಬಾಬು ತಮ್ಮ ಸೊಸೆಯಂದಿರು ಮತ್ತು ವಕೀಲರನ್ನು ಹಿಂಬಾಲಿಸಿಕೊಂಡು ಬಂದು ನ್ಯಾಯಾಲಯದಲ್ಲಿ ನಮ್ಮ ಭರತ್ ರೆಡ್ಡಿ ಆಸ್ತಿ ವಿಷಯದಲ್ಲಿ ನಿಮ್ಮನ್ನು ಕೊಲೆ ಮಾಡುತ್ತೇನೆಂದು, ದಾಖಲಾಗಿರುವ ಪ್ರಕರಣ ಹಿಂದಕ್ಕೆ ಪಡೆಯಬೇಕೆಂದು ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎಸ್ಪಿಗೆ ದೂರು ಕೊಡುವುದಕ್ಕೆ ಹೋದಾಗಲೂ ಸತೀಶ್ ರೆಡ್ಡಿ ಎನ್ನುವವರು ನ್ಯಾಯಾಲಯದಲ್ಲಿನ ಪ್ರಕರಣ ಹಿಂದಕ್ಕೆ ಪಡೆಯಬೇಕೆಂದು ಬೆದರಿಕೆ ಹಾಕಿದ್ದಾರೆ. ಸುಲ್ತಾನ್ ಬಾಬಾ, ಮಂಜುನಾಥ್ ಎನ್ನುವವರು ನಮ್ಮ ಕುಟುಂಬದ ಸ್ನೇಹಿತನಾದ ಡಾ.ವಿನಾಯಕ ನಮಗೆ ಬೆಂಬಲ ನೀಡುತ್ತಾರೆಂದು ಅವರಿಗೂ ಬೆದರಿಕೆ ಹಾಕಿದ್ದಾರೆ ಎಂದು ಸುನೀಲ್ ಕುಮಾರ್ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ನ್ಯಾಯಾಲಯದಲ್ಲಿ ಆಸ್ತಿ ವಿಷಯದಲ್ಲಿ ಹೂಡಿರುವ ಪ್ರಕರಣ ಹಿಂದಕ್ಕೆ ಪಡೆಯಲು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿರುವ ಸುನಿಲ್ ಕುಮಾರ್ ಮಾಜಿ ಶಾಸಕರು ಮತ್ತು ಇತರರ ವಿರುದ್ಧ ಕಾನೂನು ಕ್ರಮ ಜರುಗಿಬೇಕೆಂದು ಒತ್ತಾಯಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಹೊರ ಬೀಳಲಿದೆ. ಇನ್ನು ಆಸ್ತಿಯ ವಿಷಯದಲ್ಲಿ ನ್ಯಾಯಾಲಯದ 3-4 ಪ್ರಕರಣಗಳನ್ನು ದೇವರೆಡ್ಡಿ ಮಕ್ಕಳು ಬಳ್ಳಾರಿ ಮತ್ತು ಕುಷ್ಟಗಿಯಲ್ಲಿ ಹೂಡಿದ್ದಾರೆ, ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾರೆ.
ರಾಜಕೀಯ ಪ್ರೇರಿತ ಆರೋಪ ಎಂದ ಭರತ್ ರೆಡ್ಡಿ
ʻʻʻಟಿಕೆಟ್ ಆಕಾಂಕ್ಷಿಯಾಗಿರುವುದರಿಂದ ರಾಜಕೀಯ ಪ್ರೇರಿತವಾಗಿ ಇಂತಹ ಆರೋಪ ಮಾಡುತ್ತಿದ್ದಾರೆ, ರಾಜಕೀಯಕ್ಕೆ ಬಂದಾಗ ಇಂತಹ ಆರೋಪಗಳು ಬರುವುದು ಸಹಜ. ಅವೆಲ್ಲ ನಾವು ಫೇಸ್ ಮಾಡಬೇಕು. ಇಂತಹ ಇನ್ನಷ್ಟು ಆರೋಪಗಳು ಬರಬಹುದು ಎಂದು ಬಳ್ಳಾರಿ ನಗರ ಟಿಕೆಟ್ ಆಕಾಂಕ್ಷಿ ಭರತ್ ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ : ಸೀಜ್ ಮಾಡಿದ ಬೇಳೂರು ರಾಘವೇಂದ್ರ ಶೆಟ್ಟಿ ಮನೆಗೆ ಕುಟುಂಬಸ್ಥರ ಅಕ್ರಮ ಪ್ರವೇಶ, ಆತ್ಮಹತ್ಯೆ ಬೆದರಿಕೆ