ಬೆಂಗಳೂರು: ಈ ಸಲದ ದೀಪಾವಳಿ ಹಬ್ಬಕ್ಕೂ ಮುನ್ನವೇ ಪ್ರಯಾಣಿಕರಿಗೆ ಜೇಬು ಸುಡುವ ಅನುಭವ ಆಗಿದೆ. ದೀಪಾವಳಿ ಹಬ್ಬ (Deepavali 2023) ಆಚರಿಸಲು ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳು ಟಿಕೆಟ್ ದರವನ್ನು (bus ticket rates) ಮೂರು ಪಟ್ಟು ಹೆಚ್ಚಿಸಿವೆ.
ನಾಳೆಯಿಂದಲೇ ಬಸ್ ಟಿಕೆಟ್ ದರ ಯದ್ವಾತದ್ವಾ ಏರಿಕೆಯಾಗಿದೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಮತ್ತು ಆಫ್‌ಲೈನ್‌ನಲ್ಲೂ ಟಿಕೆಟ್‌ಗಳು ಸಾಮಾನ್ಯ ದರದಲ್ಲಿ ಸಿಗುತ್ತಿಲ್ಲ. ದೀಪಾವಳಿ ಹಬ್ಬದ ಆಚರಣೆಗೆ ಸಾಮಾನ್ಯವಾಗಿ ಬೆಂಗಳೂರಿನಲ್ಲಿರುವವರು ಊರಿಗೆ ದೊಡ್ಡ ಸಂಖ್ಯೆಯಲ್ಲಿ ತೆರಳುವುದು ವಾಡಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಟಿಕೆಟ್ ದರಗಳನ್ನು ಏರಿಸಲಾಗಿದೆ.
ಶುಕ್ರವಾರದಿಂದ ಟಿಕೆಟ್ ದರ ಏರಿಕೆ ಮಾಡುತ್ತಿದ್ದ ಖಾಸಗಿ ಬಸ್ ಮಾಲೀಕರು ಇದೀಗ ವಾರದ ಮೊದಲಿನಿಂದಲೇ ದರ ಏರಿಕೆ ಆರಂಭಿಸಿದ್ದಾರೆ. ಸಾರಿಗೆ ಇಲಾಖೆಯ ಎಚ್ಚರಿಕೆಗೂ ಖಾಸಗಿ ಬಸ್ ಮಾಲೀಕರು ಕ್ಯಾರೆ ಎನ್ನುತ್ತಿಲ್ಲ. ಒಂದಕ್ಕೆ ಮೂರು ಪಟ್ಟು ಏರಿಸಿರುವ ದರಗಳನ್ನು ನೋಡಿ ಪ್ರಯಾಣಿಕರು ಶಾಕ್ ಆಗಿದ್ದಾರೆ.
ಬೆಂಗಳೂರು ಟು ಶಿವಮೊಗ್ಗ ಮಾಮೂಲಿ ಟಿಕೆಟ್ ದರ 450-550 ಇದ್ದರೆ, ಹಬ್ಬದ ವಿಶೇಷವಾಗಿ 1,500-1800 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರು ಟು ಬೀದರ್ 800-900 ರೂಪಾಯಿ ಇದ್ದರೆ ಈಗ 1800-2000 ರೂಪಾಯಿಗೆ ಏರಿದೆ. ಬೆಂಗಳೂರು ಟು ಹುಬ್ಬಳ್ಳಿ ಮಾಮೂಲಿ ಟಿಕೆಟ್ ದರ 700-900 ರೂಪಾಯಿ ಇದ್ದರೆ ಇದೀಗ 1700-2200 ರೂಪಾಯಿ ನಿಗದಿಯಾಗಿದೆ.
ಬೆಂಗಳೂರು ಟು ವಿಜಯಪುರ 800-900 ರೂ. ಇದ್ದಲ್ಲಿ 1900-2200 ರೂಪಾಯಿ, ಬೆಂಗಳೂರು ಟು ಮಂಗಳೂರು 850- 900 ರೂಪಾಯಿ ಇದ್ದ ದರ 1600- 1900 ರೂಪಾಯಿಗೆ ಫಿಕ್ಸ್ ಆಗಿದೆ. ಬಹುಶಃ ಇನ್ನಷ್ಟು ಬೇಡಿಕೆ ಹೆಚ್ಚಿದರೆ ಮತ್ತಷ್ಟು ದರ ಏರುವ ಸಂಭವ ಕೂಡ ಇದೆ. ಇದೇ ಹೊತ್ತಿಗೆ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ.
ಅದಕ್ಕನುಗುಣವಾಗಿ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಕೂಡಾ ಏರಿಕೆಯಾಗಿದೆ. ಆದರೆ ಖಾಸಗಿ ಬಸ್ಸುಗಳಂತೆ ಹಗಲು ದರೋಡೆ ಮಾಡುತ್ತಿಲ್ಲ. ಸಾಮಾನ್ಯ ದರಕ್ಕಿಂತ ಶೇ.5-10ರಷ್ಟು ಮಾತ್ರ ದರ ಏರಿಕೆಯಾಗಿದೆ. ಆದರೆ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್‌ಗಳು ಬಲು ಬೇಗನೆ ಸೋಲ್ಡ್ ಔಟ್ ಆಗಿಬಿಡುತ್ತಿರುವುದರಿಂದ ಖಾಸಗಿ ಬಸ್‌ಗಳು ಅನಿವಾರ್ಯವಾಗಿವೆ. ಕೆಎಸ್‌ಆರ್‌ಟಿಸಿ ಕೂಡ ಬಸ್ ಸಂಖ್ಯೆಗಳನ್ನು ಹೆಚ್ಚಿಸಿದೆ.
ದೀಪಾವಳಿ ಮುಗಿದ ಬಳಿಕ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಂದ ಬೆಂಗಳೂರಿಗೆ ಮರಳುವ ಖಾಸಗಿ ಬಸ್ಸುಗಳ ಟಿಕೆಟ್ ದರಗಳು ಕೂಡ ಅದೇ ಪ್ರಮಾಣದಲ್ಲಿ ಏರಿಕೆಯಾಗಿವೆ.
ಇದನ್ನೂ ಓದಿ: Deepavali 2023: ದೀಪಾವಳಿ ಹಬ್ಬದ ದಿನಗಳು, ಮುಹೂರ್ತ ಮತ್ತು ವಿಶೇಷತೆಗಳು ಹೀಗಿವೆ…