ಬೆಂಗಳೂರು: ನೀವು ದೀಪಾವಳಿ ಹಬ್ಬಕ್ಕಾಗಿ (Deepavali Special Bus) ಬೆಂಗಳೂರಿನಿಂದ ಊರಿಗೆ ಹೋಗಲು ಪ್ಲ್ಯಾನ್ ಮಾಡಿದ್ದೀರಾ? ಅಥವಾ ಊರಿನ ಕಡೆ ಇರುವವರು ಎಲ್ಲಾದರೂ ಪ್ರವಾಸ ಹೋಗಬೇಕು ಎಂದು ಪ್ಲ್ಯಾನ್ ಮಾಡಿದ್ದೀರಾ? ನೀವು ದೇವಸ್ಥಾನಕ್ಕೆ, ಟೂರಿಸ್ಟ್ ಪ್ಲೇಸ್‌ಗೆ ಪ್ಲ್ಯಾನ್ ಮಾಡಿದ್ದರೂ ಓಡಾಟಕ್ಕೆ ಬಸ್‌ಗಳು ಸಿಗುತ್ತವೋ ಇಲ್ಲವೋ ಎಂಬ ಆತಂಕ ನಿಮ್ಮನ್ನು ಕಾಡುತ್ತಿರಬಹುದಲ್ವಾ? ಅಂಥಹುದೊಂದು ಆತಂಕವಿದ್ದರೆ ಬಿಟ್ಟು ಬಿಡಿ. ಯಾಕೆಂದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ದೀಪಾವಳಿ ಸಂದರ್ಭದಲ್ಲಿ 2000 ವಿಶೇಷ ಬಸ್‌ಗಳ (2000 Special Bus) ಸಂಚಾರವನ್ನು ಪ್ಲ್ಯಾನ್ ಮಾಡಿದೆ.
ಹಬ್ಬದ ಸಂದರ್ಭದಲ್ಲಿ ಜನರ ಓಡಾಟಕ್ಕೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಕೆಎಸ್‌ಆರ್‌ಟಿಸಿ ಈ ಸ್ಪೆಷಲ್ ಬಸ್‌ಗಳ ಆಯೋಜನೆಯನ್ನು ಮಾಡಿದೆ. ಹೆಚ್ಚುವರಿ 2000 ಬಸ್‌ಗಳು ರಾಜ್ಯದ ಎಲ್ಲ ಕಡೆ ಸೇವೆಯನ್ನು ನೀಡಲಿದೆ. ಇದರ ಜತೆಗೆ ರೈಲ್ವೇ ಇಲಾಖೆಯು ವಿಶೇಷ ರೈಲುಗಳ ಸೇವೆಯನ್ನೂ ಒದಗಿಸಲಿದೆ.
ನವೆಂಬರ್ 10ರಿಂದ 15ರವರೆಗೆ ವಿಶೇಷ ಸೇವೆ
ಕೆಎಸ್‌ಆರ್ಟಿಸಿ ನವೆಂಬರ್ 10ರಿಂದ 15ರವರೆಗೆ ವಿಶೇಷ ಸೇವೆಯನ್ನು ನೀಡಲಿದೆ. ಇದರಲ್ಲಿ ಎರಡು ಭಾಗಗಳಿವೆ. ವಿಶೇಷ ಬಸ್‌ಗಳು ನವೆಂಬರ್ 10 ಅಂದರೆ ನಾಳೆಯಿಂದ ನವೆಂಬರ್ 12ರವರೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಸಂಚಾರ ಮಾಡಲಿದೆ. ಯಾಕೆಂದರೆ, ಈ ಅವಧಿಯಲ್ಲಿ ಸಾಕಷ್ಟು ಮಂದಿ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಹಬ್ಬಕ್ಕಾಗಿ ಹೋಗುತ್ತಾರೆ. ಹಬ್ಬ ಮುಗಿಸಿ ಊರಿನಿಂದ ಬೆಂಗಳೂರಿಗೆ ಬರುವವರಿಗಾಗಿ ನವೆಂಬರ್ 14ರಿಂದ 15 ರವರೆಗೆ ಸೇವೆ ಸಿಗಲಿದೆ. ಅಂದರೆ ರಾಜ್ಯದ ನಾನಾ ಭಾಗಗಳಿಂದ ಆ ಎರಡು ದಿನಗಳಲ್ಲಿ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಸೇವೆಯು ದೊರೆಯಲಿದೆ.
ಹಾಗಿದ್ದರೆ ಯಾವ್ಯಾವ ಸ್ಥಳಗಳಿಗೆ ವಿಶೇಷ ಬಸ್‌ಗಳು ಓಡಾಡಲಿವೆ?
1.ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಮುಂತಾದೆಡೆಗೆ ವಿಶೇಷ ಬಸ್‌ಗಳು ಇರಲಿದೆ.
2.ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿ ಕಡೆಗೆ ಪ್ರತ್ಯೇಕವಾಗಿ ವಿಶೇಷ ಬಸ್‌ಗಳು ಕಾರ್ಯನಿರ್ವಹಿಸಲಿವೆ.
3. ಬಿಎಂಟಿಸಿ ಬಸ್ ನಿಲ್ದಾಣ, ಶಾಂತಿನಗರ ಟಿಟಿಎಂಸಿಯಿಂದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು ಮತ್ತು ತಮಿಳುನಾಡು ಮತ್ತು ಕೇರಳದ ಇತರ ಸ್ಥಳಗಳಿಗೆ ಆಲ್-ಪ್ರೀಮಿಯರ್ ವಿಶೇಷ ಬಸ್‌ಗಳು ಕಾರ್ಯನಿರ್ವಹಿಸಲಿವೆ.
ಬಸ್ ಮಾತ್ರವಲ್ಲ ದೀಪಾವಳಿ ವಿಶೇಷ ರೈಲು ಸೇವೆಗಳೂ ಇವೆ
ದೀಪಾವಳಿ ಸಂದರ್ಭದಲ್ಲಿ ಬಸ್ ಮಾತ್ರವಲ್ಲ ವಿಶೇಷ ರೈಲು ಸೇವೆಗಳು ಕೂಡಾ ಜನರಿಗೆ ಲಭ್ಯವಿದೆ.
ಬೆಂಗಳೂರು-ವಿಜಯಪುರ ನಡುವೆ ರೈಲು
ಬೆಂಗಳೂರು-ವಿಜಯಪುರ ನಡುವೆ ರೈಲು (ರೈಲು ಸಂಖ್ಯೆ 06231/ 06232) ಒಂದು ಟ್ರಿಪ್ ಸಂಚಾರ ನಡೆಸಲಿದೆ. ಈ ವಿಶೇಷ ರೈಲು 16 ಬೋಗಿಗಳಿವೆ.
-ನವೆಂಬರ್ 10ರಂದು ಈ ರೈಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ಸಂ ಜೆ 7 ಗಂಟೆಗೆ ಹೊರಡಲಿಲಿದ್ದು ಮರುದಿನ ಬೆಳಗ್ಗೆ 10.55ಕ್ಕೆ ವಿಜಯಪುರ ತಲುಪಲಿದೆ.
-ಇದೇ ರೈಲು ನವೆಂಬರ್ 14ರಂದು ವಾಪಸ್ ಆಗಲಿದೆ. ಹೊರಡಲಿದೆ. ಅದು ವಿಜಯಪುರದಿಂದ ಸಂಜೆ 5 ಗಂಟೆಗೆ ವಿಜಪುರದಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 9.30ಕ್ಕೆ ಬೆಂಗಳೂರು ನಗರಕ್ಕೆ ಆಗಮಿಸಲಿದೆ.
ಬೆಂಗಳೂರು-ಮಂಗಳೂರು ಜಂಕ್ಷನ್ ರೈಲು
ಉಧಾನ್ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ರೈಲು ಸೇವೆಯೂ ಲಭ್ಯವಿದೆ. ಬೆಂಗಳೂರಿನಿಂದ 19.45ಕ್ಕೆ ಶುಕ್ರವಾರ ಮತ್ತು ಭಾನುವಾರ ಹೊರಡಲಿದೆ. ನವೆಂಬರ್ 3, 5, 10, 12, 17, 19, 24, 26ರಂದು ಸಂಚಾರ ನಡೆಸಲಿದೆ. ಡಿಸೆಂಬರ್ ತಿಂಗಳಿನಲ್ಲಿ 1, 3, 8, 10, 15, 17, 22, 24, 29 ಮತ್ತು 31 ರಂದು ಸಂಚಾರ ನಡೆಸಲಿದೆ.
ಇನ್ನು ಮಂಗಳೂರಿನಿಂದ ಹೊರಡುವ ವಿಶೇಷ ರೈಲು ಶನಿವಾರ ಮತ್ತು ಸೋಮವಾರ 21:10ಕ್ಕೆ ಸಂಚಾರ ಆರಂಭಿಸಲಿದೆ. ನವೆಂಬರ್ 4, 6, 11, 13, 18, 20, 25 ಮತ್ತು 27ರಂದು ಸಂಚಾರವಿರುತ್ತದೆ. ಡಿಸೆಂಬರ್ ತಿಂಗಳಿನಲ್ಲಿ 2, 4, 9, 11, 16, 18, 23, 25, 30 ಮತ್ತು ಜನವರಿ 1ರಂದು ಸಂಚಾರ ನಡೆಸಲಿದೆ.