ಪುತ್ತೂರು: ರಾಜ್ಯದ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿ ನಡೆಯುತ್ತಿರುವ ದೀವಟಿಕೆ ಸಲಾಂ ಪೂಜೆಗೆ ರಾಜ್ಯ ಧಾರ್ಮಿಕ ಪರಿಷತ್ ಬ್ರೇಕ್ ಹಾಕಿದೆ. ಟಿಪ್ಪು ರಾಜ್ಯಾಡಳಿತ ಮಾಡುತ್ತಿದ್ದ ಕಾಲದಲ್ಲಿ ಆರಂಭಗೊಂಡಿದ್ದ ಪೂಜೆ ಇದೆಂದು (ಟಿಪ್ಪು ವಿವಾದ) ಹೇಳಲಾಗಿದೆ. ದೇವಸ್ಥಾನದಲ್ಲಿ ಸಂಜೆಯ ಹೊತ್ತಿನಲ್ಲಿ ಈ ಪೂಜೆ ನಡೆಯುತ್ತಿತ್ತು. ಇದು ಟಿಪ್ಪುವಿನ ಹೆಸರಿನಲ್ಲಿ ನಡೆಯುತ್ತಿದ್ದ ಪೂಜೆ ಎಂದು ಹಿಂದೆ ಹೇಳಲಾಗಿದ್ದರೂ ಟಿಪ್ಪು ಬಲತ್ಕಾರವಾಗಿ ದೇವಸ್ಥಾನಗಳಲ್ಲಿ ಆರಂಭಿಸಿದ್ದ ಪೂಜೆ ಇದೆಂದು ಅಭಿಪ್ರಾಯಪಡಲಾಗುತ್ತಿದೆ.
ರಾಜ್ಯವನ್ನಾಳುವ ರಾಜನ ಪರವಾಗಿ ಮಾಡುತ್ತಿದ್ದ ಈ ಪೂಜೆ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಪುತ್ತೂರು ಮಹಾಲಿಂಗೇಶ್ವರ ಮೊದಲಾದ ದೇವಸ್ಥಾನಗಳಲ್ಲಿ ಇಂದಿಗೂ ನಡೆದುಕೊಂಡು ಬರುತ್ತಿದೆ. ಆದರೆ, ಇನ್ನು ಮುಂದೆ ಈ ದೀವಟಿಕೆ ಸಲಾಂ ಪೂಜೆ ನಡೆಸದಂತೆ ಧಾರ್ಮಿಕ ಪರಿಷತ್ ನಿಂದ ಸುತ್ತೋಲೆ ಹೊರಡಿಸಲಾಗಿದೆ.
ಇನ್ನು ಮುಂದೆ ದೀಪ ನಮಸ್ಕಾರ
ಟಿಪ್ಪು ಕಾಲದಲ್ಲಿ ಆರಂಭವಾಗಿದ್ದ ದೀವಟಿಗೆ ಸಲಾಂನ್ನು ನಿಲ್ಲಿಸಿ ಅದರ ಬದಲು ಸಂಧ್ಯಾ ಕಾಲದಲ್ಲಿ ದೀಪ ನಮಸ್ಕಾರ ಪೂಜೆ ನೆರವೇರಿಸಲು ದೇವಸ್ಥಾನಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯವನ್ನಾಳುವ ರಾಜ, ಮಂತ್ರಿ ಮತ್ತು ಪ್ರಜೆಗಳ ಒಳಿತಿಗಾಗಿ ಮುಂದೆ ದೀಪ ನಮಸ್ಕಾರ ಪೂಜೆ ನಡೆಯಲಿದೆ.
ಮುಜರಾಯಿ ಇಲಾಖೆಯ ಹೆಸರೂ ಬದಲು
ಈ ನಡುವೆ, ಟಿಪ್ಪು ಕಾಲದಲ್ಲೇ ಇಡಲಾಗಿದ್ದ ಮುಜರಾಯಿ ಇಲಾಖೆ ಎನ್ನುವ ಹೆಸರನ್ನೂ ಬದಲಾಯಿಸಲಾಗಿದೆ. ಮುಜರಾಯಿ ಇಲಾಖೆ ಎನ್ನುವ ಹೆಸರನ್ನೂ ಬದಲಾಯಿಸಿದ ರಾಜ್ಯ ಧಾರ್ಮಿಕ ಪರಿಷತ್ ಇನ್ನು ಮುಂದೆ ಧರ್ಮಾದಾಯ ದತ್ತಿ ಇಲಾಖೆ ಎಂದು ಮರುನಾಮಕರಣ ಮಾಡಿದೆ. ಈ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ಟಿಪ್ಪು ವಿವಾದ | ಟಿಪ್ಪು ಪ್ರತಿಮೆ, ಜಯಂತಿ ಎರಡಕ್ಕೂ ಇಸ್ಲಾಂನಲ್ಲಿ ಅವಕಾಶವಿಲ್ಲ, ಬೇಡವೂ ಬೇಡ ಎಂದ ಇಬ್ರಾಹಿಂ