Site icon Vistara News

Priyank Kharge: ಸುಳ್ಳು ಆರೋಪ ಮಾಡಿದ ಬಿಜೆಪಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ: ಪ್ರಿಯಾಂಕ್‌ ಖರ್ಗೆ

Priyank Kharge

ಬೆಳಗಾವಿ: ಕಾರು ಅಪಘಾತ ಪ್ರಕರಣವನ್ನು ಹಲ್ಲೆ ಎಂದು ಬಿಂಬಿಸಿ ತಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದ ಮಣಿಕಠ ರಾಠೋಡ್ ಹಾಗೂ ಬಿಜೆಪಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇನೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಕಂಠ ರಾಠೋಡ್‌ ಮೇಲಿನ ಹಲ್ಲೆ ಪ್ರಕರಣದ ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದ ಬಯಲಾಗಿದೆ. ಅಪಘಾತವನ್ನು ಹಲ್ಲೆ ಎಂದು ಕಥೆ ಕಟ್ಟಿ, ನನ್ನ ವಿರುದ್ಧ ಆರೋಪ ಮಾಡಿದ್ದ ಬಿಜೆಪಿ ನಾಯಕರು ಈಗ ಏನು ಹೇಳುತ್ತಾರೆ ಎಂದು ಕಿಡಿಕಾರಿದ್ದಾರೆ.

ಚಿತ್ತಾಪುರದಲ್ಲಿ ಮಣಿಕಂಠ ರಾಥೋಡ್ ಒಂದು ದೂರು ಕೊಟ್ಟಿದ್ದ. ಆತ ಬಿಜೆಪಿ ಅಭ್ಯರ್ಥಿ. ಚಿತ್ತಾಪುರದಿಂದ ಮಾಲಗತ್ತಿಗೆ ಹೋಗುವಾಗ ಆತನ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಿದ್ದ. ಆಲ್ಟ್ರೋಜ್ ಕಾರಿನ ಮೇಲೆ 8 ರಿಂದ 10 ಜನ ಹಲ್ಲೆ ಮಾಡಿದ್ದರು ಎಂದು ದೂರು ಕೊಟ್ಟಿದ್ದ. ಅಧಿಕಾರಿಗಳು ಮತ್ತು ರಾಜಕೀಯ ವಿರೋಧಿಗಳು ನನ್ನ ಹಲ್ಲೆ ಮಾಡುತ್ತಾರೆ ಎಂದು ಹೇಳಿದ್ದ. ಆದರೆ, ರಾಥೋಡ್ ಮೇಲೆ ಸಾಕಷ್ಟು ಆರೋಪಗಳಿದ್ವು. ಅಕ್ಕಿ ಕಳ್ಳತನದಲ್ಲಿ 22 ಕೇಸ್ ಇದೆ. ಹಾಲಿನ ಪೌಡರ್ ಕಳ್ಳತನದಲ್ಲಿ 1 ಕೇಸ್, ಇನ್ನು ಮೂರು ಪ್ರಕರಣಗಳಲ್ಲಿ ಈಗಾಗಲೇ ಆರೋಪ ಸಾಬೀತಾಗಿದೆ. ಅದು ಬಿಜೆಪಿ ಸರ್ಕಾರದ ಅವಧಿಯಲ್ಲೇ ಆಗಿರುವುದು ಎಂದು ತಿಳಿಸಿದರು.

ಇದನ್ನೂ ಓದಿ | Special Court: ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣ ವಿಚಾರಣೆಗೆ ವಿಶೇಷ ನ್ಯಾಯಾಲಯ

ಇವನ ಮೇಲೆ ಇಷ್ಟೆಲ್ಲಾ ಕೇಸ್ ಇದ್ದರೂ ಬಿಜೆಪಿ ಇವನಿಗೆ ಟಿಕೆಟ್ ನೀಡಿತ್ತು. ಇವನು ದೂರು ಕೊಟ್ಟಾಗ ಇಡೀ ಬಿಜೆಪಿ ಇವನ ಹಿಂದೆ ಇತ್ತು. ಕಲಬುರಗಿಯಲ್ಲಿ ಯಾರೂ ಬಿಜೆಪಿ ಮುಖಂಡರು ಉಳಿದಿಲ್ಲ. ಅಲ್ಲಿಗೆ ಎನ್.ರವಿಕುಮಾರ್ ಒಬ್ಬರು ಮಾತ್ರ ಇದ್ದಾರೆ. ಅವರು ಸಹ ಅವತ್ತು ಅವನಿಗೆ ಏನಾದರೂ ಆದ್ರೆ ಪ್ರಿಯಾಂಕಾ ಖರ್ಗೆ ಹೊಣೆ ಅಂತೆಲ್ಲ ಹೇಳಿದ್ದರು. ಬರ ವೀಕ್ಷಣೆಗೆ ಬಂದ ವಿಪಕ್ಷ ನಾಯಕ ಅಶೋಕ್ ಅವರು ನನ್ನನ್ನು ಸಂಪುಟದಿಂದ ವಜಾ ಮಾಡಬೇಕು ಎನ್ನುತ್ತಾರೆ. ಯಂಗ್ ಆ್ಯಂಡ್ ಡೈನಾಮಿಕ್ ವಿಜಯೇಂದ್ರ ಪ್ರಿಯಾಂಕಾ ಖರ್ಗೆನೇ ಹಲ್ಲೆ ಮಾಡಿದ್ದು ಎಂದು ಹೇಳಿದ್ದಾರೆ. ಅವರು ಮಾಡಿಸಿದ್ದಾರೆ ಅಂತ ಹೇಳುತ್ತಿಲ್ಲ. ಮಾಡಿದ್ದಾರೆ ಅಂತನೇ ಮೈಸೂರಿನಲ್ಲಿ ಹೇಳಿಕೆ ಕೊಡ್ತಾರೆ. ಅವರು 33 ಕೇಸ್ ಇರುವ ಮಣಿಕಂಠ ಪರ ಮಾತನಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಕರಣದಲ್ಲಿ ಇಂದು ಪೊಲೀಸ್ ರಿಪೋರ್ಟ್ ಬಂದಿದೆ. ಅವರು ಅಂದು ಚಿತ್ತಾಪುರದಲ್ಲಿ ಇರಲಿಲ್ಲ. ಬದಲಿಗೆ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್‌ನಲ್ಲಿ ಇದ್ದರು. ಗುರುಮಿಟ್ಕಲ್‌ನಿಂದ ಕಲಬುರಗಿಗೆ ಬರುವಾಗ ಚಪೇಟ್ಲದಲ್ಲಿ ಮರಕ್ಕೆ ಕಾರು ಗುದ್ದಿದ್ದಾರೆ ಎಂದು ಅಪಘಾತದ ಫೋಟೋ ಪ್ರದರ್ಶನ ಮಾಡಿದ ಅವರು, ಅಪಘಾತವನ್ನು ತನ್ನ ಮೇಲೆ ಅಟ್ಯಾಕ್ ಆಗಿದೆ ಎಂದು ನಾಟಕ ಮಾಡಿದ್ದಾರೆ. ಅಪಘಾತವಾಗಿರುವ ಕಾರನ್ನು ಹೈದರಾಬಾದ್‌ಗೆ ಕಳುಹಿಸಿದ್ದಾರೆ. ಇದನ್ನೆಲ್ಲ ನಾನು ಹೇಳುತ್ತಿಲ್ಲ. ಇದು ಫಾರೆನ್ಸಿಕ್ ರಿಪೋರ್ಟ್‌. ಕಾರಿರಿನಲ್ಲಿ ಒಂದೇ ಒಂದು ತೊಟ್ಟು ರಕ್ತ ಬಿದ್ದಿಲ್ಲ. ಅವರೇ ಕಲ್ಲಿನಲ್ಲಿ ಹೊಡೆದುಕೊಂಡಿದ್ದಾರೆ. ಹೀಗಾಗಿ ನಾನು ಮಣಿಕಠ ರಾಠೋಡ್ ಹಾಗೂ ಬಿಜೆಪಿ ನಾಯಕರ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ತಿಳಿಸಿದರು.

ಇಲ್ಲಿಯವರೆಗೆ ನಾನು ತಾಳಿಕೊಂಡಿದ್ದೇನೆ. ನಮ್ಮ ತಾಳ್ಮೆ ಪರೀಕ್ಷಿಸಬೇಡಿ. ನಾವು ಸಮಯ ವ್ಯರ್ಥ ಮಾಡುವುದಿಲ್ಲ.
ಅಂಬೇಡ್ಕರ್ ಹೋರಾಟದ ಕಿಚ್ಚು ನನ್ನಲ್ಲಿದೆ. ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡುತ್ತೀರಾ? ಇನ್ಮೇಲೆ ಇಂತಹ ಡ್ರಾಮಾಗಳನ್ನ ನಿಲ್ಲಿಸಿ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.

ದ್ವೇಷ ಇದ್ದರೆ ಚುನಾವಣೆಯಲ್ಲಿ ತೋರಿಸಿ

ಇದೇ ರಾಠೋಡ್ ನನ್ನನನು ಶೂಟ್ ಮಾಡುತ್ತೇವೆ ಎಂದಿದ್ದ. ಖರ್ಗೆ ಕುಟುಂಬವನ್ನು ಫಿನಿಶ್ ಮಾಡ್ತೇವೆ ಎಂದಿದ್ದ. ಆಗ ಎಲ್ಲಿ ಹೋಗಿತ್ತು ನಿಮ್ಮ ಮನುಷ್ಯತ್ವ.? ಹೇಳಿಕೆ ಕೊಡುವಾಗ ಸರಿಯಾಗಿ ಮಾತನಾಡಿ, ಇಲ್ಲವಾದರೆ ಕೋರ್ಟ್‌ಗೆ ಹೋಗಬೇಕಾಗುತ್ತದೆ. ಬಿಜೆಪಿಯವರಿಗೆ ನನ್ನ ಮೇಲೆ ಅಷ್ಟೊಂದು ದ್ವೇಷವೇ? ದ್ವೇಷ ಇದ್ದರೆ ಚುನಾವಣೆಯಲ್ಲಿ ತೋರಿಸಿ ಎಂದು‌ ನಾಯಕರಿಗೆ ಸವಾಲ್ ಹಾಕಿದರು.

ವಿಜಯೇಂದ್ರಗೆ ತಂದೆಯ ಅನುಭವ ಬಂದಿರಬಹುದು ಅಂದುಕೊಂಡಿದ್ದೆ. ಆದರೆ ಅವರ ಸುತ್ತಮುತ್ತಲಿನವರು ಅವರನ್ನು ಮುಗಿಸಬೇಕು ಅಂತ ಇದ್ದಿರಬೇಕು. ವಿಜಯೇಂದ್ರ ಅವರು ಈ ಹಲ್ಲೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಮಾಡಿಸಿದ್ದು ಅಂತ ಆರೋಪ ಮಾಡಿದ್ದಾರೆ ಇದು ಹಕ್ಕು ಚ್ಯುತಿಯಲ್ಲವೇ? ಇಂಥ ವ್ಯಕ್ತಿಯನ್ನು (ಮಣಿಕಂಠ ರಾಠೋಡ್) ಸಮರ್ಥನೆ ಮಾಡಿದರೆ ನಿಮ್ಮ ವರ್ಚಸ್ಸು ಕಡಿಮೆ ಆಗುತ್ತೆ. ಹೇಳಿಕೆ ಕೊಡುವಾಗ ಜಾಗ್ರತೆಯಿಂದ ಕೊಡಿ. ಇಲ್ಲವಾದರೆ ನಿಮ್ಮನ್ನೂ ಕೋರ್ಟಿಗೆ ಎಳೆಯಬೇಕಾಗುತ್ತದೆ ಎಂದರು.

ಇದನ್ನೂ ಓದಿ | Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

‌ಬೆಳಗಾವಿಯ ಪೃಥ್ವಿ ಸಿಂಗ್ ಕೇಸ್ ಕೂಡ ಇದೇ ರೀತಿ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರಿಗೆ ಇಂತಹ ಕಳ್ಳ ಸುಳ್ಳರೇ ಸಿಗುವುದು, ಯಾಕೆ ಗೊತ್ತಿಲ್ಲ ಎಂದು ಕಿಡಿಕಾರಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version