Site icon Vistara News

ಸಮವಸ್ತ್ರದಲ್ಲೇ ಮಲವಿಸರ್ಜನೆ | ವಿದ್ಯಾರ್ಥಿ ಮೇಲೆ ಶಿಕ್ಷಕ ಬಿಸಿ ನೀರು ಎರಚಿಯೇ ಇಲ್ಲವೆಂದ ಶಿಕ್ಷಣ ಸಂಸ್ಥೆ!

raichur boy case

ರಾಯಚೂರು: ಸಮವಸ್ತ್ರದಲ್ಲಿ ವಿದ್ಯಾರ್ಥಿಯೊಬ್ಬ ಮಲವಿಸರ್ಜನೆ ಮಾಡಿಕೊಂಡ ಎಂದು ವಿದ್ಯಾರ್ಥಿ ಮೇಲೆ ಬಿಸಿ ನೀರು ಎರಚಿದ್ದ ಶಿಕ್ಷಕನ ಪ್ರಕರಣ ಟ್ವಿಸ್ಟ್‌ ಪಡೆದುಕೊಂಡಿದ್ದು, ಶಿಕ್ಷಣ ಸಂಸ್ಥೆಯವರು ಹಾಗೂ ಶಿಕ್ಷಕ ಈ ಪ್ರಕರಣವನ್ನೇ ಅಲ್ಲಗಳೆದಿದ್ದಾರೆ. ಅಸಲಿಗೆ ಬಿಸಿನೀರು ಎರಚಿಯೇ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಶ್ರೀ ಘನಮಠೇಶ್ವರ ಗ್ರಾಮೀಣ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಗುರುಬಸವ ಶಿವಾಚಾರ್ಯ ಶ್ರೀ, ಶಿಕ್ಷಕ ಬಿಸಿನೀರು ಎರಚಿದ್ದ ಎಂಬುದು ಸತ್ಯಕ್ಕೆ ದೂರವಾದ ಮಾತು. ರಾಜಕೀಯ ಕುತಂತ್ರದಿಂದ ಈ ರೀತಿಯಾಗಿ ಆರೋಪ ಕೇಳಿಬಂದಿದೆ. ಆದರೆ, ಶಿಕ್ಷಕ ಹುಲಿಗೆಪ್ಪ ಎಲ್ಲೂ ನಾಪತ್ತೆಯಾಗಿಲ್ಲ. ಅವರು ಈ ಕೃತ್ಯ ಮಾಡಿಯೇ ಇಲ್ಲ ಸ್ಪಷ್ಟಪಡಿಸಿದ್ದಾರೆ.

ಮಾಜಿ ಶಾಸಕ ವಜ್ಜಲ್ ಮಾನಪ್ಪ ಕೊಲೆಯತ್ನದಲ್ಲಿ ಹುಲಿಗೆಪ್ಪ ಭಾಗಿಯಾಗಿದ್ದು ನಿಜ. ಮಾನಸಿಕ ಅಸ್ವಸ್ಥತೆಯಿಂದ ಈ ಹಿಂದೆ ಕೃತ್ಯದಲ್ಲಿ ಭಾಗಿಯಾಗಿದ್ದ. ಆ ಘಟನೆಗೂ ಈ‌ ಬಾಲಕನ ಘಟನೆಗೆ ಯಾವುದೇ ಸಂಬಂಧವಿಲ್ಲ. ಸರ್ಕಾರ ಈ ಪ್ರಕರಣದ ಬಗ್ಗೆ ತನಿಖೆಗೆ ಆದೇಶ ಹೊರಡಿಸಿದೆ. ಶಿಕ್ಷಣ ಸಂಸ್ಥೆ ಎಲ್ಲ ರೀತಿಯ ತನಿಖೆಗೆ ಬದ್ಧವಾಗಿದೆ ಎಂದು ಶ್ರೀಗಳು ಹೇಳಿದ್ದಾರೆ.

ಏನಿದು ಪ್ರಕರಣ?
ಸೆಪ್ಟೆಂಬರ್‌ ೨ನೇ ತಾರೀಖಿನಂದು ಘನಮಠೇಶ್ವರ ಗ್ರಾಮೀಣ ವಿದ್ಯಾವರ್ಧಕ ಶಾಲೆಯಲ್ಲಿ ೨ನೇ ತರಗತಿ ವಿದ್ಯಾರ್ಥಿ ಅಖಿಲ್‌ ತರಗತಿಯಲ್ಲಿ ಸಮವಸ್ತ್ರದೊಳಗೆ ಮಲವಿಸರ್ಜನೆ ಮಾಡಿಕೊಂಡಿದ್ದ. ವಿದ್ಯಾರ್ಥಿಯ ಈ ವರ್ತನೆ ಸಹಿಸದ ಶಿಕ್ಷಕ ಆತನ ಮೇಲೆ ಬಿಸಿ ನೀರು ಸುರಿದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಸ್ಕಿ ಪೊಲೀಸ್‌ ಠಾಣೆಗೆ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ದೂರು ನೀಡಿತ್ತು.

ನಾನು ವಿದ್ಯಾರ್ಥಿ ಅಖಿಲ್ ಮೇಲೆ ಬಿಸಿನೀರು ಎರಚಿಲ್ಲ

ಪ್ರಕರಣ ಪ್ರಮುಖ ಆರೋಪಿ ಶಿಕ್ಷಕ ಹುಲಿಗೆಪ್ಪ ಕಂದಗಲ್ಲ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ವಿದ್ಯಾರ್ಥಿ ಅಖಿಲ್ ಮೇಲೆ ಬಿಸಿನೀರು ಎರಚಿಲ್ಲ. ಅಖಿಲ್ ನನ್ನ ತರಗತಿಯಲ್ಲಿ ಮಲವಿಸರ್ಜನೆ ‌ಮಾಡಿಕೊಂಡಿದ್ದ. ಅವನೇ ತನ್ನ ಮೈಮೇಲೆ ಬಿಸಿನೀರು ಎರಚಿಕೊಂಡಿದ್ದಾನೆ. ಒಬ್ಬ ಶಿಕ್ಷಕನಾಗಿ ಈ ರೀತಿಯ ‌ಕೃತ್ಯ ಎಸೆಗಲು ಸಾಧ್ಯವೇ? ನನ್ನ ಮೇಲಿನ ಆರೋಪದಿಂದ ಮನನೊಂದ ಶಾಲೆಗೆ ಗೈರು ಆಗಿದ್ದೇನೆ. ಶಾಸಕ ಮಾನಪ್ಪರ ಕೊಲೆ ಪ್ರಕರಣದ ಆರೋಪಿ ಹೌದು. ಈ ಬಗ್ಗೆ ತನಿಖೆ ನಡೆಯಲಿ, ಎಲ್ಲ ರೀತಿಯ ತನಿಖೆಗೆ ಬದ್ಧ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | ವಿದ್ಯಾರ್ಥಿ ಮೇಲೆ ಬಿಸಿನೀರು ಎರಚಿದ್ದ ಶಿಕ್ಷಕನ ವಿರುದ್ಧ ದೂರು ದಾಖಲು

Exit mobile version