Site icon Vistara News

ದೆಹಲಿ-ಬೆಳಗಾವಿ ನೇರ ವಿಮಾನ ಸಂಚಾರ ಸೇವೆ ಡಿ.9ರಿಂದ ಸ್ಥಗಿತಕ್ಕೆ ಜನಾಕ್ರೋಶ; ಹುಬ್ಬಳ್ಳಿ ರಾಜಕಾರಣಿಗಳ ಪ್ರಭಾವ ಎಂದು ಆರೋಪ

Belagavi

ಬೆಳಗಾವಿ: ದೆಹಲಿ-ಬೆಳಗಾವಿ ನೇರ ವಿಮಾನ ಸಂಚಾರ ಸೇವೆಯನ್ನು ಡಿಸೆಂಬರ್​ 9ರಿಂದ ಸ್ಥಗಿತಗೊಳಿಸಲು ಕೇಂದ್ರ ವಿಮಾನಯಾನ ಸಚಿವಾಲಯ ನಿರ್ಧಾರ ಮಾಡಿದ್ದು, ಬೆಳಗಾವಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ದೆಹಲಿ ಮತ್ತು ಬೆಳಗಾವಿ ನೇರ ವಿಮಾನಯಾನ ಸೇವೆ 2021ರ ಆಗಸ್ಟ್​​ನಿಂದ ಪ್ರಾರಂಭವಾಗಿತ್ತು. ಆಗಸ್ಟ್​​ನಿಂದ 2022ರ ಮಾರ್ಚ್​​ವರೆಗೆ ವಾರದಲ್ಲಿ ಎರಡು ದಿನ ಮಾತ್ರ ದೆಹಲಿ-ಬೆಳಗಾವಿ ವಿಮಾನ ಸಂಚಾರ ಮಾಡುತ್ತಿತ್ತು. ಮಾರ್ಚ್​ ತಿಂಗಳಿಂದ ಪ್ರತಿದಿನವೂ ಸಂಚಾರ ಸೇವೆ ಲಭ್ಯವಿತ್ತು. ಇಲ್ಲಿ ಪ್ರಯಾಣಿಕರೂ ಕೂಡ ಇರುತ್ತಿದ್ದರು. ಹಾಗಿದ್ದಾಗ್ಯೂ ಡಿ.9ರಿಂದ ಬೆಳಗಾವಿ-ದೆಹಲಿ ನೇರ ವಿಮಾನ ಸಂಚಾರ ನಿಲ್ಲಿಸಲು ಕೇಂದ್ರ ಸಚಿವಾಲಯ ನಿರ್ಧಾರ ಮಾಡಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹುಬ್ಬಳ್ಳಿ ರಾಜಕೀಯ ನಾಯಕರ ಪ್ರಭಾವ!
ಬೆಳಗಾವಿಯಿಂದ ನೇರವಾಗಿ ದೆಹಲಿಗೆ ವಿಮಾನ ಸಂಚಾರ ಇರುವಂತೆ, ಹುಬ್ಬಳ್ಳಿಯಿಂದಲೂ ರಾಷ್ಟ್ರರಾಜಧಾನಿಗೆ ನೇರ ವಿಮಾನ ಸಂಚಾರ ಸೇವೆ ಇದೆ. ಇದೇ ವರ್ಷ ನವೆಂಬರ್​​ 13ರಿಂದ ಪ್ರಾರಂಭವಾಗಿದೆ. ಹೀಗೆ ಹೊಸದಾಗಿ ಶುರುವಾದ ಹುಬ್ಬಳ್ಳಿ-ದೆಹಲಿ ನೇರ ವಿಮಾನಕ್ಕೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಕಾರಣಕ್ಕೆ, ಅಲ್ಲಿನ ರಾಜಕೀಯ ನಾಯಕರು ಕೇಂದ್ರ ವಿಮಾನಯಾನ ಇಲಾಖೆ ಮೇಲೆ ಒತ್ತಡ ಹೇರಿ, ಬೆಳಗಾವಿ-ದೆಹಲಿ ವಿಮಾನ ಸೇವೆ ನಿಲ್ಲಿಸಿದ್ದಾರೆ ಎಂಬುದು ಜನರ ಆರೋಪ.

ಬೆಳಗಾವಿಯಿಂದ ದೆಹಲಿಗೆ ನೇರ ವಿಮಾನ ಯಾನ ತಪ್ಪಿಸಿದರೆ, ರಾಜ್ಯದ ವಿವಿಧ ಭಾಗಗಳ ಜನರು ದೆಹಲಿಗೆ ಹೋಗಬೇಕಾದರೆ ಹುಬ್ಬಳ್ಳಿಗೆ ಆಗಮಿಸುತ್ತಾರೆ. ಇದರಿಂದ ಇಲ್ಲಿನ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತದೆ. ಇದೇ ಕಾರಣಕ್ಕೇ ಬೆಳಗಾವಿ-ದೆಹಲಿ ವಿಮಾನ ಸಂಚಾರ ಸ್ಥಗಿತಕ್ಕೆ ನಿರ್ಧರಿಸಲಾಗಿದೆ ಎಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗಾವಿ-ದೆಹಲಿ ನೇರ ವಿಮಾನ ಸಂಚಾರ ಸ್ಥಗಿತಗೊಂಡಿದ್ದಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ‌ಅಶೋಕ ಚಂದರಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ರಾಜಕೀಯ ನಾಯಕರಲ್ಲಿ ಇರುವಷ್ಟು ಒಗ್ಗಟ್ಟು ಬೆಳಗಾವಿ ಜನಪ್ರತಿನಿಧಿಗಳಲ್ಲಿ ಇಲ್ಲ. ಹುಬ್ಬಳ್ಳಿಗೆ ಹೋಲಿಸಿದರೆ ಬೆಳಗಾವಿಯಲ್ಲಿ ರಾಜಕೀಯ ಪ್ರಮುಖರ, ಸಾಮಾನ್ಯ ಜನರ ಸಂಖ್ಯೆಯೂ ಹೆಚ್ಚು. ಬೆಳಗಾವಿಗೆ ಸಿಕ್ಕ ಯೋಜನೆ ಈಗ ಹುಬ್ಬಳ್ಳಿ ಪಾಲಾಗ್ತಿದೆ. ಆದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಬೆಳಗಾವಿಯಲ್ಲಿ ಆರಂಭವಾಗಬೇಕಿದ್ದ ಹೈಕೋರ್ಟ್​ ಪೀಠ ಧಾರವಾಡಕ್ಕೆ ಶಿಫ್ಟ್ ಆಯಿತು. ಇಲ್ಲಿಗೆ ಬರಬೇಕಿದ್ದ ರೈಲ್ವೆ, ವಿದ್ಯುತ್ ನಿಗಮ ಸೇರಿ ಹಲವು ಯೋಜನೆಗಳೆಲ್ಲ ಧಾರವಾಡ ಜಿಲ್ಲೆ ಪಾಲಾದವು. ಈಗ ವಿಮಾನ ಸಂಚಾರವೂ ಹಾಗೇ ಆಯ್ತು. ಗಡಿ ವಿಚಾರದಲ್ಲೂ ಮೌನ, ಸಾರ್ವಜನಿಕರ ಸೌಲಭ್ಯ ವಿಚಾರದಲ್ಲೂ ಇಲ್ಲಿನ ರಾಜಕಾರಣಿಗಳು ಮೌನ ವಹಿಸಿದ್ರೆ ಹೇಗೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ.

ದೆಹಲಿ-ಬೆಳಗಾವಿ ನೇರ ವಿಮಾನ ಸೇವೆ ಸ್ಥಗಿತಗೊಂಡರೆ ಬೆಳಗಾವಿಯ ಒಟ್ಟಾರೆ ಅಭಿವೃದ್ಧಿಗೆ ಪೆಟ್ಟು ಬೀಳುತ್ತಿದೆ. ಇಲ್ಲಿನ ಜನರು ದೆಹಲಿಗೆ ಹೋಗಬೇಕು ಎಂದರೆ ಗೋವಾಕ್ಕೋ, ಪುಣೆಗೋ ಹೋಗಿ, ಅಲ್ಲಿಂದ ಹೋಗಬೇಕಾಗುತ್ತದೆ. ಹಾಗಾಗಿ ಸ್ಥಗಿತ ನಿರ್ಧಾರ ಕೂಡಲೇ ಹಿಂಪಡೆಯಬೇಕು ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Akasa Air | ಪುಣೆ-ಬೆಂಗಳೂರು ಮಧ್ಯೆ ವಿಮಾನ ಸಂಚಾರ ಪ್ರಾರಂಭಿಸಿದ ಆಕಾಸ ಏರ್​​; ದಿನಕ್ಕೆ 3 ಫ್ಲೈಟ್​ಗಳ ಹಾರಾಟ

Exit mobile version