ಶೃಂಗೇರಿ: ನಗರದಲ್ಲಿ ಸುಸಜ್ಜಿತ ೧೦೦ ಬೆಡ್‌ಗಳ ಆಸ್ಪತ್ರೆಯ ಬೇಡಿಕೆ (Demand for hospital) ಮುಂದಿಟ್ಟುಕೊಂಡು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಪ್ರತಿಭಟನೆ ಈಗ ಮರುಜೀವ ಪಡೆದುಕೊಂಡಿದೆ. ಶೃಂಗೇರಿ ಪರಿಸರದಲ್ಲಿ ಅಪಘಾತ ಸಂಭವಿಸಿದೆ, ಸಾವು ನೋವು ಸಂಭವಿಸಿದರೆ ತುರ್ತು ಚಿಕಿತ್ಸೆ ನೀಡಲು ಯಾವುದೇ ಸುಸಜ್ಜಿತ ಆಸ್ಪತ್ರೆಗಳೇ ಇಲ್ಲ. ಜೀವ ಉಳಿಸಬಲ್ಲ ಪ್ರಾಥಮಿಕ ಚಿಕಿತ್ಸೆಗೂ ಪರದಾಡಬೇಕಾಗಿದೆ. ಏನಿದ್ದರೂ ಶಿವಮೊಗ್ಗ, ಮಂಗಳೂರು ಇಲ್ಲವೇ ಮಣಿಪಾಲಕ್ಕೆ ಕರೆದೊಯ್ಯಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ಶೃಂಗೇರಿಯಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ಸ್ಥಾಪಿಸಬೇಕು ಎನ್ನುವುದು ಈ ಭಾಗದ ಜನರ ಬಹುದಿನದ ಬೇಡಿಕೆ.
ಶೃಂಗೇರಿ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರ. ನಿತ್ಯ ಸಾವಿರಾರು ವಾಹನಗಳು ಶೃಂಗೇರಿಗೆ ಬಂದು ಹೋಗುತ್ತವೆ. ಏನಾದರೂ ಸಣ್ಣ ಸಮಸ್ಯೆಗೂ ಶಿವಮೊಗ್ಗ, ಉಡುಪಿ ಅಥವಾ ಮಂಗಳೂರಿಗೆ ಹೋಗಬೇಕು. ಹಾಗಾಗಿ, ಶೃಂಗೇರಿಯ ಸಮಾನಮನಸ್ಕ ಯುವಕರು ಆಸ್ಪತ್ರೆಗಾಗಿ ಹೋರಾಟ ಆರಂಭಿಸಿದ್ದರು.
ಈ ವೇಳೆ ಸರ್ಕಾರ ಹಾಗೂ ಅಧಿಕಾರಿಗಳು ಒಂದು ತಿಂಗಳ ಒಳಗಾಗಿ ಆಸ್ಪತ್ರೆಯನ್ನು ಮಂಜೂರು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಶೃಂಗೇರಿಗೆ ಬಂದಿದ್ದ ಸಿಎಂ ಬೊಮ್ಮಾಯಿ ಕೂಡ ಶೀಘ್ರದಲ್ಲೇ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ಆದರೆ ಒಂದು ವರ್ಷವಾದರೂ ಆಸ್ಪತ್ರೆಯಾಗದ ಕಾರಣ ಯುವಕರು ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ. ಬುಧವಾರ ರಾತ್ರಿ ಶೃಂಗೇರಿಯ ಪ್ರಮುಖ ಬೀದಿಗಳಲ್ಲಿ ತಮಟೆ ಭಾರಿಸಿಕೊಂಡು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರ ಮೈಕ್ ಸೆಟ್ ಬಳಸಲು ಅನುಮತಿ ನೀಡದ ಹಿನ್ನೆಲೆ 100 ಬೆಡ್ ಆಸ್ಪತ್ರೆಗೆ ಆಗ್ರಹಿಸಿ ತಮಟೆ ಬಾರಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ವರ್ಷವೂ ಶೃಂಗೇರಿಯ ಸಮಾನ ಮನಸ್ಕ ಯುವಕರ ತಂಡ 100 ಬೆಡ್ ನ ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಆಸ್ಪತ್ರೆ ಇಲ್ಲದ ಊರು. ವಾಹನ ಸವಾರರು ನಿಧಾನವಾಗಿ ವಾಹನ ಚಲಾಯಿಸುವಂತೆ ಮನವಿಯ ಬಿತ್ತಿಪತ್ರಗಳನ್ನು ಶೃಂಗೇರಿಯ ಪ್ರಮುಖ ರಸ್ತೆಗಳಲ್ಲಿ ಹಾಕಿದ್ದರು. ಆದರೆ, ಯಾವುದೇ ಫಲ ಸಿಕ್ಕಿರಲಿಲ್ಲ.
ಇದನ್ನೂ ಓದಿ | Multi Specialty Hospital | ಆಸ್ಪತ್ರೆಗಾಗಿ ಕುಮಟಾದಲ್ಲಿ 20 ಎಕರೆ ಜಾಗ ಗುರುತು: ಸಚಿವ ಕೋಟ