ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ತಮ್ಮೂರ ಕೆರೆಗೆ (Lake) ಸಮರ್ಪಕವಾಗಿ ನೀರು ಭರ್ತಿ ಮಾಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ವಿಠಲಾಪುರ ಗ್ರಾಮಸ್ಥರು ಮತದಾನವನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮದ ಮುಖಂಡರಾದ ನಾಗರಾಜ ಅಸುಂಡಿ, ಪಂಪಾಪತಿ ಮತ್ತು ಇತರರು, ಕೆರೆ ತುಂಬಿಸುವ ಯೋಜನೆಯಲ್ಲಿ ವಿಠಲಾಪುರ ಕೆರೆಗೆ ಪೈಪ್‌ಲೈನ್ ಮಾಡಲಾಗಿದೆ. ಆದರೆ ಚಿಕ್ಕಮಾದಿನಾಳ ಎಂಬ ಗ್ರಾಮದ ಬಳಿ ವಾಲ್ವ್ ಅನ್ನು ಮಾಡಲಾಗಿದ್ದು, ಈ ವಾಲ್ವ್ ಮಾಡಿರುವುದರಿಂದ ನಮ್ಮೂರ ಕೆರೆಗೆ ನೀರು ಬರುವುದಿಲ್ಲ ಎಂದು ಆರೋಪಿಸಿದರು.
ಕೆರೆಗೆ ಬರಬೇಕಾದ ನೀರು ಪೋಲು
ಯೋಜನೆಯ ಪ್ರಕಾರ ಚಿಕ್ಕಮಾದಿನಾಳ ಗ್ರಾಮದಲ್ಲಿ ವಾಲ್ವ್ ಮಾಡಲು ಅವಕಾಶವಿಲ್ಲ. ಆದರೂ ಅನಗತ್ಯವಾಗಿ ಅಲ್ಲಿ ವಾಲ್ವ್ ಅನ್ನು ಮಾಡಿದ್ದಾರೆ. ಇದರಿಂದ ನಮ್ಮೂರ ಕೆರೆಗೆ ಬರಬೇಕಾದ ನೀರು ಅಲ್ಲಿಯೇ ಪೋಲಾಗುತ್ತಿದೆ ಎಂದು ದೂರಿದರು.
ಈಗ ತಾತ್ಕಾಲಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಆದರೆ, ಚಿಕ್ಕಮಾದಿನಾಳ ಗ್ರಾಮದ ಬಳಿಯ ವಾಲ್ವ್ ಅನ್ನು ಶಾಶ್ವತವಾಗಿ ಬಂದ್ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಇದನ್ನೂ ಓದಿ: BJP Manifesto : ಬಿಜೆಪಿ ಉಚಿತ ಘೋಷಣೆಗೆ ಕಾಂಗ್ರೆಸ್ ಲೇವಡಿ; ನಾವು ಮಾಡಿದ್ರೆ ತಪ್ಪು, ನೀವು ಮಾಡಿದ್ರೆ ಸರೀನಾ?
ಈ ವಿಷಯವನ್ನು ಈಗಾಗಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಸಗರಪ್ಪ ಜಲ್ಲಿ, ಯಮನೂರ್, ರಾಮಪ್ಪ, ಶಿವು, ಕೃಷ್ಣಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.