Site icon Vistara News

Budget Session: ಬೆಟ್ಟಿಂಗ್‌ ದಂಧೆಗೆ ಕಡಿವಾಣ ಹಾಕುವಂತೆ ಪಕ್ಷಾತೀತ ಒತ್ತಾಯ; ಕಠಿಣ ಕ್ರಮ ಎಂದ ಡಾ.ಜಿ. ಪರಮೇಶ್ವರ್

Dr G parameshwara

ಬೆಂಗಳೂರು: ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕು ಎಂಬ ಕೂಗು ವಿಧಾನಸೌಧದಲ್ಲಿ ಪಕ್ಷಾತೀತವಾಗಿ ಮಂಗಳವಾರ ಕೇಳಿಬಂತು. ಬೆಟ್ಟಿಂಗ್‌ ಎಂಬುವುದು ಸಾಮಾಜಿಕ ಪಿಡುಗಾಗಿದೆ, ಬುಕ್ಕಿಗಳು ಮೂರು ಪಕ್ಷಗಳ ಜತೆ ಗುರುತಿಸಿಕೊಂಡಿದ್ದಾರೆ. ಅವರನ್ನು ಮಟ್ಟ ಹಾಕಬೇಕು ಎಂದು ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಶಾಸಕರು ಒತ್ತಾಯಿಸಿದರು.

ಗಮನ ಸೆಳೆಯುವ ಸೂಚನೆಯಲ್ಲಿ ಬೆಟ್ಟಿಂಗ್ ವಿಚಾರ ಪ್ರಸ್ತಾಪಿಸಿ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಅವರು, ಮಂಡ್ಯ ಜಿಲ್ಲೆಯ ಬೆಟ್ಟಿಂಗ್ ದಂಧೆಯ ಕರಾಳ ಮುಖವನ್ನು ತೆರೆದಿಡುತ್ತಾ, ಮಂಡ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನಿಂದ ಯುವಕರ ಜೀವನ ಹಾಳಾಗುತ್ತಿದೆ. ಬೆಟ್ಟಿಂಗ್‌ನಲ್ಲಿ 11 ಸಾವಿರ ರೂ.ಗಳಿಗಾಗಿ ಯುವಕನೊಬ್ಬನ ಕೊಲೆ ಆಗಿದೆ. ಮಂಡ್ಯದ ಪ್ರತಿ ಮನೆಯಲ್ಲಿ ಯುವಕರು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ಬೆಟ್ಟಿಂಗ್ ದಂಧೆಕೋರರು ಯುವಕರ ಆಸ್ತಿ, ಬೈಕ್‌ಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಸದನದ ಗಮನ ಸೆಳೆದರು.

ಇದನ್ನೂ ಓದಿ | Karnataka Budget Session 2024: 16 ಸಾವಿರ ಅತಿಥಿ ಉಪನ್ಯಾಸಕರ ಕಾಯಂ ಇಲ್ಲವೆಂದ ಸರ್ಕಾರ!

ಕ್ರಿಕೆಟ್ ಬೆಟ್ಟಿಂಗ್ ನಡೆಸುವವರು ಮೂರು ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದಾರೆ. ಮಂಡ್ಯಕ್ಕೆ ಈ‌ ಹಿಂದೆ ಬಂದಿದ್ದ ಮಾಜಿ ಸಿಎಂ ಒಬ್ಬರು ಕ್ರಿಕೆಟ್ ಬುಕ್ಕಿಯನ್ನು ಬಿಡುಗಡೆ ಮಾಡಲು ಜಿಲ್ಲಾ ಎಸ್‌ಪಿಗೆ ಕರೆ ಮಾಡಿದ್ದರು. ಈ ರೀತಿ ರಾಜಕಾರಣಿಗಳು ಕ್ರಿಕೆಟ್ ಬುಕ್ಕಿಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಬುಕ್ಕಿಗಳನ್ನು ಮಟ್ಟ ಹಾಕಬೇಕಿ, ಪೊಲೀಸರ ಜತೆ ಅವರ ಹೊಂದಾಣಿಕೆ ತಪ್ಪಿಸಬೇಕು ಎಂದು ಕೋರಿದರು.

ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಬೆಟ್ಟಿಂಗ್ ಸಾಮಾಜಿಕ ಪಿಡುಗಾಗಿದೆ. ಒಂದು ಕ್ರಿಕೆಟ್ ಮ್ಯಾಚ್‌ನಲ್ಲಿ 1000 ಕೋಟಿ ರೂಪಾಯಿ ಬೆಟ್ಟಿಂಗ್ ನಡೆಯತ್ತದೆ. ಇದು ಕೇವಲ ಮಂಡ್ಯ ಮಾತ್ರವಲ್ಲ,‌ ಬೆಂಗಳೂರಿನಲ್ಲೂ ‌ನಡೆಯುತ್ತದೆ. ಇವರಾರು ಪೊಲೀಸರಿಗೆ ಬಗ್ಗಲ್ಲ. ಸದನದಲ್ಲಿ ಇರುವವರೇ ಇವರ ಪರವಾಗಿ ರೆಕಮೆಂಡ್ ಮಾಡಲು ಬರ್ತಾರೆ. ಇದನ್ನು ಮಟ್ಟ ಹಾಕಲು ಸ್ಪೆಷಲ್‌ ಸ್ಕ್ವಾಡ್‌ ರಚಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ತಮ್ಮ ಕ್ಷೇತ್ರದ ಸಮಸ್ಯೆಯನ್ನು ಹೇಳಿಕೊಂಡ ಬಿಜೆಪಿ ಸದಸ್ಯ ಶರಣು ಸಲಗಾರ್ ಅವರು, ರಾಜ್ಯದಲ್ಲಿ ಅತ್ಯಂತ ಅಪಾಯಕಾರಿ ವಿಷಯ ಕ್ರಿಕೆಟ್ ಬೆಟ್ಟಿಂಗ್ ಹಾಗೂ ರಮ್ಮಿ ಗೇಮ್‌ ಎಂದರು.

ಹೋಂ ಮಿನಿಸ್ಟರ್ ಆದೇಶ ಮಾಡಿದರೆ ಸಂಜೆಯ ಒಳಗೆ ಅವರು ಬಿಲ ಸೇರುತ್ತಾರೆ. ಹೀಗೆ ಬಿಟ್ಟರೆ ಕ್ರಿಕೆಟ್ ಬೆಟ್ಟಿಂಗ್ ನಡೆಸುವ ಐವತ್ತು ಜನ ಶಾಸಕರಾಗ್ತಾರೆ. ಇದನ್ನು ಮಟ್ಟ ಹಾಕಿದರೆ ಗೃಹ ಸಚಿವರು ದೇವರಾಗ್ತಾರೆ ಎಂದರು.

ಇದನ್ನೂ ಓದಿ | Basavanna Photo : ಫೆ. 17ರಂದು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಅನಾವರಣ

ಶಾಸಕರ ಬೇಡಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಮಂಡ್ಯ ಜಿಲ್ಲೆಯಲ್ಲಿ 2020 – 21ರಲ್ಲಿ ಎರಡು ಪ್ರಕರಣ ದಾಖಲಾಗಿತ್ತು, ಶಿಕ್ಷೆ ಕೂಡ ಆಗಿದೆ. 2023ರಲ್ಲಿ 2 ಪ್ರಕರಣ ದಾಖಲಾಗಿದ್ದು, ಅದರಲ್ಲಿ ಒಬ್ಬರಿಗೆ ಶಿಕ್ಷೆ ಆಗಿದೆ. ಇದು ಇಷ್ಟಕ್ಕೆ ನಿಲ್ಲುತ್ತೆ ಅಂತ ಹೇಳಲು ಸಾಧ್ಯವಿಲ್ಲ. ಇಡೀ ರಾಜ್ಯದಲ್ಲಿ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಚರ್ಚೆ ಮಾಡಿ ಒಂದು ಕಠಿಣ ಕ್ರಮ ತರಬೇಕು. ರಾಜ್ಯಕ್ಕೆ ಸೀಮಿತವಾಗಿ ಕಠಿಣ ಕ್ರಮ ತರುತ್ತೇವೆ. ಶೇ.28 ಜಿಎಸ್‌ಟಿ ಬರುತ್ತೆ ಎಂದು ದಂಧೆಗೆ ಅನುಮತಿ ಕೊಡಬಾರದು ಎಂದರು.

Exit mobile version