ಬೆಂಗಳೂರು: ವಿಶೇಷಚೇತನರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲಾಗುವುದು. ಮುಂದಿನ ಅಯವ್ಯಯದ ವೇಳೆಗೆ ವಿಶೇಷಚೇತನರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (laxmi hebbalkar) ಹೇಳಿದ್ದಾರೆ.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ “ವಿಶ್ವ ವಿಶೇಷಚೇತನರ ದಿನಾಚರಣೆ’ (International Day of Persons with Disabilities) ಸಮಾರಂಭದಲ್ಲಿ ಮಾತನಾಡಿದ ಸಚಿವೆ, ವಿಶೇಷಚೇತನರನ್ನು ಸಾಮಾನ್ಯರಂತೆ ಕಾಣಬೇಕು, ಅವರ ಬೇಡಿಕೆಗಳನ್ನು ಈಡೇರಿಸಲು ವೈಯಕ್ತಿಕವಾಗಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ತಿಳಿಸಿದರು.
ವಿಶೇಷಚೇತನರ ಜತೆಗೆ ಸರ್ಕಾರ ಇರುತ್ತದೆ. ಕೇವಲ ಒಂದು ದಿನಕ್ಕೆ ವಿಶೇಷಚೇತನರ ಬಗ್ಗೆ ಚಿಂತಿಸಬಾರದು. ವರ್ಷಪೂರ್ತಿ ಸರ್ಕಾರ ಅವರ ಕಾಳಜಿ ವಹಿಸುತ್ತದೆ. ಸ್ವಾಭಿಮಾನ ಹಾಗೂ ಸ್ವಾವಲಂಬನೆ ಜೀವನಕ್ಕೆ ಸರ್ಕಾರ ಸಹಕಾರ ನೀಡುತ್ತದೆ ಎಂದು ಸಚಿವರು ಹೇಳಿದರು. ವಿಶೇಷವಾಗಿ ವಿಶೇಷಚೇತನರ ಯಾರ ಮೇಲೂ ಅವಲಂಬಿರಾಗದೆ ಸ್ವತಂತ್ರವಾಗಿ ಓಡಾಡುವಂತಾಗಬೇಕು ಎಂದರು.
ಇದನ್ನೂ ಓದಿ | Telangana Elections 2023 : ರೇವಂತ್ ರೆಡ್ಡಿ: ಅಂದು ಎಬಿವಿಪಿ ನಾಯಕ, ಇಂದು ಕಾಂಗ್ರೆಸ್ ಸಿಎಂ ಪಟ್ಟದತ್ತ
ಅವರಿದ್ದಲ್ಲೇ ಸರ್ಕಾರಿ ಸೌಲಭ್ಯ ಸಿಗಬೇಕು, ಅವರಿದ್ದಲ್ಲೇ ಆರೋಗ್ಯ ಸೇವೆ ಸಿಗಬೇಕು. ವಿಶೇಷಚೇತನರು ದೈಹಿಕವಾಗಿ ಅಸಮರ್ಥರಿದ್ದರೂ ಮಾನಸಿಕವಾಗಿ ತುಂಬಾ ಸದೃಢರು. ಅವರು ಮಾಡಿರುವ ಸಾಧನೆಯೇ ಇದಕ್ಕೆ ಸಾಕ್ಷಿ ಎಂದು ಸಚಿವರು ಹೇಳಿದರು.
ರಾಜ್ಯ ಸರ್ಕಾರ ಈಗಾಗಲೇ ವಿಶೇಷಚೇತನರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ವಿಶೇಷಚೇತನರ ಈ ವರ್ಷ 284 ಕೋಟಿ ರೂಪಾಯಿಗಳನ್ನು ಸರ್ಕಾರ ನೀಡಿದೆ. ಸಾಮಾನ್ಯ ಜನರಂತೆ ವಿಶೇಷಚೇತನರು ಜೀವನ ನಡೆಸಲು ಸರ್ಕಾರ ಎಲ್ಲಾ ರೀತಿಯಲ್ಲೂ ಸಹಕಾರ ನೀಡಲಿದೆ ಎಂದರು.
ಪಾಲಕರಿಗೆ ಹೆಚ್ಚಿನ ನೆರವು
ಸಾಮಾನ್ಯ ಮನುಷ್ಯರಿಗಿಂತ ವಿಶೇಷಚೇತನರ ಮೆದುಳು ಎರಡು ಪಟ್ಟು ಹೆಚ್ಚು ಕೆಲಸ ಮಾಡುತ್ತದೆ. ಇದಕ್ಕೆ ಅಂಧರು ಬರೆಯುವ ಚಿತ್ರಕಲೆಯೇ ಸಾಕ್ಷಿ. ವಿಶೇಷಚೇತನರನ್ನು ಪಾಲಿಸುತ್ತಿರುವ ಪಾಲಕರು ಹಾಗೂ ಶಿಕ್ಷಕರ ಶ್ರಮ, ತಾಳ್ಮೆಯನ್ನು ಮೆಚ್ಚಲೇಬೇಕು. ಅವರಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು. ಅವರ ಸೇವಾಮನೋಭಾವವನ್ನು ನಾವು ಗೌರವಿಸಬೇಕು. ಅವರ ಸೇವೆಯನ್ನು ಗುರುತಿಸಿ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆ ಎಂದು ಸಚಿವರು ಹೇಳಿದರು.
‘ವಿಶ್ವ ವಿಕಲಚೇತನರ ದಿನಾಚರಣೆ-2023’ ಅಂಗವಾಗಿ ತೆರೆಯಲಾಗಿದ್ದ ವಿವಿಧ ಇಲಾಖೆಗಳ ಕಾರ್ಯ ಯೋಜನೆ ಮಾಹಿತಿಗಳ ಪ್ರದರ್ಶನದ ಮಳಿಗೆಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶ್ವ ವಿಶೇಷಚೇತನರಿಗೆ, ಸಂಸ್ಥೆಗಳಿಗೆ ಹಾಗೂ ವಿಶೇಷ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಿದರು.
ಇದನ್ನೂ ಓದಿ | CM Siddaramaiah: 4000 ವಿಶೇಷಚೇತನರಿಗೆ ದ್ವಿಚಕ್ರ ವಾಹನ ವಿತರಣೆ: ಸಿದ್ದರಾಮಯ್ಯ
ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭವನ್ನು ಉದ್ಘಾಟಿಸಿದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಎನ್. ಸಿದ್ದೇಶ್ವರ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತರಾದ ದಾಸ್ ಸೂರ್ಯವಂಶಿ, ಕರ್ನಾಟಕ ಬೌದ್ಧಿಕ ವಿಕಲಚೇತನ ಮಕ್ಕಳ ಪಾಲಕರ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಗಡ್ಕರಿ.ಜೆ.ಪಿ ಉಪಸ್ಥಿತರಿದ್ದರು.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: