ಬೆಂಗಳೂರು: ಮಳೆಗಾಲ (Rain Effect) ಶುರುವಾಯಿತು ಎಂದರೆ ಸಾಂಕ್ರಾಮಿಕ ರೋಗಗಳು ಹೆಚ್ಚು ಜನರನ್ನು ಬಾಧಿಸುತ್ತವೆ. ಅದರಲ್ಲೂ ಡೆಂಗ್ಯೂ ಪ್ರಕರಣಗಳು (Dengue fever) ಈ ಸಮಯದಲ್ಲಿ ಬಹುಬೇಗ ಹರಡುತ್ತವೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ನಿಯಂತ್ರಿಸಲು ಅಧಿಕಾರಿಗಳು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ, ಬಿಬಿಎಂಪಿ ಹೊಸದೊಂದು ಕೆಲಸಕ್ಕೆ ಕೈ ಹಾಕಲು ಮುಂದಾಗಿದೆ. ಈ ಹಿಂದೆ ಲಾರ್ವಾ ಸರ್ವೇ ಮಾಡುತ್ತಿದ್ದ ಪಾಲಿಕೆ, ಇದೀಗ ಟಾಟಾ ಇನ್ಸಿಟ್ಯೂಟ್ ಆಫ್ ಜನರಿಕ್ ಟೆಕ್ನಾಲಜಿ ಜತೆ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದೆ. ಡೆಂಗ್ಯೂ ತಡೆಯಲು ರೊಬೊಟಿಕ್ಸ್ ಟೆಕ್ನಾಲಜಿ ಪಾರ್ಕ್ ಡ್ಯಾಶ್‌ಬೋರ್ಡ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಡ್ಯಾಶ್‌ಬೋರ್ಡ್ ಮೂಲಕ ಡೆಂಗ್ಯೂ ಕಂಟ್ರೋಲ್ ಮಾಡಲು ಪ್ರಸ್ತಾವನೆ ಸಲ್ಲಿಸಿದೆ.
ಮಳೆಗಾಲದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಯಾವ ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ ಎಂಬ ಮಾಹಿತಿಯನ್ನು ಡ್ಯಾಶ್ ಬೋರ್ಡ್ ಮೂಲಕ ಪಡೆಯಲಾಗುತ್ತದೆ. ಡ್ಯಾಶ್‌ಬೋರ್ಡ್‌ನಲ್ಲಿ ಯಾವ್ಯಾವ ಜಾಗದಲ್ಲಿ ಡೆಂಗ್ಯೂ ಕೇಸ್ ಹೆಚ್ಚಿದೆ, ಆ ಭಾಗದಲ್ಲಿ ಲಾರ್ವಾ ಸರ್ವೆ ಸೇರಿದಂತೆ ನಿಯಂತ್ರಣ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಈ ಸಾಫ್ಟ್ವೇರ್ ಸೊಳ್ಳೆಯಿಂದ ಹರಡುವ ರೋಗ ಯಾವಾಗ ಮತ್ತು ಎಲ್ಲಿ ಸಂಭವಿಸಬಹುದು ಎಂಬುದನ್ನು ಊಹಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಬಿಬಿಎಂಪಿಗೆ ಸಹಾಯ ಮಾಡಲಿದೆ. ಜತೆಗೆ ಔಷಧಿಗಳ ಖರೀದಿ, ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸುವುದು ಮತ್ತು ಫಾಗಿಂಗ್ ಅಂತಹ ತಡೆಗಟ್ಟುವ ಕ್ರಮಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಇನ್ನಷ್ಟು ತಯಾರಿ ಮಾಡಲು ಈ ಹೊಸ ಡ್ಯಾಶ್‌ಬೋರ್ಡ್ ಸಹಾಯ ಮಾಡಲಿದೆ. ಸದ್ಯ ಡ್ಯಾಶ್‌ಬೋರ್ಡ್ ರಚನೆಗೆ ಸಕಲ ಸಿದ್ಧತೆ ನಡೆದಿದ್ದು, ಇದು ಅನುಷ್ಠಾನಕ್ಕೆ ಬಂದರೆ ಎಷ್ಟರ ಮಟ್ಟಿಗೆ ಡೆಂಗ್ಯೂಗೆ ಕಡಿವಾಣ ಬೀಳುತ್ತದೆ ಕಾದು ನೋಡಬೇಕಿದೆ.
ಕಳೆದ 2020ರಲ್ಲಿ 3,823 ಮಂದಿಯಲ್ಲಿ ಡೆಂಗ್ಯೂ ಬಾಧಿಸಿತ್ತು, 05 ಮಂದಿ ಮೃತಪಟ್ಟಿದ್ದರು. 2021ರಲ್ಲಿ 7,393 ಪ್ರಕರಣಗಳು ಪತ್ತೆಯಾಗಿತ್ತು, 2022ರಲ್ಲಿ 9,889 ಮಂದಿಗೆ ಡೆಂಗ್ಯೂ ಪತ್ತೆಯಾಗಿತ್ತು. ಪ್ರಸಕ್ತ ವರ್ಷ ಡೆಂಗ್ಯೂ ಪ್ರಕರಣಗಳು 200ಕ್ಕೂ ಜನರಲ್ಲಿ ಕಾಣಿಸಿಕೊಂಡಿದೆ.
ಡೆಂಗ್ಯೂ ಹೇಗೆ ಹರಡುತ್ತದೆ?
ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.
ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಆದರೆ, ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.
ಇದನ್ನೂ ಓದಿ: Rajakaluve Encroachment: ಬೆಂಗಳೂರಲ್ಲಿ ಮತ್ತೆ ಜೆಸಿಬಿ ಗರ್ಜನೆ; ಉರುಳಲಿವೆಯೇ ಮತ್ತಷ್ಟು ಅಕ್ರಮ ಒತ್ತುವರಿ ಕಟ್ಟಡ?
ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ರಾಜ್ಯದಲ್ಲಿ ಕಳೆದ 20 ದಿನಗಳಲ್ಲಿ 246 ಡೆಂಗ್ಯೂ ಕೇಸ್ ಪತ್ತೆಯಾಗಿದೆ. ಶೇ. 15 ರಿಂದ 20ರಷ್ಟು ಡೆಂಗ್ಯೂ ಕೇಸ್ ಏರಿಕೆ ಕಂಡಿದೆ.
ಏಪ್ರಿಲ್ ತಿಂಗಳಲ್ಲಿ ಡೆಂಗ್ಯೂ ಆರ್ಭಟ
ದಿನಾಂಕ- ಪ್ರಕರಣಗಳು
ಏಪ್ರಿಲ್ 3ರಿಂದ 9- 80 ಪ್ರಕರಣಗಳು
ಏಪ್ರಿಲ್ 10 ರಿಂದ 16- 94 ಪ್ರಕರಣಗಳು
ಏಪ್ರಿಲ್ 17 ರಿಂದ 23- 82 ಪ್ರಕರಣಗಳು