Site icon Vistara News

Dengue Fever: ಬೆಂಗಳೂರಿನಲ್ಲೇ ಶೇ.50ರಷ್ಟು ಡೆಂಗ್ಯೂ ಪ್ರಕರಣಗಳು; ಹಾಟ್‌ಸ್ಪಾಟ್‌ಗಳಿಗೆ ಅಧಿಕಾರಿಗಳ ತಂಡ

Health Minister Dinesh Gundurao instructs to send a team of deputy directors to dengue hot spots

ಬೆಂಗಳೂರು: ರಾಜ್ಯದಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು (Dengue Fever) ಕಂಡುಬಂದಿರುವ 10 ಜಿಲ್ಲೆಗಳಿಗೆ ಆರೋಗ್ಯ ಇಲಾಖೆ ಉಪನಿರ್ದೇಶಕರು ತೆರಳಿ ಭೇಟಿ ನೀಡಿ, ಮೇಲ್ವಿಚಾರಣೆ ನಡೆಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯದ ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಗಳ ಜತೆ ಸಭೆ ನಡೆಸಿದ ಸಚಿವರು, ಮಳೆ, ಪ್ರವಾಹದ ನಡುವೆ ಡೆಂಗ್ಯೂ ನಿಯಂತ್ರಣದ ಬಗ್ಗೆ ಗಮನ ಕಡಿಮೆಯಾಗಬಾರದು ಎಂದು ಸೂಚನೆ ನೀಡಿದರು.

ಆರೋಗ್ಯ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುತ್ತಿದೆ.‌ ಆದರೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಇಷ್ಟರೊಳಗೆ ಡೆಂಗ್ಯೂ ಪಾಸಿಟಿವ್ ಪ್ರಕರಣಗಳಲ್ಲಿ ಇಳಿಮುಖ ಕಂಡುಬರಬೇಕಿತ್ತು. ಪ್ರಕರಣಗಳು ವರದಿಯಾಗುತ್ತಿರುವುದನ್ನು ನೋಡಿದರೆ ಇನ್ನೂ ಎರಡು ತಿಂಗಳು ನಾವು ಅಲರ್ಟ್ ಆಗಿರಬೇಕು. ಹೀಗಾಗಿ ಜಿಲ್ಲಾಡಳಿತ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಹಕಾರ ನೀಡಿ ಡೆಂಗ್ಯೂ ಹತೋಟಿಗೆ ತರುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.

ಇದನ್ನೂ ಓದಿ: Fortis Hospital: ಯಕೃತ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿಗೆ ಮಗನಿಂದ ಲಿವರ್‌ ದಾನ!

ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮ ಅಭಿಯಾನದ ರೀತಿಯಲ್ಲಿ ನಡೆಯಬೇಕು. ಜನರಲ್ಲಿ ಡೆಂಗ್ಯೂ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಆದರೆ ಡೆಂಗ್ಯೂ ಹತೋಟಿಗೆ ತರುವ ಕ್ರಮಗಳು ಸ್ಥಳದಲ್ಲಿ ಅನುಷ್ಠಾನಗೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಸಭೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ವಿಶೇಷವಾಗಿ ಆರೋಗ್ಯ ಇಲಾಖೆಯ ಉಪ ನಿರ್ದೇಶಕರ ಮಟ್ಟದ ಅಧಿಕಾರಿಗಳು ಡೆಂಗ್ಯೂ ಹೆಚ್ಚಿರುವ ಹಾಟ್‌ಸ್ಪಾಟ್‌ಗಳಿಗೆ ಭೇಟಿ ನೀಟಿ ಮೇಲ್ವಿಚಾರಣೆ ನಡೆಸುವಂತೆ ಸಚಿವರು ಸೂಚನೆ ನೀಡಿದರು. ಕೇವಲ ಭೇಟಿ ಕೊಡುವುದಲ್ಲ. ಎರಡು ಮೂರು ದಿನಗಳವರೆಗೆ ಸ್ಥಳದಲ್ಲೇ ಇದ್ದು ಮಾನಿಟರ್ ಮಾಡಬೇಕು. ಸ್ಥಳದಲ್ಲಿ ಡೆಂಗ್ಯೂ ನಿಯಂತ್ರಣ ಕ್ರಮಗಳು ಅನುಷ್ಠಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.‌

ಬೆಂಗಳೂರಿನಲ್ಲಿ 37 ಡೆಂಗ್ಯೂ ಹಾಟ್‌ಸ್ಪಾಟ್‌

ಅಲ್ಲದೇ ಬೆಂಗಳೂರಿನಲ್ಲಿ 37 ಡೆಂಗ್ಯೂ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಬಿಬಿಎಂಪಿ ಅಧಿಕಾರಿಗಳ ಸಹಯೋಗದೊಂದಿಗೆ ಹೆಚ್ಚಿನ ನಿಗಾ ವಹಿಸುವಂತೆ ಸಚಿವ ದಿನೇಶ್ ಗುಂಡೂರಾವ್, ಇದೇ ವೇಳೆ ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ: Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

ಡೆಂಗ್ಯೂ ಪ್ರಕರಣಗಳಲ್ಲಿ ಶೇ.50ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ಕಂಡುಬರುತ್ತಿವೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಡೆಂಗ್ಯೂ ಕಡಿಮೆಯಾಗಬಹುದು. ಆದರೆ ಬೆಂಗಳೂರಿನಲ್ಲಿ ಇದು ಹೆಚ್ಚಾಗಬಹುದು. ಹೀಗಾಗಿ ಬೆಂಗಳೂರಿನಲ್ಲಿ ಡೆಂಗ್ಯೂ ಹತೋಟಿಗೆ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆ ಕರೆಯುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಡೆಂಗ್ಯೂ ಡೆತ್ ಆಡಿಟ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಖಡಕ್ ಆಗಿ ಸೂಚನೆ ನೀಡಿರುವ ಆರೋಗ್ಯ ಸಚಿವರು, ಯಾವುದನ್ನು ಮುಚ್ಚಿಡುವುದು ಬೇಡ. ಡೆಂಗ್ಯೂ ಡೆತ್‌ಗಳಾಗಿದ್ದರೆ ಅದನ್ನು ಡೆಂಗ್ಯೂ ಡೆತ್ ಎಂದೇ ವರದಿ ಸಲ್ಲಿಸುವಂತೆ ಸಚಿವ ದಿನೇಶ್ ಗುಂಡೂರಾವ್‌ ಸೂಚಿಸಿದರು.

Exit mobile version