ಬೆಂಗಳೂರು: ಈ ಬಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಪಿಯು ಶಿಕ್ಷಣ ಇಲಾಖೆ ಆದೇಶಿಸಿದೆ. ಪಿಯು ಪ್ರವೇಶಕ್ಕೆ ಸಂಬಂಧಿಸಿ ಪ್ರಕಟಿಸಿರುವ ಮಾರ್ಗಸೂಚಿಯಲ್ಲೇ ಈ ಉಲ್ಲೇಖ ಮಾಡಲಾಗಿದೆ. ಕಾಲೇಜು ಅಭಿವೃದ್ಧಿ ಸಮಿತಿಗೆ ಸಮವಸ್ತ್ರವನ್ನು ನಿಗದಿಪಡಿಸುವ ಅಧಿಕಾರವನ್ನು ನೀಡಲಾಗಿದೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಹಿಜಬ್ ವಿವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಬಾರಿಯ ಪದವಿಪೂರ್ವ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದಂತೆ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಪಿಯು ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ನಿಗದಿಪಡಿಸಿರುವ ಸಮವಸ್ತ್ರ ಕಡ್ಡಾಯವಾಗಿದೆ.
ಇದನ್ನೂ ಓದಿ | ದೇಶ ಎತ್ತ ಸಾಗುತ್ತಿದೆ?: ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ ಹಿಜಾಬ್ ಯುವತಿ ಆಲಿಯಾ
ಒಂದು ವೇಳೆ ಪಿಯುಸಿ ತರಗತಿಗಳಿಗೆ ಶಿಕ್ಷಣ ಸಂಸ್ಥೆಗಳು ಸಮವಸ್ತ್ರವನ್ನು ನಿಗದಿಪಡಿಸಿಲ್ಲವಾದರೆ ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಬಾರದ ಉಡುಪು ಧರಿಸಬೇಕು ಎಂದು ಸೂಚಿಸಲಾಗಿದೆ.
ಈ ಮೊದಲು ಪ್ರವೇಶ ಮಾರ್ಗಸೂಚಿಯಲ್ಲಿ ಸಮವಸ್ತ್ರ ಕುರಿತು ಯಾವುದೇ ಅಂಶವನ್ನು ಪ್ರಸ್ತಾಪಿಸುತ್ತಿರಲಿಲ್ಲ. ಆದರೆ ಈ ಬಾರಿ ಪದವಿಪೂರ್ವ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಾರ್ಗಸೂಚಿಯಲ್ಲಿ ವಿದ್ಯಾರ್ಥಿಗಳೊಡನೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಲು ಇದನ್ನು ಸೇರಿಸಲಾಗಿದೆ.
ಮೇ 20ರಿಂದ ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ. ಪ್ರಥಮ ಪಿಯು ದಂಡ ಶುಲ್ಕವಿಲ್ಲದೆ ದಾಖಲಾಗಲು ಜೂನ್ 15 ಕೊನೆಯ ದಿನವಾಗಿರುತ್ತದೆ. ದ್ವಿತೀಯ ಪಿಯು ಪ್ರವೇಶಾತಿಗೆ ಜೂನ್ 1 ರಿಂದ 15 ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ| ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಸರ್ಕಾರದ ಆದ್ಯತೆ: ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ