ಬೆಂಗಳೂರು/ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಮತ್ತವರ ಕುಟುಂಬದವರ ಹತ್ಯೆಗೆ ಸಂಚು ರೂಪಿಸಲಾಗಿದ್ದು, ಅವರಿಗೆ ಜೀವ ಬೆದರಿಕೆ ಇದೆ. ಖರ್ಗೆ ಮತ್ತವರ ಕುಟುಂಬವನ್ನು ಸರ್ವನಾಶ ಮಾಡುತ್ತೇನೆ ಎಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರು ಮಾತನಾಡಿದ್ದಾರೆಂಬ ಆಡಿಯೊ ಶುದ್ಧ ಸುಳ್ಳು. ಅದು ಕಟ್ ಆ್ಯಂಡ್ ಪೇಸ್ಟ್ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕ ಸಹ ಉಸ್ತುವಾರಿ ಕೆ. ಅಣ್ಣಾಮಲೈ ಹೇಳಿದ್ದಾರೆ. ಇನ್ನು ಈ ಬಗ್ಗೆ ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಆಡಿಯೊದಲ್ಲಿರುವುದು ಮಣಿಕಂಠನ ಧ್ವನಿ ಅಲ್ಲ. ಅದು ನಕಲಿ ಆಡಿಯೊ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ನಮ್ಮ ಚಿತ್ತಾಪುರ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್‌ನವರು ಒಂದು ಆಡಿಯೊ ಟೇಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಎಲ್‌ಕೆಜಿ ಮಕ್ಕಳು ಸಹ ಇದನ್ನು ನೋಡಿ ನಗುತ್ತಾರೆ. ಕಟ್ ಆ್ಯಂಡ್ ಪೇಸ್ಟ್ ಮಾಡಿ ಆಡಿಯೊವನ್ನು ಸಿದ್ಧಪಡಿಸಲಾಗಿದೆ. ಪಾಪ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬಹಳ ಗರಂ ಆಗಿದ್ದಾರೆ. ಅವರು ನಂದಿನಿ ಮಜ್ಜಿಗೆಯನ್ನು ಕುಡಿಯಲಿ, ತಣ್ಣಗಾಗುತ್ತಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: NEET Exam 2023: ಮೇ 7ಕ್ಕೆ ನೀಟ್ ಪರೀಕ್ಷೆ; ಎಷ್ಟು ಗಂಟೆಯೊಳಗೆ ಪರೀಕ್ಷಾ ಕೇಂದ್ರದಲ್ಲಿರಬೇಕು?
ಕಾಂಗ್ರೆಸ್ ಇಂದು ಚಿಕ್ಕ ಮಕ್ಕಳ ರೀತಿ ಆರೋಪ ಮಾಡಿದೆ. ನಮ್ಮ ಅಭ್ಯರ್ಥಿ ವಿರುದ್ಧ ಕೊಲೆ ಬೆದರಿಕೆ ಆರೋಪ ಮಾಡಿದೆ. ಕಾಂಗ್ರೆಸ್‌ನಿಂದ ಬಿಡುಗಡೆ ಆಗಿರುವ ಆಡಿಯೊ ನಕಲಿಯಾಗಿದೆ. ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ನಮ್ಮ ಅಭ್ಯರ್ಥಿ ಮೇಲೆ ಎಲ್ಲ ರೀತಿಯ ಕೇಸ್ ದಾಖಲಿಸಿದ್ದಾರೆ. ಅವರಿಗೆ ಸೋಲುವ ಭಯ ಆರಂಭವಾಗಿದೆ. ಹಾಗಾಗಿ ನಮ್ಮ ಅಭ್ಯರ್ಥಿ ಮಣಿಕಂಠ ರಾಠೋಡ್ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆ ಆಗುವ ವಿಚಾರವಾಗಿದೆ ಎಂದು ಅಣ್ಣಾಮಲೈ ಹೇಳಿದರು.
ಸುರ್ಜೇವಾಲ ಅವರೇ ನೀವು ಕರ್ನಾಟಕ ಚುನಾವಣೆ ಕಾರಣ ತುಂಬಾ ಬಿಸಿಯಾಗಿದ್ದೀರಿ. ದಯವಿಟ್ಟು ನಂದಿನಿ ಮಜ್ಜಿಗೆ ಕುಡಿಯಿರಿ. ತಣ್ಣಗೆ ಆಗುತ್ತೀರಿ. ದಯವಿಟ್ಟು ಕರ್ನಾಟಕ ಪತ್ರಕರ್ತರ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಸಲಹೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಣಿಕಂಠ ರಾಠೋಡ್ ಅವರನ್ನು ಒಬ್ಬ ರೌಡಿ ಅಂತ ಕರೆದಿದ್ದಾರೆ. ಅವರು ಸ್ವತಃ ಕೊತ್ವಾಲ್ ರಾಮಚಂದ್ರನ ಶಿಷ್ಯ. ಮೊದಲು ಅದರ ಬಗ್ಗೆ ತಿಳಿದು ಮಾತನಾಡಲಿ. ಸುಖಾ ಸುಮ್ಮನೆ ಆರೋಪ ಮಾಡುವುದು ಬೇಡ ಎಂದು ಕಿವಿಮಾತು ಹೇಳಿದ ಅಣ್ಣಾಮಲೈ, ಬಜರಂಗದಳವನ್ನು ಬ್ಯಾನ್ ಮಾಡುವ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಆಂಜನೇಯನ ತಂದೆ, ತಾಯಿ ಹೆಸರು ಗೊತ್ತಿಲ್ಲ ಎಂದು ತಿವಿದರು.
ಮಣಿಕಂಠ ಸಂಭಾಷಣೆಯ ಆಡಿಯೊ ನಕಲಿ
ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ಮಣಿಕಂಠ ರಾಠೋಡ್ ಮಾತನಾಡಿದ್ದಾರೆನ್ನಲಾದ ಆಡಿಯೊ ನಕಲಿಯಾಗಿದೆ. ಆಡಿಯೊದಲ್ಲಿರುವುದು ಮಣಿಕಂಠನ ಧ್ವನಿ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದರು.
ಇದನ್ನೂ ಓದಿ: Modi In Karnataka: ಭಾನುವಾರವೂ ಇರಲಿದೆ ಬೆಂಗಳೂರಲ್ಲಿ ಮೋದಿ ಮೋಡಿ; ರೋಡ್ ಶೋ ಎಲ್ಲೆಲ್ಲಿ?
ಕಾಂಗ್ರೆಸ್ ಸುಖಾಸುಮ್ಮನೆ ಬಿಜೆಪಿ ಅಭ್ಯರ್ಥಿ ಮಣಿಕಂಠ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಾವು ಚುನಾವಣಾ ಅಧಿಕಾರಿಗಳಿಗೆ ದೂರು ನೀಡುತ್ತೇವೆ. ಅಷ್ಟೇ ಅಲ್ಲ ಸಂಬಂಧಪಟ್ಟ ಪೋಲಿಸರಿಗೂ ದೂರು ನೀಡುತ್ತೇವೆ. ಕಾಂಗ್ರೆಸ್‌ನವರೂ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಏನಿದು ಆಡಿಯೊ?
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹಾಗೂ ಬಿಜೆಪಿ ಮುಖಂಡ ರವಿ ಎಂಬುವವರು ಮಾತನಾಡಿದ್ದಾರೆನ್ನಲಾದ ಆಡಿಯೊ ಈಗ ಬಹಿರಂಗಗೊಳಿಸಲಾಗಿದೆ. ಇದರಲ್ಲಿ ನನ್ನ ಮೇಲೆ 44 ಕೇಸ್ ಇವೆ ಎಂದು ಹೇಳಿದವರು ಯಾರು? ಎಂದು ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಮಣಿಕಂಠ ಕೇಳುತ್ತಾರೆ. ಅದಕ್ಕೆ ರವಿ, ನಾವು ಯಾರೂ ಈ ರೀತಿ ಆರೋಪ ಮಾಡುವುದಿಲ್ಲ. ಖರ್ಗೆ ಕಡೆಯವರು ಮಾತನಾಡುತ್ತಾರೆ ಎಂದು ಹೇಳುತ್ತಾರೆ. ಅದಕ್ಕೆ ಮಣಿಕಂಠ, ಹಾಗೆ ಮಾತನಾಡುವ ಖರ್ಗೆ ಕಡೆಯವರನ್ನೇ ಕೇಳು ಎಂದು ಹೇಳುತ್ತಾರೆ. ಆಗ ರವಿ, ಅವರ ಫೋನ್ ನಂಬರ್ ಕೊಡಿ, ಅವರ ಯಾರ ಫೋನ್ ನಂಬರ್ ಸಹ ಇಲ್ಲ. ನಾನು ನಿಮ್ಮ ಅಭಿಮಾನಿ ಇದ್ದೇನೆ. ನಮ್ಮ ಅಣ್ಣನ ಬಗ್ಗೆ ಏಕೆ ಹೀಗೆ ಮಾತನಾಡುತ್ತೀರೆಂದು ಅವರಿಗೂ ಕೇಳುತ್ತೇನೆ ಎಂದು ಹೇಳುತ್ತಾರೆ. ಅದಕ್ಕೆ ಮಣಿಕಂಠ, ನನ್ನ ಬಳಿ ಅವರ ಫೋನ್ ನಂಬರ್ ಇದ್ರೆ ಅವರು, ಅವರ ಹೆಂಡತಿ ಮಕ್ಕಳನ್ನು ಸಾಫ್ ಮಾಡುತ್ತೇನೆ. ಅದಕ್ಕೆ ನನ್ನ ಬಳಿ ಅವರ ಫೋನ್ ನಂಬರ್ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ರೋಡ್ ಶೋ ವೇಳೆ ರಾಮಕೃಷ್ಣ ಮಠದ ಸ್ವಾಮೀಜಿಗಳಿಂದ ಪುಸ್ತಕ ಉಡುಗೊರೆ; ಭಕ್ತಿಯಿಂದ ಸ್ವೀಕರಿಸಿದ ಮೋದಿ
ಆಗ ರವಿ, ಯಾರ ಹೆಂಡತಿ, ಮಕ್ಕಳನ್ನು ಸಾಫ್ ಮಾಡುತ್ತೀರಿ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಮಣಿಕಂಠ ರಾಠೋಡ, “ನೀನು ಯಾರ ಹೆಸರನ್ನು ತೆಗೆದುಕೊಂಡಿದ್ದೀಯಾ? ಎಂದು ಕೇಳಿದರು. ಆಗ ರವಿ, ಖರ್ಗೆ ಅವರದ್ದು ಅಣ್ಣಾ ಎಂದು ಉತ್ತರಿಸಿದ್ದಾರೆ. ಅದಕ್ಕೆ ಮಣಿಕಂಠ ರಾಠೋಡ, “ಹಾ ಅವರದ್ದೇ… ಅವರ ನಂಬರ್ ಇದ್ದರೆ ಅವರನ್ನು ಮತ್ತವರ ಕುಟುಂಬದವರನ್ನು ಸಾಫ್ ಮಾಡುತ್ತೇನೆ. ಅದಕ್ಕೇ ಅವರ ನಂಬರ್ ನನ್ನ ಬಳಿ ಇಲ್ಲ. ಖರ್ಗೆ ಅವರ ನಂಬರ್ ಇದ್ದರೆ ನಾನು ಬಾಯಿಗೆ ಬಂದ ಹಾಗೆ ಬಯ್ಯುತ್ತೇನೆ ಅಂತ ನಿನಗೆ ಹೇಳುತ್ತಿದ್ದೇನೆ” ಎಂದು ಉತ್ತರಿಸುತ್ತಾರೆ. ಈಗ ಈ ಆಡಿಯೊವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.