ದೇವನಹಳ್ಳಿ: ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ ಬಾಲಕನೊಬ್ಬ ಕುಡಿದ ಮತ್ತಿನಲ್ಲಿ ಯುವಕನೊಬ್ಬನಿಗೆ ಚಾಕು ಇರಿದಿರುವ ಘಟನೆ (Devanahalli News) ನಡೆದಿದೆ. ಗ್ರಾಮದ ರವಿಕುಮಾರ್ (24) ಚಾಕು ಇರಿತಕ್ಕೆ ಒಳಗಾದವರು.
ವಾಲಿಬಾಲ್ ಆಟದ ವಿಚಾರಕ್ಕೆ ಯುವಕರ ನಡುವೆ ಗಲಾಟೆ ನಡೆದಿದ್ದು, ಬಾಲಕನ ರಂಪಾಟಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಯುವಕರಿಂದ ವಾಲಿಬಾಲ್ ಟ್ರೂನಿಮೆಂಟ್ ಆಯೋಜನೆ ಮಾಡಲಾಗಿತ್ತು. ವಾಲಿಬಾಲ್ ಆಡುವ ವೇಳೆ, ಕುಡಿದ ಮತ್ತಿನಲ್ಲಿ ಬಂದ 17 ವರ್ಷದವನೊಬ್ಬ ಮೊದಲು ಕಾರ್ತಿಕ್ ಎಂಬ ಯುವಕನ ಜತೆ ಆಟವಾಡಲು ಬಿಡುವಂತೆ ಗಲಾಟೆ ಮಾಡಿದ್ದಾನೆ.
ಗಲಾಟೆ ಬಿಡಿಸಲು ಬಂದ ರವಿಕುಮಾರ್‌ಗೆ ಆ ಬಾಲಕ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ರವಿಕುಮಾರ್‌ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಬಾಲಕನ ಹುಚ್ಚಾಟಕ್ಕೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಮದೇವರ ಬೆಟ್ಟದಿಂದ ಜಿಗಿದು ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ
ರಾಮನಗರ: ಬೆಂಗಳೂರಿನ ಕತ್ರಿಗುಪ್ಪೆವಾಸಿಯಾಗಿರುವ ಪ್ರೇಮಿಗಳಿಬ್ಬರ ಪ್ರೀತಿಗೆ (Love Failure) ಪೋಷಕರ ತೀವ್ರವಾಗಿ ವಿರೋಧ ಮಾಡಿದ್ದಾರೆ. ಇದರಿಂದ ಬೇಸತ್ತ ಯುವ ಪ್ರೇಮಿಗಳು ಸೀದಾ ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟಕ್ಕೆ ಬಂದಿದ್ದು, ಅಲ್ಲಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಅಲ್ಲಿ ಬೆಟ್ಟದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬಂಡೆ ಮೇಲಿಂದ ಕೆಳಗೆ ಜಿಗಿದಿದ್ದ ಯುವಕ ಹಾಗೂ ಯುವತಿಗೆ ತೀವ್ರ ಗಾಯಗಳಾಗಿವೆ. ಈ ವೇಳೆ ಯುವಕನ ಸ್ಥಿತಿ ಗಂಭೀರವಾಗಿದ್ದು, ಯುವತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಇಬ್ಬರಿಗೂ ತೀವ್ರ ರಕ್ತಸ್ರಾವವಾಗಿದೆ. ಕೆಳಗೆ ಬಿದ್ದು ಒದ್ದಾಟ ನಡೆಸುತ್ತಿದ್ದ ಇವರಿಬ್ಬರನ್ನು ಸ್ಥಳೀಯರು ನೋಡಿ ರಕ್ಷಣೆ ಮಾಡಿದ್ದಾರೆ. ಗಾಯಗೊಂಡ ಯುವ ಪ್ರೇಮಿಗಳನ್ನು ರಕ್ಷಣೆ ಮಾಡಿರುವ ಸ್ಥಳೀಯ ನಿವಾಸಿಗಳು ಕೂಡಲೇ ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಸಾಹಿತ್ಯ (19), ಚೇತನ್ (19) ಆತ್ಮಹತ್ಯೆಗೆ ಯತ್ನಿಸಿದ ಯುವ ಪ್ರೇಮಿಗಳು ಎಂದು ತಿಳಿದು ಬಂದಿದೆ. ಇವರಿಬ್ಬರೂ ಕತ್ರಿಗುಪ್ಪೆಯ ಅಕ್ಕಪಕ್ಕದ ನಿವಾಸಿಗಳಾಗಿದ್ದಾರೆ. ಇವರ ಪ್ರೀತಿಯ ವಿಷಯ ಮನೆಯವರಿಗೆ ತಿಳಿದು ತೀವ್ರ ಆಕ್ರೋಶವನ್ನು ಹೊರಹಾಕಿದ್ದರು. ಪ್ರಥಮ ವರ್ಷದ ಬಿ.ಎ ಓದುತ್ತಿದ್ದ ಇವರಿಗೆ ಇದರಿಂದ ತೀವ್ರ ನೋವಾಗಿದೆ. ಒಬ್ಬರನ್ನೊಬ್ಬರು ಬಿಟ್ಟು ಇರಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ರಾಮದೇವರ ಬೆಟ್ಟಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.
ಮನೆಗೆ ಕರೆ ಮಾಡಿದ್ದ ಪ್ರೇಮಿಗಳು
ರಾಮದೇವರ ಬೆಟ್ಟಕ್ಕೆ ಬಂದಿದ್ದ ಸಾಹಿತ್ಯ ಮತ್ತು ಚೇತನ್ ಸಾಯುವ ನಿರ್ಧಾರ ಮಾಡಿದವರು, ಅದಕ್ಕೂ ಮುಂಚೆ ಮನೆಯವರಿಗೆ ಕೊನೆಯದಾಗಿ ಕರೆ ಮಾಡಿ ತಾವು ಹೀಗೆ ರಾಮದೇವರ ಬೆಟ್ಟಕ್ಕೆ ಬಂದಿದ್ದೇವೆ. ನಾವು ಈಗ ಸಾಯುತ್ತಿದ್ದೇವೆ. ನಮ್ಮನ್ನು ಕ್ಷಮಿಸಿಬಿಡಿ ಎಂದು ಹೇಳಿ ಅಲ್ಲಿಂದ ಜಿಗಿದಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ