ಬೆಂಗಳೂರು: ಈಗಿನ ನಾಯಕರಿಗೂ, ದೇವೇಗೌಡರ ವ್ಯಕ್ತಿತ್ವಕ್ಕೆ ಬಹಳ ವ್ಯತ್ಯಾಸ ಇದೆ. ಗೌಡರು ಹಗಲಿರುಳು ತಮ್ಮ ಶಕ್ತಿಯನ್ನು ರಾಜಕೀಯ ಕ್ಷೇತ್ರಕ್ಕೆ ಮೀಸಲು ಇಟ್ಟವರು. ಗೌಡರ ಶ್ರಮ ನಾವೆಲ್ಲರೂ ನೋಡಿದ್ದೇವೆ. ಆದರೆ, ಅವರ ಶ್ರಮಕ್ಕೆ ಸರಿಯಾದ ಫಲ ಸಿಕ್ಕಿಲ್ಲ ಎನ್ನುವುದು ನಮಗೂ ಗೊತ್ತಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (HD Deve Gowda) ತಿಳಿಸಿದರು.
ಚಾಮರಾಜಪೇಟೆಯ ಡಾ.ಅಂಬರೀಶ್ ಸಭಾಂಗಣದಲ್ಲಿ ಯುಎಇಯ ದುಬೈ ಕನ್ನಡಿಗರ ಕನ್ನಡ ಕೂಟದಿಂದ ಭಾನುವಾರ ಆಯೋಜಿಸಿದ್ದ ಎಚ್.ಡಿ.ದೇವೇಗೌಡ ದಂಪತಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವೇಗೌಡರು ಹಳ್ಳಿಯಿಂದ ಬಂದವರು, ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿ. ಹೊಯ್ಸಳ ವಿಷ್ಣುವರ್ಧನ ಪ್ರಾಂತ್ಯ ಆಳಿದರು, ನಮ್ಮ ಗೌಡರು ಸಾಮ್ರಾಜ್ಯ ಆಳಿದರು. ಸಾಮ್ರಾಜ್ಯ ಆಳಿದವರು ಚಕ್ರವರ್ತಿ ಆಗುತ್ತಾರೆ. ಗೌಡರು ಚಿಕ್ಕಂದಿನಲ್ಲಿ ಅಮ್ಮನ ತೊಡೆಯ ಮೇಲೆ ಮಲಗಿದ್ದಾಗ, ಬುಡಬುಡಕಿ ಬಂದು ನೋಡುತ್ತಾರೆ. ಮಗು ಏನು ಆಗಬಹುದು ಅಂತ ಕೇಳಿದಾಗ, ಚಕ್ರವರ್ತಿ ಆಗುತ್ತಾರೆ ಎಂದು ಅಂದೇ ಬುಡಬುಡಕಿ ಹೇಳಿದ್ದರಂತೆ ಎಂದು ಸ್ಮರಿಸಿದರು.
ಇದನ್ನೂ ಓದಿ | Madhu Bangarappa: ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ರಾಜ್ಯ ಸರ್ಕಾರ ಬದ್ಧ: ಸಚಿವ ಮಧು ಬಂಗಾರಪ್ಪ
ಗೌಡರು ಮನಸ್ಸು ಮಾಡಿದ್ದರೇ ಎಷ್ಟು ಬೇಕಾದರೂ ದುಡ್ಡು ಮಾಡಬಹುದಿತ್ತು. ನೈಸ್ ರಸ್ತೆಗೆ ದೇವೇಗೌಡರು ಒಪ್ಪಿಗೆ ಕೊಡಲಿಲ್ಲ. ಆಗ ಎಷ್ಟು ದುಡ್ಡು ಬೇಕಾದರೂ ಸಿಗುತ್ತಿತ್ತು ಎಂದು ಅವರಿಗೆ ಗೊತ್ತಿತ್ತು. ಆದರೆ, ದೇವೇಗೌಡರು ಹಾಗೆ ಮಾಡಿಲ್ಲ. ಇಂತಹ ವ್ಯಕ್ತಿತ್ವವನ್ನು ಗುರುತಿಸಬೇಕು. ಇದನ್ನು ದುಬೈ ಕನ್ನಡಿಗರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮುದಾಯದ ನಾಯಕನ ಬಗ್ಗೆ ಬೇಸರ ಹೊರಹಾಕಿದ ಸ್ವಾಮೀಜಿ
ನಾನು ಒಮ್ಮೆ ಮುಂಬೈ ಪ್ರವಾಸದಲ್ಲಿ ಇದ್ದೆ. ಅದೇ ವೇಳೆ ದೇವೇಗೌಡರು ಸಹ ಮುಂಬೈ ಪ್ರವಾಸದಲ್ಲಿ ಇದ್ದರು. ಆಗ ಮುಂಬೈ ಏರ್‌ಪೋರ್ಟ್‌ನಲ್ಲಿ ಶರದ್ ಪವಾರ್ ಸೇರಿ ಹಲವು ನಾಯಕರು ದೇವೇಗೌಡರನ್ನು ಭೇಟಿಯಾದರು. ಆಗ ನಾನು ಅಲ್ಲೇ ಪಕ್ಕದಲ್ಲಿ ಕುಳಿತಿದ್ದೆ. ನನ್ನನ್ನು ಯಾರು ಅಂತ ಅವರೆಲ್ಲ ಕೇಳಿದರು. ಆಗ ದೇವೇಗೌಡರು ನನ್ನ ಹಾಗೂ ಮಠದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಅವರಿಗೆ ತಿಳಿಸುವ ಕೆಲಸ ಮಾಡಿದರು. ಆಗ ದೇವೇಗೌಡರ ನಡೆ ಬಗ್ಗೆ ಬಹಳ ಸಂತೋಷ ಆಯಿತು ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಹಾಗೆಯೇ ಇತ್ತೀಚೆಗೆ ದೆಹಲಿ ಪ್ರವಾಸ ಕೈಗೊಂಡಿದ್ದಾಗ ನನ್ನ ಬಗ್ಗೆ ಕೆಲವರು ಕೇಳಿದಾಗ, ನಮ್ಮ ಸಮುದಾಯದ ರಾಜಕೀಯ ನಾಯಕರೊಬ್ಬರು, ಅವರು ನಿರ್ಮಲಾನಂದ ಸ್ವಾಮೀಜಿ ಅಂತ, ಆದಿಚುಂಚನಗಿರಿ ಮಠ ಇದೆ. ಆ ಮಠದಲ್ಲಿ ಈ ಸ್ವಾಮೀಜಿ ಇರುತ್ತಾರೆ ಎಂದು ಹೇಳಿ ಸುಮ್ಮನಾದರು ಎಂದು ಹೆಸರು ಹೇಳದೆ ತಮ್ಮ ಸಮುದಾಯದ ನಾಯಕನ ಬಗ್ಗೆ ಅಸಮಾಧಾನ ಹೊರಹಾಕಿದರು.
ರಾಜ್ಯದ ಪರಿಸ್ಥಿತಿ ಬಗ್ಗೆ ಸೋಮವಾರ ಸುದ್ದಿಗೋಷ್ಠಿ: ಎಚ್.ಡಿ.ದೇವೇಗೌಡ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ರಾಜ್ಯದ ಪರಿಸ್ಥಿತಿ ಬಗ್ಗೆ ಮಾತನಾಡಲು ಜೆಪಿ ಭವನದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದೇನೆ. ಎಲ್ಲವನ್ನೂ ನೋಡುತ್ತಿದ್ದೇನೆ, ಈ ಕಾಲಿಗೆ ಚಪ್ಪಲಿ ಹಾಕಿಲ್ಲ. ಹಳೇ ವಿಚಾರ ನೆನಸಿಕೊಳ್ಳಲ್ಲ. ರಾಜ್ಯದ ಎಲ್ಲಾ ಸಮಸ್ಯೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.
ದುಬೈ ಕನ್ನಡಿಗರು ನನ್ನ ಹಾಗೂ ಪತ್ನಿಗೆ ಸನ್ಮಾನಿಸಿರುವುದು ಕಂಡು ಸಂತಸವಾಯಿತು. ನೀವು ಕೊಟ್ಟಿರುವ ಗೌರವಕ್ಕೆ ನಾನು ತಲೆಬಾಗಿ ನಮಸ್ಕಾರ ಮಾಡುತ್ತೇನೆ. ನಾನು ಕನ್ನಡಿಗ, 91ನೇ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆ ಇದೆ. ಹೀಗಾಗಿ ಹೆಚ್ಚು ಮಾತನಾಡಲ್ಲ ಎಂದ ಅವರು, ಸೋಮವಾರ ದುಬೈ ಕನ್ನಡಿಗರು ತಮ್ಮ ನಿವಾಸದಲ್ಲಿ ಊಟಕ್ಕೆ ಬರಬೇಕು ಎಂದು ಆಹ್ವಾನ ನೀಡಿದರು.
ಇದನ್ನೂ ಓದಿ | VISTARA TOP 10 NEWS: ಸಿದ್ದರಾಮಯ್ಯ ಸರ್ಕಾರಕ್ಕೆ ನೂರರ ಸಂಭ್ರಮ, ಮತ್ತೆ ಮುಂಗಾರು ಚುರುಕು ಮತ್ತಿತರ ಪ್ರಮುಖ ಸುದ್ದಿಗಳಿವು…
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನ ಮಾಡಲಾಯಿತು. ಹಾಗೆಯೇ ದೇವೇಗೌಡರ ಪತ್ನಿ ಚನ್ನಮ್ಮ ಅವರಿಗೆ ಬಾಗಿನ ನೀಡಿ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡಿಗರ ಕನ್ನಡ ಕೂಟದ ಅಧ್ಯಕ್ಷ ಸಾದನ್ ದಾಸ್, ಗಲ್ಫ್ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಖಲೀಲ್ ಉಪಸ್ಥಿತರಿದ್ದರು.