Site icon Vistara News

CM Siddaramaiah: ಅಂಬಾನಿ, ಅದಾನಿ ಜೇಬಿನಲ್ಲಿ ಹಣವಿದ್ದರೆ ಬಡವರು ಉದ್ಧಾರವಾಗಲ್ಲ ಎಂದ ಸಿದ್ದರಾಮಯ್ಯ

CM Siddaramaiah in Dr Siddalingaiah commemoration programme

ಬೆಂಗಳೂರು: ಬರೀ ಅಂಬಾನಿ, ಅದಾನಿ ಜೇಬಿನಲ್ಲಿ ಹಣ ಇದ್ದರೆ ಬಡವರು, ಮಧ್ಯಮವರ್ಗದವರ ಉದ್ದಾರ ಸಾಧ್ಯವಿಲ್ಲ. ತಿಮ್ಮ-ಬೋರ-ಕಾಳನ ಜೇಬಿನಲ್ಲಿ ಹಣ ಇದ್ದರೆ ಮಾತ್ರ ಆರ್ಥಿಕತೆ ಬೆಳವಣಿಗೆ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಕರ್ನಾಟಕ ಆದಿಜಾಂಬವರ ಸಾಂಸ್ಕೃತಿಕ ಸಮಿತಿ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ದಿ. ಡಾ.ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಿದ್ದಲಿಂಗಯ್ಯ ಅವರ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ದುಡಿಯುವವರು, ಶ್ರಮಿಕರ ಜೇಬಿನಲ್ಲಿ ಹಣ ಇದ್ದರೆ ಅವರು ದೇಶದ ಆರ್ಥಿಕತೆಯ ಬೆಳವಣಿಗೆಗೆ ಕಾರಣರಾಗುತ್ತಾರೆ. ಕೇವಲ ಅಂಬಾನಿ ಅದಾನಿ ಜೇಬು ತುಂಬಿಸುವವರ ಕೈಗೆ ಅಧಿಕಾರ ಕೊಟ್ಟು ಇಡೀ ದೇಶ ಪರಿತಪಿಸುವಂತಾಗಿದೆ ತಿಳಿಸಿದರು.

ನಮ್ಮ ಸರ್ಕಾರ ತಿಮ್ಮ-ಬೋರ-ಕಾಳನಂತಹ ಶ್ರಮಿಕ ವರ್ಗದ ಜೇಬಿಗೆ ಹಣ ಹಾಕುವ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಕಾರ್ಯಕ್ರಮಗಳನ್ನು ಜಾರಿ ಮಾಡಿ ಜನರ ಜೇಬಿಗೆ ಹಣ ಹಾಕುವ ಕೆಲಸಕ್ಕೆ ಮುಂದಾಗಿದೆ. ಇದರಿಂದ ನಮ್ಮ ಆರ್ಥಿಕತೆ ಚೈತನ್ಯ ಪಡೆದುಕೊಳ್ಳುತ್ತಿದೆ ಎಂದು ವಿವರಿಸಿದರು.

ಇದನ್ನೂ ಓದಿ | Self Harming : 3 ಕಂದಮ್ಮಗಳ ಜತೆ ಬಾವಿಗೆ ಹಾರಿದರೂ ಬದುಕುಳಿದ ತಾಯಿ; ಮಕ್ಕಳು ಮೃತ್ಯು

ಸಂವಿಧಾನದ ವಿರೋಧಿಗಳ ಕೈಗೆ ಅಧಿಕಾರ ಕೊಟ್ಟು ಸಮಾನತೆ ಬರಬೇಕು ಎಂದರೆ ಹೇಗೆ ಸಾಧ್ಯ? ಅಂಬಾನಿ, ಅದಾನಿಯವರ ಜೇಬು ತುಂಬಿಸುವವರ ಕೈಗೆ ಕೇಂದ್ರದಲ್ಲಿ ಅಧಿಕಾರ ಕೊಟ್ಟು ಬಡವರ, ಮಧ್ಯಮ ವರ್ಗದವರ ಉದ್ಧಾರ ಆಗಬೇಕು ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಸಿದ್ದಲಿಂಗಯ್ಯ ಅವರ ಆಶಯಗಳನ್ನು ಬದುಕಿನಲ್ಲಿ ಇಟ್ಟುಕೊಂಡವರಿಗೆ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಈ ಬೆದರಿಕೆ ಪತ್ರ ಬರೆಯುವವರನ್ನು ಬೆಂಬಲಿಸುವವರ ಕೈಗೆ ಅಧಿಕಾರ ಕೊಟ್ಟು ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಎಂದು ಪ್ರಶ್ನಿಸಿದರೆ ಹೇಗೆ ಎಂದು ಸಭಿಕರನ್ನು ಸಿಎಂ ಪ್ರಶ್ನಿಸಿದರು.

ಸಿದ್ದಲಿಂಗಯ್ಯನವರ ಕವನಗಳು ಸಮಾಜದ ವಸ್ತು ಸ್ಥಿತಿಗೆ ಕನ್ನಡಿ ಹಿಡಿದಿವೆ. ಅಸಮಾನತೆ, ತಾರತಮ್ಯದ ವಿರುದ್ಧ ಸಮಾಜವನ್ನು ಎಚ್ಚರಿಸುವ ಧ್ವನಿ ಸಿದ್ದಲಿಂಗಯ್ಯ ಅವರ ಕವನಗಳಲ್ಲಿವೆ. ದೇಶಕ್ಕೆ ಬಂದಿರುವ ರಾಜಕೀಯ ಸ್ವಾತಂತ್ರ್ಯ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ಜಾರಿ ಆಗದಿದ್ದರೆ ಸ್ವಾತಂತ್ರ್ಯಕ್ಕೆ ಅರ್ಥ ಇಲ್ಲ ಎಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದರು ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿದರು.

ಸಿದ್ದರಾಮಯ್ಯ ಜನ ಚಳವಳಿಗಳ ಉತ್ಪತ್ತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನ ಚಳವಳಿಗಳ ಉತ್ಪತ್ತಿ. ಬಜೆಟ್‌ನಲ್ಲಿ ಕೊಟ್ಟಿರುವ ಕಾರ್ಯಕ್ರಮಗಳು, ದಲಿತರ ಪರವಾದ ಕಾಯ್ದೆ ಮತ್ತು ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿರುವುದರಿಂದ ಸಿದ್ದರಾಮಯ್ಯ ಅವರು ಸಂವಿಧಾನದ ನಿಜವಾದ ರಕ್ಷಕರು ಮತ್ತು ಪಾಲಕರು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಬಣ್ಣಿಸಿದರು.

ಕುವೆಂಪು ಕನಸಿನ ಕಲ್ಕಿ ಸಿದ್ದರಾಮಯ್ಯ

ಕುವೆಂಪು ಅವರು 40ರ ದಶಕದಲ್ಲಿ ದಲಿತ-ಬಡವರ ಏಳಿಗೆಗೆ ಕಲ್ಕಿಯ ಉದಯ ಆಗಬೇಕು ಎನ್ನುವ ಆಶಯದ ಕವನ ಬರೆದಿದ್ದರು. 1948ರಲ್ಲಿ ಕುವೆಂಪು ಕನಸಿನ ಕಲ್ಕಿ ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಜನಿಸಿದರು. ಅವರೇ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕಾರ್ಯಕ್ರಮದ ನಿರೂಪಕ ಲಕ್ಷ್ಮೀನಾರಾಯಣ್ ಅವರು ತಿಳಿಸಿದರು.

ಇದನ್ನೂ ಓದಿ | POCSO Case: ಎಲಾ ಧೂರ್ತ ಮುದುಕ.. 6 ವರ್ಷದ ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 60ರ ವೃದ್ಧ

ಮಾಜಿ ಸಚಿವ ಎಚ್. ಆಂಜನೇಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಚಿವ ಎಚ್.ಸಿ.ಮಹದೇವಪ್ಪ, ಹಿರಿಯ ಸಾಹಿತಿಗಳಾದ ಕೆ.ಮರುಳಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ, ಅಗ್ರಹಾರ ಕೃಷ್ಣಮೂರ್ತಿ, ಪ್ರಜಾವಾಣಿ ಕಾರ್ಯ ನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಇಂದಿರಾ ಕೃಷ್ಣಪ್ಪ, ಪ್ರೊ.ಜಾಫೆಟ್, ಡಾ.ಮಾನಸ ಸಿದ್ದಲಿಂಗಯ್ಯ ಸೇರಿ ಹಲವರು ಉಪಸ್ಥಿತರಿದ್ದರು.

Exit mobile version