ಬೆಂಗಳೂರು: ʻʻದೇಶಾದ್ಯಂತ ಕಾಂಗ್ರೆಸ್ ಸಮಾಪ್ತಿಯಾಗಿದೆ. ಕಾಂಗ್ರೆಸ್‌ಗೆ ಬೇಕಿರುವುದು ಜನರ ಕಲ್ಯಾಣವಲ್ಲ. ಅದಕ್ಕೆ ಒಂದು ಎಟಿಎಂನ ಅವಶ್ಯಕತೆ ಇದೆ. ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಭ್ರಷ್ಟಾಚಾರ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಈಗ ಇರುವ ಪ್ರಶ್ನೆ ಒಂದೇ, ಅಭಿವೃದ್ದಿಯ ಬಿಜೆಪಿ ಬೇಕಾ ಅಥವಾ ಭ್ರಷ್ಟಾಚಾರದ ಕಾಂಗ್ರೆಸ್ ಬೇಕಾ ನೀವೆ ಹೇಳಿʼʼ- ಹೀಗೆಂದು ಹೇಳಿದರು ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವ ಅಮಿತ್ ಶಾ (Amit shah visit).
ಬೆಂಗಳೂರಿನ ಕೆಂಗೇರಿ ಉಪನಗರದ ಕೊಮ್ಮಘಟ್ಟದಲ್ಲಿ ಅಯೋಜನೆ ಮಾಡಲಾದ ಸಹಕಾರ ಇಲಾಖೆಗೆ ಸಂಬಂಧಿಸಿ 20 ಯೋಜನೆಗಳ ಉದ್ಘಾಟನೆ ಮತ್ತು ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʻʻದೇಶದ ಸಹಕಾರಿ ಸಚಿವನಾಗಿ ಸಿಎಂ ಬೊಮ್ಮಾಯಿ ಮತ್ತು ಎಸ್ ಟಿ ಸೋಮಶೇಖರ್ ಅವರಿಗೆ ಇಷ್ಟು ದೊಡ್ಡ ಕಾರ್ಯಕ್ರಮ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ. 1400 ಕೋಟಿ ರೂ. ವೆಚ್ಚದ ಯೋಜನೆಗೆ ಉದ್ಘಾಟನೆ, ಚಾಲನೆ ನೀಡಿದ್ದೇನೆ. ಹೂವಿನ ಮಾರುಕಟ್ಟೆ, ಎಪಿಎಂಸಿ ದಾಸ್ತಾನು, ಪಾರ್ಕಿಂಗ್, ವಿವಿಧ ಭವನಗಳ ಚಾಲನೆ ಮಾಡಲಾಗಿದೆ. ಬಿನ್ನಿಪೇಟೆಯಲ್ಲಿ ಹೂವಿನ ಸಂಗ್ರಹಣಾ ವ್ಯವಸ್ಥೆ, ಕೆಎಂಎಫ್‌ನ ಅಡಿಯಲ್ಲಿ ಹಲವು ಭವನಗಳನ್ನು ಲೋಕಾರ್ಪಣೆ ಆಗಿದೆʼʼ ಎಂದು ಹೆಮ್ಮೆಯಿಂದ ಹೇಳಿದರು.
ನರೇಂದ್ರ ಮೋದಿ ಅವರು ಸಹಕಾರದಿಂದ ಸಮೃದ್ಧಿ ಎಂಬ ಪರಿಕಲ್ಪನೆಯೊಂದಿಗೆ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದರು. ಮೋದಿ ಅವರು ಸಹಕಾರ ರಂಗಕ್ಕೆ ಅನೇಕ ಕ್ಷೇತ್ರಗಳನ್ನು ಸೇರಿಸಿದರು. ಸಹಕಾರ ರಂಗದಲ್ಲಿ ಅನೇಕ ಪ್ರಯೋಗಗಳನ್ನು ಮಾಡಲಾಗಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಕಾಂಗ್ರೆಸ್ ಕಣ್ಣಾಮುಚ್ಚಾಲೆ ಆಟವಾಡುತ್ತಿತ್ತು. ಮೋದಿ ಅವರು ಪ್ರಧಾನಿಯಾದ ಬಳಿಕ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಈಗ ಭವ್ಯ ಮಂದಿರ ಸಿದ್ಧವಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ದಲಿತ, ಹಿಂದುಳಿದವರಿಗೆ ಅಪಮಾನವಾಗಿದೆ ಎಂದು ಹೇಳಿದ ಅವರು, ಮೋದಿ ಅವರು ಅವರ ಸ್ವಾಭಿಮಾನವನ್ನು ಎತ್ತಿಹಿಡಿದಿದ್ದಾರೆ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವು ದೇಶದ್ರೋಹಿ ಪಿಎಫ್‌ಐ ಮೇಲಿನ ಕೇಸುಗಳನ್ನು ತೆಗೆದು ರಕ್ಷಣೆಗೆ ಮುಂದಾಗಿತ್ತು. ಆದರೆ, ಪ್ರಧಾನಿ ಮೋದಿ ಅವರು ಪಿಎಫ್‌ಐಯನ್ನು ನಿಷೇಧಿಸುವ ಮೂಲಕ ಭಾರತದ ರಕ್ಷಣೆ ಮಾಡಿದ್ದಾರೆ ಎಂದು ಹೇಳಿದರು.
ಇಡೀ ದೇಶವನ್ನು ಅಭಿವೃದ್ಧಿಪಡಿಸುವುದು ಮೋದಿ ಅವರ ಉದ್ದೇಶ. ಅದಕ್ಕೆ ಕರ್ನಾಟಕದ ಸಹಕಾರವೂ ಮುಂದುವರಿಯಬೇಕಾಗಿದೆ ಎಂದು ಹೇಳಿದ ಅಮಿತ್ ಶಾ, ರಾಜ್ಯದಲ್ಲಿ ಬಹುಮತದ ಸರ್ಕಾರವನ್ನು ಸ್ಥಾಪಿಸುವಂತೆ, ಬಿಜೆಪಿಗೆ ಪೂರ್ಣ ಬಹುಮತ ನೀಡುವಂತೆ ಮನವಿ ಮಾಡಿದರು. ನರೇಂದ್ರ ಮೋದಿ ಮತ್ತು ಬೊಮ್ಮಾಯಿಯವರ ಕೈ ಬಿಡಲ್ಲ ತಾನೇ ಎಂದು ಪ್ರಶ್ನಿಸಿದ ಅವರು ಹೌದು ಎಂದು ಹೇಳಿಸಿದರು.
ಮೈಸೂರು ಪೇಟ, ಹಾರ ಹಾಕಿ ಸ್ವಾಗತ
ಅಮಿತ್ ಶಾ ಅವರನ್ನು ಮೈಸೂರು ಪೇಟ, ಹಾರ ಹಾಕಿ ಸ್ವಾಗತಿಸಲಾಯಿತು. ತಿರುಪತಿ ವೆಂಕಟೇಶ್ವರನ ಭಾವಚಿತ್ರವನ್ನೂ ನೀಡಿ ಗೌರವಿಸಲಾಯಿತು. ಅದರ ಜತೆ ಅಮಿತ್ ಶಾ ಅವರನ್ನು ಚಾಣಕ್ಯನಿಗೆ ಹೋಲಿಸಿದ ಒಂದು ಸ್ಮರಣಿಕೆಯನ್ನು ನೀಡಲಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಗೂ ಅಧಿಕಾರಿಗಳು ಭಾಗಿಯಾದರು.
ಬೊಮ್ಮಾಯಿ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಆರಂಭ
ಸಿಎಂ ಬಸವರಾಜ ಬೊಮ್ಮಾಯಿ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಆರಂಭಗೊಂಡಿತು. ಅವರು ಅರಮನೆ ಮೈದಾನದಲ್ಲಿ ನಡೆದ ನರೇಗಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅಲ್ಲಿಗೆ ತಲುಪಿದರು. ಅಮಿತ್ ಶಾ ಅವರು ಸಂಜೆ 5 ಗಂಟೆಯ ಒಳಗೆ ಛತ್ತೀಸ್‌ಗಢ ತಲುಪಬೇಕು ಎಂಬ ಕಾರಣಕ್ಕೆ ಅರ್ಧದಲ್ಲೇ ಕಾರ್ಯಕ್ರಮದಿಂದ ಹೊರಟರು. ಬಳಿಕ ಸಿಎಂ ಬೊಮ್ಮಾಯಿ ಮಾತು ಮುಂದುವರಿಸಿದರು.
ಇದನ್ನೂ ಓದಿ Amit Shah Visit : ವಿಜಯೇಂದ್ರ ಹೆಗಲ ಮೇಲೆ ಕೈ, ಅವರಿಂದಲೇ ಹೂಗುಚ್ಛ ಸ್ವೀಕಾರ; ದೊಡ್ಡ ಸಂದೇಶ ರವಾನಿಸಿದ ಅಮಿತ್ ಶಾ