ಬೆಂಗಳೂರು: ದೇವರ ಮೇಲೆ ಅಪಾರ ನಂಬಿಕೆಯನ್ನು (Devine power) ಹೊಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇದೀಗ ಚುನಾವಣೆಯನ್ನು ಮುಂದಿಟ್ಟುಕೊಂಡು ಹನ್ನೊಂದು ದಿನಗಳ ಮಹಾಯಾಗಕ್ಕೆ ಮುಂದಾಗಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವೃದ್ಧಿ ಮತ್ತು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ದೇವರ ಮೊರೆ ಹೊಕ್ಕಿರುವ ಕುಮಾರಸ್ವಾಮಿ ಅವರು, ಮಾರ್ಚ್ 3ರಿಂದ 9 ದಿನಗಳ ಶತಚಂಡಿಕಾಯಾಗ ಮತ್ತು ಮಹಾರುದ್ರ ದಶಾಂಶ ಹೋಮ ಮಾಡಿಸುತ್ತಿದ್ದಾರೆ.
ಬಿಡದಿಯಲ್ಲಿರುವ ಎಚ್.ಡಿ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಈ ಮಹಾಯಾಗ ನಡೆಯಲಿದ್ದು, ಮಾರ್ಚ್ 3ರಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪುಣ್ಯಾಹದ ಮೂಲಕ ಯಾಗಕ್ಕೆ ಚಾಲನೆ ನೀಡಲಾಗುತ್ತಿದೆ. ಕುಮಾರಸ್ವಾಮಿ ಅವರು ಕೋಟಿ ಮೃತ್ಯುಂಜಯ ಜಪದ ಮೂಲಕ ಆರೋಗ್ಯ ವೃದ್ಧಿ ಮತ್ತು ಮೃತ್ಯು ರಕ್ಷಕ ಸಂಕಲ್ಪ ಕೈಗೊಳ್ಳಲಿದ್ದಾರೆ.
ಹನ್ನೊಂದು ದಿನ, ಹನ್ನೊಂದು ಯಜ್ಞ ಕುಂಡಗಳಲ್ಲಿ ಯಾಗ
ಚಂಡಿ ಸಹಿತ ಅತಿರುದ್ರ ಮಹಾ ಯಜ್ಞ ಮತ್ತು ಶತ ಚಂಡಿಕಾ ಯಾಗ ಪ್ರಕ್ರಿಯೆಗಳು 11 ದಿನಗಳ ಕಾಲ ನಡೆಯಲಿವೆ. 11 ಯಜ್ಞ ಕುಂಡಗಳಲ್ಲಿ ಯಾಗ ನಡೆಯಲಿದೆ. ಮಾರ್ಕಾಂಡೇಯ ಪುರಾಣದ ದುರ್ಗಾ ಸಪ್ತಶತಿಯ 700 ಶ್ಲೋಕಗಳನ್ನು ದಿನಕ್ಕೆ ಮೂರು ಬಾರಿ ಪಾರಾಯಣ ಮಾಡಲಿದ್ದಾರೆ. ಪ್ರತ್ಯೇಕ ತರ್ಪಣ, ಮಾರ್ಜನ ಕ್ರಿಯೆಗಳ ಮೂಲಕ ಶತಚಂಡಿಕಾಯಾಗ ನಡೆಯಲಿವೆ.
ಶತಚಂಡಿಕಾ ಯಾಗದ ಫಲವೇನು?
ಶತ್ರುಪರಾಜಯ, ಅಧಿಕಾರವೃದ್ಧಿ, ಸಾಮ್ರಾಜ್ಯ ಸ್ಥಾಪನಾ ಶಕ್ತಿ, ರಾಜಕೀಯ ದಿಗ್ವಿಜಯ ಸಾಧಿಸಲು ಎಚ್‌ಡಿಕೆ ಈ ಮಹಾಯಾಗ ನಡೆಸಲು ಮುಂದಾಗಿದ್ದಾರೆ. ಜತೆಗೆ ನಕಾರಾತ್ಮಕ ಶಕ್ತಿಗಳ ದೃಷ್ಟಿ ನಿವಾರಣೆ, ಮಾಟ, ಮಂತ್ರ, ಯಂತ್ರ, ತಂತ್ರ ಪ್ರಯೋಗಗಳ ಉಚ್ಚಾಟನೆಯ ಉದ್ದೇಶವನ್ನು ಇದು ಹೊಂದಿದೆ.
ಮೃತ್ಯುಂಜಯ ಕೋಟಿ ಜಪದ ಫಲವೇನು?
ಅಪಮೃತ್ಯು ನಿವಾರಣೆ, ಮೃತ್ಯುದೋಷ ನಿವಾರಣೆ, ಆರೋಗ ವೃದ್ಧಿ, ಮೃತ್ಯುಕಂಟಕ ನಿವಾರಣೆ, ಆಯುಷ್ಯ ವೃದ್ಧಿಯ ಸಂಕಲ್ಪವನ್ನು ಹೊಂದಲಾಗಿದೆ.
ಇದನ್ನೂ ಓದಿ : Karnataka Election: 2023ರ ವಿಧಾನಸಭಾ ಚುನಾವಣೆ ಬಳಿಕ ವಿದಾಯ ಎಂದು ಹೇಳಿ ಯೂಟರ್ನ್ ಹೊಡೆದ ಕುಮಾರಸ್ವಾಮಿ