ಬೆಳಗಾವಿ: ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ನಾಲ್ಕು ಜಿಲ್ಲೆಗಳನ್ನು ರಚನೆ ಮಾಡುವಂತೆ ಸವದತ್ತಿ ಯಲ್ಲಮ್ಮದೇವಿಗೆ ಭಕ್ತರು ಹರಕೆ ಸಲ್ಲಿಸಿದ್ದಾರೆ. ಈ ಕುರಿತು ಬರೆದಿರುವ ಪತ್ರ ಯಲ್ಲಮ್ಮದೇವಿ ದೇವಸ್ಥಾನ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿದೆ.
ಜಿಲ್ಲೆ ಸವದತ್ತಿ ಹೊರವಲಯದಲ್ಲಿರುವ ಸುಪ್ರಸಿದ್ಧ ದೇವಸ್ಥಾನದಲ್ಲಿ ಬೆಳಗಾವಿ ಜಿಲ್ಲೆಯನ್ನು ನಾಲ್ಕು ಜಿಲ್ಲೆಯಾಗಿ ವಿಭಜಿಸುವಂತೆ ಭಕ್ತರು ಸುದೀರ್ಘ ಪತ್ರ ಬರೆದಿದ್ದು, ಬೆಳಗಾವಿಯನ್ನು ವಿಭಜಿಸಿ 4 ಜಿಲ್ಲೆಗಳಾಗಿ ರಚನೆ ಮಾಡಲು ಸಿಎಂಗೆ ಒಳ್ಳೆ ಬುದ್ಧಿ ನೀಡಲೆಂದು ಭಕ್ತರು ದೇವಿಗೆ ಹರಕೆ ಸಲ್ಲಿಸಿದ್ದಾರೆ.
ಇದನ್ನೂ ಓದಿ | KCC | ಕಂಗಾಲ ಕಾಂಗ್ರೆಸ್ ಕಂಪನಿ; ಬಿಜೆಪಿಯಿಂದ ಕೌಂಟರ್ ಅಟ್ಯಾಕ್
ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯದ ಐದನೇ ದಿನದಲ್ಲಿ, ಜಿಲ್ಲೆಯನ್ನು ವಿಭಜಿಸಿ ಬೆಳಗಾವಿ, ಗೋಕಾಕ, ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆಗಳಾಗಿ ಮಾಡುವಂತೆ ಭಕ್ತರು ಬರೆದಿರುವ ವಿಚಿತ್ರ ಹರಕೆ ಚೀಟಿ ಪತ್ತೆಯಾಗಿದೆ. 1997ರಲ್ಲಿ ಜೆ.ಎಚ್.ಪಟೇಲ್ ಸಿಎಂ ಆಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ 10 ತಾಲೂಕು ಇದ್ದವು. ಆಗ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ, ಗೋಕಾಕ್ ಅನ್ನು ಪ್ರತ್ಯೇಕ ಜಿಲ್ಲೆಗಳಾಗಿ ಘೋಷಣೆ ಮಾಡಲಾಗಿತ್ತು. ಆದರೆ ಕಾರ್ಯರೂಪಕ್ಕೆ ಬರಲಿಲ್ಲ. ಈಗ ಜಿಲ್ಲೆಯಲ್ಲಿ 14 ತಾಲೂಕುಗಳಿವೆ. ಹೀಗಾಗಿ ನಾಲ್ಕು ಜಿಲ್ಲೆಗಳನ್ನಾಗಿ ಮಾಡಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.
ಮೂರು ತಾಲೂಕುಗಳಿದ್ದರೂ ಯಾದಗಿರಿಯನ್ನು ಜಿಲ್ಲೆ ಮಾಡಿದ್ದಾರೆ. 2 ವಿಧಾನ ಸಭಾ ಕ್ಷೇತ್ರ ಇರುವ ಕೊಡಗು ಕೂಡ ಜಿಲ್ಲೆಯಾಗಿದೆ. ಹಾಗೆಯೇ ನಮ್ಮ ಜಿಲ್ಲೆಯಲ್ಲಿ 14 ತಾಲೂಕು, 18 ವಿಧಾನ ಸಭಾ ಕ್ಷೇತ್ರಗಳಿವೆ. ಹೀಗಾಗಿ ಬೆಳಗಾವಿಯನ್ನು ನಾಲ್ಕು ಜಿಲ್ಲೆಗಳನ್ನಾಗಿ ವಿಭಜನೆ ಮಾಡಿ, ಎರಡು ಪ್ರತ್ಯೇಕ ಉಪವಿಭಾಗಳನ್ನು ಮಾಡಬೇಕು. ಹುಂಡೇಕರ್, ವಾಸುದೇವ, ಗದ್ದಿಗೌಡರ ಸಮಿತಿಗಳು ಗೋಕಾಕ್ ಪ್ರತ್ಯೇಕ ಜಿಲ್ಲೆಗೆ ಶಿಫಾರಸು ಮಾಡಿವೆ. ಈ ನಿಟ್ಟಿನಲ್ಲಿ ಗೋಕಾಕ ಜಿಲ್ಲೆ ಮಾಡಲು ದೇವಿಯಲ್ಲಿ ಭಕ್ತರು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ | ನಾಡಗೀತೆಗೆ ಅನಂತಸ್ವಾಮಿ ಧಾಟಿ, ಪೂರ್ಣ ಸಾಹಿತ್ಯ: ದಶಕದ ಗೊಂದಲಕ್ಕೆ ರಾಜ್ಯ ಸರ್ಕಾರದಿಂದ ತೆರೆ