| ಪ್ರವೀಣ್ ಕುಮಾರ್, ಚಿಕ್ಕಮಗಳೂರು
15 ಸಾವಿರಕ್ಕೂ ಅಧಿಕ ವಾಹನಗಳು, 80 ಸಾವಿರಕ್ಕೂ ಹೆಚ್ಚು ಭಕ್ತರು. ಕಾಲಲ್ಲಿ ಚಪ್ಪಲಿ ಇಲ್ಲ, ನಡೆಯಲು ಸಮರ್ಪಕ ದಾರಿ ಇಲ್ಲ. ಆದರೂ ಬೆಟ್ಟದ ತಾಯಿಯನ್ನು ನೋಡುವ ತವಕ. ಇದು ಚಿಕ್ಕಮಗಳೂರಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮನ ದರ್ಶನ ಪಡೆಯಲು ಬಂದ ಭಕ್ತಸಾಗರದ ದೃಶ್ಯ. ಸುಮಾರು 3800 ಅಡಿಗಳಷ್ಟು ಎತ್ತರದ ಗುಡ್ಡದಲ್ಲಿ ನೆಲೆಸಿರುವ ಆ ದೇವಿಯನ್ನು ನೋಡಲು ಸೋಮವಾರ ಜನಸಾಗರವೇ ಹರಿದು ಬಂದಿತ್ತು.
ಕಳೆದ ಎರಡ್ಮೂರು ವರ್ಷಗಳಿಂದ ಕೊರೊನಾ ಹಾಗೂ ಮಳೆ ಕಾರಣಕ್ಕೆ ಬೆಟ್ಟ ಹತ್ತುವವರ ಸಂಖ್ಯೆ ತೀವ್ರ ಇಳಿಮುಖವಾಗಿತ್ತು. ಆದರೆ, ಈ ವರ್ಷ ಊಹೆಗೂ ಮೀರಿ ಭಕ್ತಸಾಗರ ಬೆಟ್ಟ ಹತ್ತಿ ಬೆಟ್ಟದ ತಾಯಿಯ ದರ್ಶನ ಪಡೆದಿದ್ದಾರೆ. ವರ್ಷಕ್ಕೊಮ್ಮೆ ದರ್ಶನ ಕೊಡುವ ಬಿಂಡಿಗ ದೇವಿರಮ್ಮನ ನೋಡಲು ಈ ವರ್ಷ ನಿರೀಕ್ಷೆಗೂ ಮೀರಿದ ಭಕ್ತವೃಂದ ಆಗಮಿಸಿತ್ತು. ಪ್ರತಿ ವರ್ಷ 50 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತುತ್ತಿದ್ದರು. ಆದರೆ, ಕಳೆದ ಎರಡ್ಮೂರು ವರ್ಷಗಳಿಂದ ಮಳೆ ಹಾಗೂ ಕೊರೊನಾದಿಂದ ಜನಸಂಖ್ಯೆ ಕ್ಷೀಣಿಸಿತ್ತು. ಈ ವರ್ಷ ಮಧ್ಯರಾತ್ರಿಯಿಂದಲೇ ಬೆಟ್ಟ ಹತ್ತಿದ ಭಕ್ತರ ಸಂಖ್ಯೆ ಅಂದಾಜು 80 ಸಾವಿರ ದಾಟಿದೆ. ಲಕ್ಷದ ಗಡಿಯೂ ಮುಟ್ಟಬಹುದು.
ಇದನ್ನೂ ಓದಿ | Deepawali 2022: ದೀಪಾವಳಿ v/s ಗ್ರಹಣ; ಆಚರಣೆ ಹೇಗೆ?
ದೀಪಾವಳಿ ಅಮಾವಾಸ್ಯೆಯ ಹಿಂದಿನ ದಿನ ಬೆಟ್ಟದಲ್ಲಿರುವ ಶಿವನ ಅಸ್ತ್ರಗಳುಳ್ಳ ದುರ್ಗೆಗೆ ವಿಶೇಷ ಪೂಜೆ ನಡೆಯಲಿದೆ. ಆ ಪೂಜೆಯನ್ನು ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬಿಂಡಿಗ ಗ್ರಾಮಕ್ಕೆ ಬರುತ್ತಾರೆ. ಇಲ್ಲಿ ಹರಕೆ ಕಟ್ಟಿದರೆ ಆ ಹರಕೆ ಈಡೇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಅಪಾರವಾಗಿದ್ದು, ಹರಕೆ ಕಟ್ಟಿದ-ಕಟ್ಟದ ಭಕ್ತರು ಪ್ರತಿವರ್ಷ ಇಲ್ಲಿಗೆ ಬಂದೇ ಬರುತ್ತಾರೆ. ವಿದ್ಯುತ್ ಸಂಪರ್ಕ ಕೂಡ ಇಲ್ಲದ ಆ ಕಲ್ಲು-ಬಂಡೆ, ಮುಳ್ಳುಗಳ ಬೆಟ್ಟದಲ್ಲಿ ಭಕ್ತರು ಹಿಂದಿನ ರಾತ್ರಿ 10 ಗಂಟೆಯಿಂದಲೇ ಬೆಟ್ಟ ಹತ್ತಲು ಶುರು ಮಾಡಿ ರಾತ್ರೋರಾತ್ರಿ ಕೆಳಗಿಳಿಯುತ್ತಾರೆ.
ಇಲ್ಲಿ ಹರಕೆ ಕಟ್ಟಿಕೊಂಡವರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದರೂ ಅವರ ಶಕ್ತ್ಯಾನುಸಾರವಾಗಿ ಸೌದೆಯನ್ನು ಹೊತ್ತೊಯ್ಯುತ್ತಾರೆ. ಇದರ ಜತೆಗೆ ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆಹಣ್ಣನ್ನು ದೇವಿಗೆ ಸಮರ್ಪಿಸುತ್ತಾರೆ. ಸಮುದ್ರ ಮಟ್ಟದಿಂದ ಸುಮಾರು 3800 ಅಡಿ ಎತ್ತರದಲ್ಲಿರುವ ದೇವಿರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯುತ್ತದೆ. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದವರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿಸಿಯೇ ಊಟ ಮಾಡುತ್ತಾರೆ.
ಸಂಜೆ ಭಕ್ತರು ತಂದ ಕಟ್ಟಿಗೆ, ಎಣ್ಣೆ, ಬೆಣ್ಣೆ, ಸೀರೆ, ರವಿಕೆಗಳಿಗೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನು ನೋಡಿ, ಬಳಿಕ ಅದಕ್ಕೆ ಆರತಿ ಮಾಡಿ ದೀಪಾವಳಿಯನ್ನು ಆಚರಿಸುವುದು ವಾಡಿಕೆ. ಈ ಬೆಟ್ಟದ ತಾಯಿಗೂ ಮೈಸೂರು ಅರಸರಿಗೂ ಅವಿನಾಭಾವ ಸಂಬಂಧವಿತ್ತು. ಪ್ರತಿವರ್ಷ ಮೈಸೂರು ಅರಮನೆಯಿಂದ ಈ ದೇವಾಲಯಕ್ಕೆ ಇಂದಿಗೂ ಎಣ್ಣೆ, ಸೀರೆ, ಅರಿಶಿನ-ಕುಂಕುಮ ಸೇರಿ ಪೂಜೆ ವಸ್ತುಗಳು ಬರುತ್ತದೆ. ಇನ್ನು ಈ ವರ್ಷ ಸಾವಿರಾರು ಅಪ್ಪು ಫ್ಯಾನ್ಸ್ ಕೂಡ ಬೆಟ್ಟ ಹತ್ತಿದ್ದು, ಅಪ್ಪುವಿನ ಫ್ಲೆಕ್ಸ್ ಕೂಡ ಗುಡ್ಡದ ತುದಿಯಲ್ಲಿ ಹಾರಾಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ | Solar Eclipse 2022 | ಗ್ರಹಣದಲ್ಲಿ ಈ ದೇವರುಗಳಿಗೆ ಇಲ್ಲ ಪೂಜೆ-ಪುನಸ್ಕಾರ; ಹೋಗುವ ಮುಂಚೆ ಒಮ್ಮೆ ಗಮನಿಸಿ