ಹಾಸನ: ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ವಾರ್ಷಿಕವಾಗಿ ನಡೆಯುವ ಗೌರವ ವಂದನೆ ಸ್ವೀಕಾರ ಸಂಪ್ರದಾಯವನ್ನು ಮಂಗಳವಾರ ಪಾಲನೆ ಮಾಡಲಾಯಿತು. ಸಾಮಾನ್ಯವಾಗಿ ಈ ವೇಳೆ ಕುರಾನ್ ಪಠಣ ನಡೆಸುತ್ತಿದ್ದರೂ ಈ ಬಾರಿ ಮುಸ್ಲಿಂ ಖಾಜಿಗಳು ಕೇವಲ ಶ್ಲೋಕ ಪಠಣಕ್ಕೆ ಸೀಮಿತಗೊಳಿಸಿದರು. ಈ ವೇಳೆ ಹಿಂದೂ ಸಂಘಟನಗಳ ಕಾರ್ಯಕರ್ತರು ಜೋರಾಗಿ ಜೈಶ್ರೀರಾಮ್ ಘೋಷಣೆಗಳನ್ನು ಕೂಗಿದರು.
ರಥದ ಮೇಲೆ ಶ್ರೀ ಚನ್ನಕೇಶವ ಸ್ವಾಮಿ ಉತ್ಸವ ಮೂರ್ತಿ ಕೂರಿಸಿದ ಬಳಿಕ ದೊಡ್ಡಮೇದೂರು ಗ್ರಾಮದ ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಅವರ ಕುಟುಂಬದವರು ದೇವಸ್ಥಾನದ ಮೆಟ್ಟಿಲುಗಳ ಮೇಲೆ ನಿಂತು ಸಂಪ್ರದಾಯದಂತೆ ಶ್ಲೋಕ ಪಠಿಸಿದರು. ಅದಾದ ಬಳಿಕ ರಥೋತ್ಸವ ಚಾಲನೆ ಪಡೆಯಿತು.
ಚನ್ನಕೇಶವ ದೇವಾಲಯದ ಜಾತ್ರೆ ಸಂದರ್ಭದಲ್ಲಿ ಕುರಾನ್ ಪಠಣ ನಡೆಸುವ ಸಂಪ್ರದಾಯ 1929ರಿಂದ ಆರಂಭವಾಗಿದ್ದು, ಇದಕ್ಕೆ ದಾಖಲೆಗಳಿವೆ. ಆದರೆ, ಕಳೆದ ಕೆಲವು ವರ್ಷಗಳಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದರು. ಚನ್ನಕೇಶವನಿಗೇಕೆ ಕುರಾನ್ ಪಠಣ ಎನ್ನುವುದು ಅವರ ಪ್ರಶ್ನೆ. ಈ ಬಾರಿ ಇದು ತೀವ್ರತೆಯನ್ನು ಪಡೆದುಕೊಂಡಾಗ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಮಧ್ಯ ಪ್ರವೇಶ ಮಾಡಿ ಪ್ರಾಚ್ಯ ವಸ್ತು ಇಲಾಖೆಯ ಆಗಮ ಪಂಡಿತರಿಂದ ವರದಿಯನ್ನು ಪಡೆದಿದ್ದರು.
ಆಗಮ ಪಂಡಿತರ ವರದಿ, ಹಳೆಯ ಮ್ಯಾನುವಲ್ ಪ್ರಕಾರ ಸೋಮವಾರ ಸಂಜೆ ಧಾರ್ಮಿಕ ದತ್ತಿ ಇಲಾಖೆ ಹೊಸ ಸೂಚನೆಯೊಂದನ್ನು ನೀಡಿತ್ತು. ಇದರ ಪ್ರಕಾರ, ಈ ಬಾರಿ ರಥದ ಮುಂದೆ ಕುರಾನ್ ಪಠಣಕ್ಕೆ ಅವಕಾಶವಿಲ್ಲ. ಅದರ ಬದಲಿಗೆ ದೇವಸ್ಥಾನದ ಮುಂದಿನ ಮೆಟ್ಟಿಲುಗಳಲ್ಲಿ ಪಠಿಸಬೇಕು ಎಂದು ಸೂಚಿಸಲಾಗಿತ್ತು. ಸುಮಾರು ಆರು ವರ್ಷಗಳ ಹಿಂದಿನ ವರೆಗೆ ದೇಗುಲದ ಮೆಟ್ಟಿಲ ಮೇಲೆ ನಡೆಯುತ್ತಿದ್ದ ಈ ಪ್ರಕ್ರಿಯೆಯನ್ನು ಇತ್ತೀಚೆಗೆ ರಥದ ಮುಂದಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೆ ಹಳೆ ಮಾದರಿಯಲ್ಲೇ ನಡೆಸುವಂತೆ ಧಾರ್ಮಿಕ ದತ್ತಿ ಇಲಾಖೆ ಸೂಚಿಸಿತ್ತು.
ಅದರಂತೆ ಮಂಗಳವಾರ ಮುಂಜಾನೆ ಬಿಗಿ ಭದ್ರತೆಯ ನಡುವೆ ರಥೋತ್ಸವಕ್ಕೆ ಸಿದ್ಧತೆ ನಡೆಸಲಾಗಿತ್ತು. ಹಿಂದು ಸಂಘಟನೆಗಳ ಕಾರ್ಯಕರ್ತರು ಕುರಾನ್ ಪಠಣಕ್ಕೆ ಅವಕಾಶ ನೀಡಲೇಬಾರದು ಎಂಬ ತಮ್ಮ ವಾದವನ್ನು ಮುಂದುವರಿಸಿದ್ದರು. ಜಿಲ್ಲಾಡಳಿತದ ವಿರುದ್ಧ ಧಿಕ್ಕಾರವನ್ನೂ ಕೂಗಿದ್ದರು.
ಬೆಳಗ್ಗೆ ಒಂದು ಕಡೆ ರಥೋತ್ಸವಕ್ಕೆ ಸಿದ್ಧತೆ ನಡೆಸಿದ್ದರೆ ಇನ್ನೊಂದು ಕಡೆಯಲ್ಲಿ ಕುರಾನ್ ಪಠಣ ಮಾಡಲು ಆಗಮಿಸಿದದೊಡ್ಡಮೇದೂರು ಗ್ರಾಮದ ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಮತ್ತು ಕುಟುಂಬಿಕರಿಗೆ ಬಿಗಿ ಭದ್ರತೆಯನ್ನು ಒದಗಿಸಲಾಯಿತು. ಮತ್ತೊಂದು ಕಡೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಿಂದೂ ವಿರೋಧಿ ಜಿಲ್ಲಾಡಳಿತಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಅವರೇ ಜೈಶ್ರೀರಾಮ್ ಎಂಬ ಘೋಷಣೆಗಳನ್ನೂ ಮೊಳಗಿಸಿದರು.
ಚೆನ್ನಕೇಶವ ಸ್ವಾಮಿಯ ಉತ್ಸವ ಮೂರ್ತಿಯನ್ನು ತಂದು ರಥಕ್ಕೇರಿಸಿದ ಬಳಿಕ ದೇವಸ್ಥಾನದ ಮೂಲೆಯೊಂದರ ಮೆಟ್ಟಿಲ ಮೇಲೆ ಮುಸ್ಲಿಂ ಖಾಜಿ ಕುಟುಂಬದಿಂದ ಕುರಾನ್ ಪಠಣ ನಡೆಯಿತು. ಈ ವೇಳೆ ಹಿಂದು ಕಾರ್ಯಕರ್ತರ ಜೈಶ್ರೀರಾಮ್ ಘೋಷಣೆಯೂ ಮುಗಿಲುಮುಟ್ಟಿತು. ಅರೆ ಸೇನಾಪಡೆ ಮತ್ತು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಕುರಾನ್ ಪಠಣದ ಬಳಿಕ ರಥೋತ್ಸವ ಮುಂದುವರಿಯಿತು. ರಥೋತ್ಸವ ಬುಧವಾರವೂ ನಡೆಯಲಿದೆ.
ಕುರಾನ್ ಪಠಣ ನಡೆದಿಲ್ಲ, ಕೇವಲ ಪ್ರಾರ್ಥನೆ, ಗೌರವ ಪಾಲನೆ ಮಾತ್ರ
ರಥೋತ್ಸವದ ಸಂದರ್ಭದಲ್ಲಿ ಈ ಬಾರಿ ಕುರಾನ್ ಪಠಣ ಮಾಡಲಾಗಿಲ್ಲ, ಗೌರವ ವಂದನೆ ಸ್ವೀಕಾರ ಮತ್ತು ಶ್ಲೋಕ ರೂಪದಲ್ಲಿ ಪ್ರಾರ್ಥನೆ ಮಾತ್ರ ಸಲ್ಲಿಸಲಾಗಿದೆ ಎಂದು ಆಡಳಿತ ಮತ್ತು ಖಾಜಿ ಅವರ ಕುಟುಂಬ ಸ್ಪಷ್ಟಪಡಿಸಿದೆ.
ʻʻಖಾಜಿಯವರು ಕುರಾನ್ ಪಠಣ ಮಾಡಿಲ್ಲ ಕೇವಲ ಪ್ರಾರ್ಥನೆ ಮಾಡಿದ್ದಾರೆ. ಹೀಗಾಗಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲʼʼ ಎಂದು ರಥೋತ್ಸವದ ಬಳಿಕ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣ ಸ್ವಾಮಿ ಹೇಳಿಕೆ ನೀಡಿದರು.
ಖಾಜಿ ಕುಟುಂಬವರು ರಥದ ಸಮೀಪ ಇರುವ ಬಾವಿ ಎದುರು ದೇವರಿಗೆ ನಮಿಸಿ ಪ್ರಾರ್ಥನೆ ಮಾಡಿದ್ದಾರೆ. ಅವರು ಪ್ರಾರ್ಥನೆ ಮಾಡಿದ್ದಕ್ಕೆ ದೇವಾಲಯದಿಂದ ಗೌರವ ಸಮರ್ಪಣೆ ಮಾಡಲಾಗಿದೆ ಎಂದು ನಾರಾಯಣ ಸ್ವಾಮಿ ತಿಳಿಸಿದರು.
ʻʻನಾನು ಕುರಾನ್ ಪಠಣ ಮಾಡಿಲ್ಲ ಪ್ರಾರ್ಥನೆ ಮಾಡಿ ಗೌರವ ಸ್ವೀಕಾರ ಮಾಡಿದ್ದೇನೆʼʼ ಎಂದು ಖಾದ್ರಿಯವರು ಬರೆದು ಸಹಿ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಖಾಜಿ ಕುಟುಂಬದವರು ಹೇಳಿದ್ದೇನು?
ʻʻದಾರ್ಮಿಕ ದತ್ತಿ ಆಯುಕ್ತರ ಆದೇಶದಂತೆ ಈ ದಿನ ನಾನು ದೇವಾಲಯದ ಮೆಟ್ಟಿಲ ಬಳಿ ನಮ್ಮ ರೀತಿಯಂತೆ ದೇವರಿಗೆ ಶ್ಲೋಕ ಹೇಳಿ ವಂದನೆ ಸಮರ್ಪಣೆ ಮಾಡಿದ್ದೇನೆ. ದೇವಾಲಯದ ವತಿಯಿಂದ ನೀಡಿದ ಮರ್ಯಾದೆ ಸ್ವೀಕರಿಸುತ್ತೇನೆ. ಹಾಗು ಈ ದಿನ ನಾನು ಕುರಾನ್ ಪಠಣ ಮಾಡಿಲ್ಲ ಎಂದು ತಿಳಿಸ ಬಯಸುತ್ತೇನೆ. ರಥದ ಎದುರು ಮುಸ್ಲಿಂ ಧಾರ್ಮಿಕ ವಿಧಿಯಂತೆ ನಮಿಸಿ ಪತ್ರವನ್ನು ಸಲ್ಲಿಸಿದ್ದೇನೆʼʼ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : Dharma Dangal : ಬೇಲೂರು ಚನ್ನಕೇಶವ ಜಾತ್ರೆಯಲ್ಲಿ ಕುರಾನ್ ಪಠಣಕ್ಕೆ ಅವಕಾಶ; ರಥದ ಬದಲು ದೇವಳದ ಮೆಟ್ಟಿಲ ಮೇಲೆ