ಬೆಂಗಳೂರು: ವರ್ಲ್ಡ್ ಸ್ಕಿಲ್ಸ್ ಕಾಂಪಿಟಿಷನ್ 2022ರ (World Skill Competition) ವಿಶೇಷ ಆವೃತ್ತಿಯಲ್ಲಿ ಅಪಾರ ಪ್ರತಿಭೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಿದ ಭಾರತದ 18 ಅಭ್ಯರ್ಥಿಗಳಿಗೆ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸನ್ಮಾನಿಸಿದ್ದಾರೆ.
ವರ್ಲ್ಡ್ ಸ್ಕಿಲ್ಸ್ ಕಾಂಪಿಟಿಷನ್‌ನಲ್ಲಿ ಭಾರತ ಸ್ಪರ್ಧಿಗಳು 50 ಕೌಶಲ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ 2 ಬೆಳ್ಳಿ ಪದಕಗಳು, 3 ಕಂಚಿನ ಪದಕಗಳು ಮತ್ತು 13 ಮೆಡಲ್ ಫಾರ್ ಎಕ್ಸಲೆನ್ಸ್ ಪಡೆಯುವ ಮೂಲಕ 11ನೇ ಸ್ಥಾನ ಪಡೆದಿದೆ. ವಿಜೇತರು ಮತ್ತು ಅವರ ತರಬೇತುದಾರರಿಗೆ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಈ ವೇಳೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾರತದಲ್ಲಿ ರಾಷ್ಟ್ರೀಯ ಕೌಶಲ್ಯ ಸ್ಪರ್ಧೆ ಇಂಡಿಯಾ ಸ್ಕಿಲ್ಸ್ 2023-24 ಸ್ಪರ್ಧೆ ಆಯೋಜಿಸುವುದಾಗಿ ಘೋಷಿಸಿದರು. ಇದಕ್ಕಾಗಿ ಅಭ್ಯರ್ಥಿಗಳು ಸ್ಕಿಲ್ ಇಂಡಿಯಾ ಡಿಜಿಟಲ್ ಪ್ಲಾಟ್ ಫಾರಂನಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಇದನ್ನೂ ಓದಿ | Agricultural Research: ಕೃಷಿ ವಿವಿಗಳಲ್ಲಿ ಸಂಶೋಧನೆಗಳು ಹೆಚ್ಚಾಗಬೇಕು: ಸಿಎಂ ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ಸಾಮರ್ಥ್ಯ, ಅನ್ವಯಿಕ ಜ್ಞಾನ ಮತ್ತು 21ನೇ ಶತಮಾನದತ್ತ ಮುನ್ನಡೆಸುವ ಸಮಗ್ರ ತರಬೇತಿಗೆ ಪ್ರಾಮುಖ್ಯತೆ ನೀಡುತ್ತಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) 2020 ಶಿಕ್ಷಣದೊಂದಿಗೆ ಕೌಶಲ್ಯಾಭಿವೃದ್ಧಿಯ ಏಕೀಕರಣವನ್ನು ಔಪಚಾರಿಕಗೊಳಿಸುತ್ತಿದ್ದು, ಎಂ.ಎಸ್.ಡಿ.ಇ. ವರ್ಲ್ಡ್ ಸ್ಕಿಲ್ಸ್ 2023-24ರಲ್ಲಿ ಭಾರತದ ಭಾಗವಹಿಸುವ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ತಿಳಿಸಿದರು.
ಉದ್ಯಮ, ಶಿಕ್ಷಣ ಸಂಸ್ಥೆಗಳು ಮತ್ತು ನೀತಿ ನಿರೂಪಕರು ಕೌಶಲ್ಯಾಭಿವೃದ್ಧಿಯನ್ನು ಜನಾಂದೋಲನವಾಗಿ ಮಾಡುವ ಮೂಲಕ ಭಾರತವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಕನಸನ್ನು ವಾಸ್ತವಗೊಳಿಸಲು ಒಟ್ಟಿಗೆ ಶ್ರಮಿಸಲು ಕೋರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ (ಎಂ.ಎಸ್.ಡಿ.ಇ) ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ, ಹೆಚ್ಚುವರಿ ಕಾರ್ಯದರ್ಶಿ ಶ್ರೀ ಕೃಷ್ಣ ಕುಮಾರ್ ದ್ವಿವೇದಿ, ಯುಜಿಸಿ ಅಧ್ಯಕ್ಷ ಪ್ರೊ.ಎಂ. ಜಗದೀಶ್ ಕುಮಾರ್, ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಂ, ಡೈರೆಕ್ಟರ್ ಜನರಲ್ (ಟ್ರೈನಿಂಗ್) ತೃಷಲ್ಜಿತ್ ಸೇಥಿ ಮತ್ತು ಎನ್.ಎಸ್.ಡಿ.ಸಿ.ಯ ಸಿಇಒ ಮತ್ತು ಎನ್.ಎಸ್.ಡಿ.ಸಿ. ಇಂಟರ್ನ್ಯಾಷನಲ್ ಎಂ.ಡಿ. ಶ್ರೀ ವೇದ್ ಕುಮಾರ್ ತಿವಾರಿ ಉಪಸ್ಥಿತರಿದ್ದರು.
15 ದೇಶಗಳ ಸ್ಪರ್ಧಿಗಳು ಭಾಗಿ
ವರ್ಲ್ಡ್ ಸ್ಕಿಲ್ಸ್ ಕಾಂಪಿಟಿಷನ್ 2022 ಸ್ಪೆಷಲ್ ಎಡಿಷನ್ ಸಾಂಕ್ರಾಮಿಕದಿಂದ ಮೇ ತಿಂಗಳಲ್ಲಿ ರದ್ದಾದ ವರ್ಲ್ಡ್ ಸ್ಕಿಲ್ಸ್ ಶಾಂಘೈ 2022ರ ಅಧಿಕೃತ ಬದಲಾವಣೆಯಾಗಿದೆ. ಮೂಲ ಮಾದರಿಯಿಂದ ಬದಲಾಯಿಸಿ ಈ ಕೌಶಲ್ಯ ಸ್ಪರ್ಧೆಗಳನ್ನು 15 ದೇಶಗಳಲ್ಲಿ ಮತ್ತು ಪ್ರದೇಶಗಳಲ್ಲಿ 12 ವಾರಗಳಿಗೂ ಹೆಚ್ಚು ಕಾಲ ಸೆಪ್ಟೆಂಬರ್ 7 ರಿಂದ ನವೆಂಬರ್ 26ರವರೆಗೆ ನಡುವೆ ನಡೆಸಲಾಗಿದೆ.
ಬೆಳ್ಳಿ ಪದಕಗಳ ವಿಜೇತರಿಗೆ 8 ಲಕ್ಷ ರೂ. ನಗದು ಬಹುಮಾನ ನೀಡಲಾಯಿತು, ಅವರ ತರಬೇತುದಾರರು 3 ಲಕ್ಷ ರೂ. ಸ್ವೀಕರಿಸಿದರು. ಕಂಚಿನ ಪದಕ ವಿಜೇತರಿಗೆ 6 ಲಕ್ಷ ರೂ. ಪುರಸ್ಕಾರ ನೀಡಲಾಯಿತು ಮತ್ತು ಅವರ ತರಬೇತುದಾರರಿಗೆ 2 ಲಕ್ಷ ರೂ. ನೀಡಲಾಯಿತು. ಮೆಡಲ್ ಫಾರ್ ಎಕ್ಸೆಲೆನ್ಸ್ ಪಡೆದ ಅಭ್ಯರ್ಥಿಗಳು ಹಾಗೂ ಅವರ ತಜ್ಞರು ಕ್ರಮವಾಗಿ 2 ಲಕ್ಷ ರೂ. ಮತ್ತು 1ಲಕ್ಷ ರೂ. ನಗದು ಬಹುಮಾನಗಳನ್ನು ಪಡೆದರು.
46ನೇ ವರ್ಲ್ಡ್ ಸ್ಕಿಲ್ಸ್ ಅನ್ನು 2021ರಲ್ಲಿ ನಡೆಸುವ ಉದ್ದೇಶವಿತ್ತು. ಆದರೆ, 2020ರಿಂದ ಸಾಂಕ್ರಾಮಿಕದ ಕಾರಣದಿಂದ ಮುಂದೂಡಲಾಗಿತ್ತು. ಈ ವಿಶೇಷ ಆವೃತ್ತಿಯು 29 ಪ್ರತ್ಯೇಕ ಕಾರ್ಯಕ್ರಮಗಳಲ್ಲಿ 84 ದಿನಗಳ ಕಾಲ 400, 000ಕ್ಕೂ ಹೆಚ್ಚು ಸಂದರ್ಶಕರನ್ನು ಸ್ವಾಗತಿಸಿತು. 56 ಸದಸ್ಯ ದೇಶಗಳು ಮತ್ತು ಪ್ರದೇಶಗಳ 1,000ಕ್ಕೂ ಹೆಚ್ಚು ಸ್ಪರ್ಧಿಗಳು ಮತ್ತು 62 ಕೌಶಲ್ಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು.
ಇದನ್ನೂ ಓದಿ | VISTARA TOP 10 NEWS : ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ?; ಗಾಜಾದಲ್ಲಿ ಆಸ್ಪತ್ರೆ ಮೇಲೆ ಬಾಂಬ್ ದಾಳಿಗೆ ಜನ ವಿಲವಿಲ
ಭಾರತವು 50 ಕೌಶಲ್ಯಗಳಲ್ಲಿ 56 ಸ್ಪರ್ಧಿಗಳೊಂದಿಗೆ ಮತ್ತು 50 ತಜ್ಞರೊಂದಿಗೆ ಭಾಗವಹಿಸಿತ್ತು. ಶೇ.19ರಷ್ಟು ಮಹಿಳೆಯರ ಭಾಗವಹಿಸುವಿಕೆ ಇದ್ದು, ಅವರು ಪುರುಷರು ಸಾಂಪ್ರದಾಯಿಕವಾಗಿ ಮಾಡುವ ವೆಲ್ಡಿಂಗ್, ಪ್ಲಂಬಿಂಗ್ ಮತ್ತು ಹೀಟಿಂಗ್, ಸಿ.ಎನ್.ಸಿ. ಮಿಲ್ಲಿಂಗ್, ಸಿ.ಎನ್.ಸಿ.ಟರ್ನಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಬ್ರಿಕ್ ಲೇಯಿಂಗ್ ಕಾರ್ಯಗಳನ್ನು ಮಾಡಿದರು. ಇದು ದೇಶದ ಅಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾರಿಶಕ್ತಿಯನ್ನು ಬಳಸಿಕೊಳ್ಳುವ ಧ್ಯೇಯೋದ್ದೇಶಕ್ಕೆ ಪೂರಕವಾಗಿತ್ತು.