Site icon Vistara News

ನಿರಂತರ ಕುಡಿಯುವ ನೀರು ಪೂರೈಕೆ ಕಾಮಗಾರಿ ಚುರುಕುಗೊಳಿಸಿ, ಅಧಿಕಾರಿಗಳಿಗೆ ಸಿಎಂ ಸೂಚನೆ

ಬೊಮ್ಮಾಯಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ 24/7 ನಿರಂತರ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಚುರುಕುಗೊಳ್ಳಬೇಕು. ಗುತ್ತಿಗೆ ಪಡೆದಿರುವ ಸಂಸ್ಥೆಯು ಸ್ಥಳೀಯ ಜನಪ್ರತಿನಿಧಿಗಳ ಸಲಹೆ, ಸಹಕಾರ ಪಡೆದು ಜಲ ಸಂಗ್ರಹಾಗಾರ ಹಾಗೂ ಕೊಳವೆ ಮಾರ್ಗ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಡೆನಿಸನ್ಸ್ ಹೋಟೆಲಿನಲ್ಲಿ ಭಾನುವಾರ ಅವಳಿ ನಗರದ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆ ಪ್ರಗತಿ ಪರಿಶೀಲನೆ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಎಲ್ ಆ್ಯಂಡ್ ಟಿ ಸಂಸ್ಥೆಯು ಪ್ರತಿ ತಿಂಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಗತಿ ಮಾಹಿತಿ ನೀಡಬೇಕು. ಅರ್ಪಣಾ ಮನೋಭಾವದಿಂದ ಕೆಲಸ ಮಾಡಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಕೂಡಲೇ ಸ್ಥಳೀಯ ಶಾಸಕರೊಂದಿಗೆ ಸಭೆ ನಡೆಸಿ ಸಲಹೆಗಳನ್ನು ಪಡೆಯಬೇಕು ಯೋಜನೆಯ ಅನುಷ್ಠಾನಕ್ಕೆ ಇದು ಸಹಾಯವಾಗಲಿದೆ ಎಂದರು.‌

ಕೆಯುಐಡಿಎಫ್‌ಸಿ ಹಾಗೂ ಎಲ್ ಆ್ಯಂಡ್ ಟಿ ಸಂಸ್ಥೆಗಳು ಜಂಟಿಯಾಗಿ ನ್ಯಾಯಾಲಯಕ್ಕೆ ಉತ್ತರ ನೀಡಲಿ. ಆಡಳಿತ ವ್ಯವಸ್ಥೆ, ಹಣಕಾಸು ನಿರ್ವಹಣೆಯಲ್ಲಿ ವಿಕೇಂದ್ರೀಕರಣ ಮಾಡಿ ತ್ವರಿತತೆ ತರಬೇಕು. ಇದು ಯಾವುದೇ ಕಟ್ಟಡ ಕಾಮಗಾರಿಯಲ್ಲ. ಎಲ್ಲ ಸಾರ್ವಜನಿಕರಿಗೆ ಅಗತ್ಯವಾಗಿರುವ ಕುಡಿಯುವ ನೀರಿನ ಯೋಜನೆಯಾಗಿದೆ. ಗುತ್ತಿಗೆ ಸಂಸ್ಥೆಯು ತನ್ನ ಸಮಸ್ಯೆಗಳನ್ನು ನಿರ್ವಹಿಸಿಕೊಳ್ಳುವ ಸಾಮರ್ಥ್ಯದೊಂದಿಗೆ ಮುನ್ನಡೆಯಬೇಕು. ಜಿಲ್ಲಾಡಳಿತ , ಸರ್ಕಾರವೂ ಆ ನಿಟ್ಟಿನಲ್ಲಿ ಸಹಕರಿಸಲಿದೆ. ಅನುಷ್ಠಾನ ತೃಪ್ತಿಕರವಾಗಿರದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಂದು ಎಚ್ಚರಿಸಿದರು.

ಇದನ್ನೂ ಓದಿ | ಸತೀಶ್‌ ಜಾರಕಿಹೊಳಿ ಆಪ್ತನ ಮೇಲೆ ಫೈರಿಂಗ್‌ ಮಾಡಿದವನ ಕೊಲೆ!

Exit mobile version