Site icon Vistara News

Child death :‌ ಬದುಕಿ ಉಳಿಯಲಿಲ್ಲ ಆಕಾಶ್; ಅಂತ್ಯ ಸಂಸ್ಕಾರದ ವೇಳೆ ಉಸಿರಾಡಿದ ಬಾಲಕನ ಉಸಿರು ನಿಂತೇ ಹೋಯ್ತು

Child death KIMS hospital

ಧಾರವಾಡ: ಇನ್ನೇನು ಅಂತ್ಯ ಸಂಸ್ಕಾರ (Final rites) ನಡೆಸಬೇಕು ಎನ್ನುವ ಹೊತ್ತಿನಲ್ಲಿ ಕೊನೆಯದಾಗಿ ನೀರು ಕುಡಿಸಿದಾಗ ಉಸಿರಾಡಿದ ಪುಟ್ಟ ಬಾಲಕ ಆಕಾಶ್‌ ಕೊನೆಗೂ ಉಸಿರು ಚೆಲ್ಲಿದ್ದಾನೆ (Child Akash Finally dead). ಆಸ್ಪತ್ರೆಯಿಂದ ಮರಣವನ್ನಪ್ಪಿದೆ ಎಂದೇ ಕರೆತರಲಾದ ಧಾರವಾಡದ ಅಣ್ಣಿಗೇರಿ ತಾಲ್ಲೂಕಿನ ಬಸಾಪುರದ ಆಕಾಶ್‌ ಬಸವರಾಜ್‌ ಪೂಜಾರ ಎಂಬ ಒಂದುವರೆ ವರ್ಷದ ಪುಟ್ಟ ಮಗು (one and half year old boy) ಅಂತ್ಯ ಸಂಸ್ಕಾರಕ್ಕೆ ಮುನ್ನ ಮತ್ತೆ ಉಸಿರಾಡಿತ್ತು. ಅದನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದು ಫಲ ನೀಡಿಲ್ಲ. ಪವಾಡಸದೃಶವೆಂಬಂತೆ ಮರುಜೀವ (Child Rebirth) ಪಡೆದ ಮಗು ಇದೀಗ ಶಾಶ್ವತವಾಗಿ (Child death) ಕಣ್ಣು ಮುಚ್ಚಿದೆ.

ಬಸಾಪುರ ಗ್ರಾಮದ ಬಸವರಾಜ್‌ ಎಂಬವರ ಒಂದುವರೆ ವರ್ಷದ ಮಗು ಆಕಾಶ್‌ನನ್ನು ಆಗಸ್ಟ್‌ 13ರಂದು ಅನಾರೋಗ್ಯ ನಿಮಿತ್ತ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೈಡ್ರೋಸೆಫಲಸ್‌ ಎಂಬ ಮೆದುಳಿನಲ್ಲಿ ನೀರು ತುಂಬುವ ಸಮಸ್ಯೆಗೆ ಒಳಗಾಗಿದ್ದ ಮಗು ನಾಲ್ಕು ದಿನವಾದರೂ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ.

Child brought at Navalagund

ಐಸಿಯುನಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಮಗುವಿಗೆ ವೆಂಟಿಲೇಟರ್‌ನಲ್ಲಿ ಆಕ್ಸಿಜನ್‌ ನೀಡಲಾಗುತ್ತಿತ್ತು. ಯಾವುದಕ್ಕೂ ಪ್ರತಿಕ್ರಿಯೆ ನೀಡದ ಮಗುವಿಗೆ ನೀಡಿರುವ ಆಕ್ಸಿಜನ್‌ ತೆಗೆದರೆ ಅದು ಬದುಕುಳಿಯುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ಇದಾದ ಬಳಿಕ ಗುರುವಾರ (ಆಗಸ್ಟ್‌ 17) ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದರೆಂದು ಕುಟುಂಬಿಕರು ಮಗುವನ್ನು ಮನೆಗೆ ತಂದಿದ್ದರು.

ಕಣ್ಣೀರ ನಡುವೆ ಮಗುವಿನ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳನ್ನು ನಡೆಸಲಾಯಿತು. ಮಗುವನ್ನು ಮನೆಗೆ ತಂದು ಕೆಲವು ಧಾರ್ಮಿಕ ಕಾರ್ಯಕ್ರಮಗಳನ್ನು ಮುಗಿಸಿ ಸ್ಮಶಾನಕ್ಕೆ ಕರೆದೊಯ್ಯಲಾಯಿತು.

Child brought at Navalagund

ಅಲ್ಲಿ ಮಗುವಿನ ಅಂತ್ಯ ಸಂಸ್ಕಾರಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು. ಮಗುವನ್ನು ಇನ್ನೇನು ಗುಂಡಿಗೆ ಇಳಿಸಬೇಕು ಎನ್ನುವಷ್ಟರಲ್ಲಿ ಕೊನೆಯ ಬಾರಿ ಬಾಯಿಗೆ ನೀರು ಬಿಡುವಾಗ ಮಗು ಉಸಿರಾಡಿದಂತೆ ಕಂಡಿತ್ತು. ಕೈಕಾಲು ಆಡಿಸಿದಂತೆಯೂ ಆಯಿತು. ಕೂಡಲೇ ಪೋಷಕರು ಮತ್ತೆ ಮಗುವನ್ನು ಹಿಡಿದುಕೊಂಡು ಕಿಮ್ಸ್‌ ಆಸ್ಪತ್ರೆಗೆ ಓಡಿದ್ದರು.

ಇದನ್ನೂ ಓದಿ: Child Rescued : ಪ್ಯಾಂಟ್‌ ಬಟನ್‌ ನುಂಗಿದ 2 ತಿಂಗಳ ಮಗು; ಪ್ರಾಣ ಉಳಿಸಿದ ಸರ್ಕಾರಿ ಆಸ್ಪತ್ರೆ ವೈದ್ಯರು

ಕಿಮ್ಸ್‌ ಆಸ್ಪತ್ರೆಯಿಂದ ಮರಳಿ ಮನೆಗೆ

ಈ ನಡುವೆ ಮಗು ಉಸಿರಾಡುತ್ತಿದೆ ಎಂಬ ಕಾರಣದಿಂದ ಖುಷಿಯಿಂದ ಮನೆಯವರು ಮಗುವನ್ನು ಕಿಮ್ಸ್‌ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಅಲ್ಲಿ ಯಾವ ಕಾರಣಕ್ಕೋ ಏನೋ ದಾಖಲಾಗಲಿಲ್ಲ. ಮುಂದೇನು ಮಾಡುವುದು ಎಂದು ತಿಳಿಯದೆ ಪಾಲಕರು ಗುರುವಾರ ರಾತ್ರಿಯೇ ಮಗುವನ್ನು ಮರಳಿ ಮನೆಗೆ ಕರೆ ತಂದಿದ್ದರು. ಶುಕ್ರವಾರ ಬೆಳಗ್ಗೆ ಒಂದುವರೆ ವರ್ಷದ ಆಕಾಶ್‌ ಮೃತಪಟ್ಟಿದ್ದಾನೆ. ಹೀಗಾಗಿ ಮನೆಯವರು ಮತ್ತೊಮ್ಮೆ ಅಂತ್ಯಕ್ರಿಯೆ ಸಿದ್ಧತೆ ಮಾಡಿದ್ದರು.

ಈ ಹಿಂದಿನ ಸುದ್ದಿ : Child Rebirth : ಅಂತ್ಯಕ್ರಿಯೆಗೆ ಮುನ್ನ ಬಾಯಿಗೆ ನೀರು ಹಾಕಿದಾಗ ಉಸಿರಾಡಿದ ಮಗು; ನವಲಗುಂದದಲ್ಲಿ ಪವಾಡ?

ಅಂತ್ಯಸಂಸ್ಕಾರದ ವೇಳೆ ಜೀವಂತ: ಕಿಮ್ಸ್‌ ನಿರ್ದೇಶಕರು ಹೇಳುವುದೇನು?

ಬಸವಾಪುರದ ಬಾಲಕ ಆಕಾಶ್‌ ಅಂತ್ಯ ಸಂಸ್ಕಾರದ ವೇಳೆ ಉಸಿರಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಸ್ಪಷ್ಟನೆ ನೀಡಿದ್ದಾರೆ. ಅವರ ಪ್ರಕಾರ ಆಗಸ್ಟ್‌ 16ರಂದು ರಾತ್ರಿ ಆಸ್ಪತ್ರೆಯಿಂದ ಮಗು ಮೃತಪಟ್ಟಿದೆ ಎಂಬ ಕಾರಣಕ್ಕೆ ಬಿಡುಗಡೆ ಮಾಡಿರಲಿಲ್ಲ. ಆಸ್ಪತ್ರೆಯಿಂದ ಬಿಡುಗಡೆ ಮಾಡುವಾಗ ಮಗು ಇನ್ನೂ ಬದುಕಿತ್ತು ಎಂದು ಹೇಳಿದ್ದಾರೆ.

ʻ’ಆಸ್ಪತ್ರೆಯಲ್ಲಿ ಬಾಲಕ ಸಾವಿನಪ್ಪಿರುವ ಬಗ್ಗೆ ನಾವು ಹೇಳಿಲ್ಲ. ನಮ್ಮ ಆಸ್ಪತ್ರೆಯಿಂದ ಬಿಡುಗಡೆಯಾದಾಗ ಬಾಲಕ ಇನ್ನೂ ಬದುಕೇ ಇದ್ದ. ಆದರೆ ಬಾಲಕನ ಮೆದುಳಿನಲ್ಲಿ ನೀರು ತುಂಬಿಕೊಂಡಿತ್ತು. ಬಾಲಕ ಚಿಕಿತ್ಸೆ ಸ್ಪಂದನೆ ಮಾಡುತ್ತಿರಲಿಲ್ಲ. ನಾವು ಬಾಲಕನ ಪರಿಸ್ಥಿತಿ ವಿವರಣೆ ಮಾಡಿ ಬದುಕುವುದು ಕಷ್ಟ ಅಂತ ಹೇಳಿದ್ದೆವು. ಹೀಗಾಗಿ ಸ್ವಇಚ್ಛೆಯಿಂದ ಬಾಲಕನ ಪಾಲಕರು ಆಸ್ಪತ್ರೆಯಿಂದ ಕರೆದುಕೊಂಡು ಮನೆಗೆ ಹೋಗಿದ್ದರು. ಕಿಮ್ಸ್ ಆಸ್ಪತ್ರೆಯಿಂದ ಬಾಲಕ ಬಿಡುಗಡೆಯಾದಾಗ ಮೃತಪಟ್ಟಿರಲಿಲ್ಲ. ಮನೆಗೆ ಹೋಗಿ ಕೆಲವು ಗಂಟೆಗಳ ಬಳಿಕ ಬಾಲಕನನ್ನು ಮತ್ತೆ ಕರೆದುಕೊಂಡು ಬಂದರು. ನಾವು ಅಡ್ಮಿಟ್ ಮಾಡುವಂತೆ ಹೇಳಿದ್ದೆವು. ಆದರೆ ಅವರು ಬೇಡ ಅಂತ ಮತ್ತೆ ವಾಪಸು ಕರೆದುಕೊಂಡು ಹೋಗಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿರಿಲ್ಲ. ಸುಮ್ಮನೆ ಮಧ್ಯೆ ಇರೋರು ಗೊಂದಲ ಸೃಷ್ಟಿ ಮಾಡಿದ್ದಾರೆ’ ಎಂದು ಕಿಮ್ಸ್‌ ನಿರ್ದೇಶಕರು ಹೇಳಿದ್ದಾರೆ.

Exit mobile version