Site icon Vistara News

Ram Janmabhoomi: 31 ವರ್ಷದ ಬಳಿಕ ಕೇಸ್‌ ರಿಓಪನ್;‌ ಹುಬ್ಬಳ್ಳಿಯಲ್ಲಿ ಅಯೋಧ್ಯೆ ಹೋರಾಟಗಾರರಿಗೆ ಹುಡುಕಾಟ!

Ayodhya activists in Hubballi

ಹುಬ್ಬಳ್ಳಿ: ಅತ್ತ ರಾಮ ಜನ್ಮಭೂಮಿ (Ram Janmabhoomi) ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಇತ್ತ ಅದೇ ರಾಮ ಜನ್ಮಭೂಮಿಗಾಗಿ ಹೋರಾಟ ಮಾಡಿದ್ದ ಪ್ರಕರಣವೊಂದು ರಿಓಪನ್‌ ಆಗಿದೆ. ಬರೋಬ್ಬರಿ 31 ವರ್ಷದ ಬಳಿಕ ರಾಮಜನ್ಮಭೂಮಿ‌ ಹೋರಾಟದ ಪ್ರಕರಣಕ್ಕೆ‌ ಮರು ಜೀವ ಸಿಕ್ಕಿದ್ದು, ಹೋರಾಟಗಾರರಿಗೆ ಬಂಧನದ ಭೀತಿ ಶುರುವಾಗಿದೆ.

ಕರಸೇವೆಗೂ ಮುನ್ನ ಅಂದರೆ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿಯೂ ಗಲಾಟೆಗಳು ನಡೆದಿದ್ದವು. ಈ ವೇಳೆ ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ್ದ ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದಲ್ಲಿ 9 ಜನರ ವಿರುದ್ಧ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

Ram Janmabhoomi Case reopened after 31 years Search for Ayodhya activists in Hubballi

ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಹಿಂದು ಕಾರ್ಯಕರ್ತರು ಆ ವೇಳೆ ಕೆಲ ಕಾಲ ತಲೆಮರೆಸಿಕೊಂಡಿದ್ದರು. ಬಳಿಕ ಪ್ರಕರಣವು ಯಾವುದೇ ವಿಚಾರಣೆ ಕಾಣದೆ ಹಾಗೇ ಉಳಿದಿತ್ತು. ಪ್ರಕರಣ ದಾಖಲಾದಾಗ ಆರೋಪಿತರು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 65-70 ವರ್ಷಗಳಾಗಿವೆ. ಈಗ 31 ವರ್ಷಗಳ ಹಳೇ ಪ್ರಕರಣಕ್ಕೆ ಜೀವ ಕೊಡಲು ಹುಬ್ಬಳ್ಳಿ ಪೊಲೀಸರು ಮುಂದಾಗಿದ್ದಾರೆ.

ಹುಬ್ಬಳ್ಳಿ ಪೊಲೀಸರಿಂದ ಅಂದಿನ ಆರೋಪಿಗಳ ಏಕಾಏಕಿ ಹುಡುಕಾಟ ಆರಂಭವಾಗಿದೆ. 31 ವರ್ಷದ ಬಳಿಕ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.

ಉಳಿದ ಆರೋಪಿಗಳಿಗೆ ಹುಡುಕಾಟ

ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಪೊಲೀಸರು ಒಪ್ಪಿಸಿದ್ದರು. ಇನ್ನುಳಿದ ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ. ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿ ಹುಡುಕಾಟಕ್ಕೆ‌ ಪೊಲೀಸರು ಮುಂದಾಗಿದ್ದಾರೆ.

ಹಳೇ ಕೇಸ್‌ ಕ್ಲಿಯರ್‌ ಆಗ್ತಾ ಇದೆ: ಡಾ. ಜಿ. ಪರಮೇಶ್ವರ್

‌ಈ ಬಗ್ಗೆ ಗೃಹ ಸಚಿವ ಡಾ. ಪರಮೇಶ್ವರ್ ಪ್ರತಿಕ್ರಿಯೆ ನೀಡಿ, ಹಳೇ ಕೇಸ್‌ಗಳನ್ನು ಕ್ಲಿಯರ್‌ ಮಾಡುವಂತೆ ಪೂರ್ವನಿಗದಿತ ಸೂಚನೆಯನ್ನು ಕೊಡಲಾಗಿತ್ತು. ಅದರಂತೆ ಪೊಲೀಸರು ಈಗ ಹಳೇ ಕೇಸ್‌ಗಳಿಗೆ ಕೈ ಹಾಕಿದ್ದಾರೆ. ಅದರಲ್ಲಿ ಹುಬ್ಬಳ್ಳಿಯಲ್ಲಿ ಈಗ ಒಬ್ಬರನ್ನು ಬಂಧಿಸಿದ್ದಾರೆ. ಕಾನೂನು ಅಡಿಯಲ್ಲಿ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಹಿಂದು ಕಾರ್ಯಕರ್ತರು ಅಂತ ಅಲ್ಲ. ಅದಕ್ಕೆ ಆ ಬಣ್ಣವನ್ನು ಕಟ್ಟುವುದು ಸೂಕ್ತವಲ್ಲ. ಇವರು ಒಬ್ಬರನ್ನೇ ಬಂಧಿಸಿಲ್ಲ. ನಾನು ಕಮಿಷನರ್ ಜತೆ ಮಾತನಾಡುತ್ತೇನೆ. ಆಕಸ್ಮಿಕವಾಗಿ ಆಗಿರಬಹುದು. ಅಂತಹ ಸಮಯದಲ್ಲಿ ಉದ್ದೇಶ ಪೂರ್ವಕವಾಗಿ ಯಾರಾದರೂ ಮಾಡುತ್ತಾರಾ? ಎಂದು ಪರಮೇಶ್ವರ್‌ ಪ್ರಶ್ನೆ ಮಾಡಿದರು.

ರಾಮ ಭಕ್ತರ ಮೇಲೆ ಸರ್ಕಾರ ದ್ವೇಷ ಸಾಧಿಸುತ್ತಿದೆ ಎಂಬ ವಿಪಕ್ಷ ನಾಯಕ ಆರ್ ಅಶೋಕ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಆ ರೀತಿ ಏನೂ ಇಲ್ಲ. ರಾಜ್ಯಾದ್ಯಂತ ಇರುವ ಹಳೇ ಕೇಸುಗಳನ್ನೆಲ್ಲ ಕ್ಲಿಯರ್ ಮಾಡಬೇಕು ಎಂದು ಸೂಚನೆ ಕೊಡಲಾಗಿದೆ. ವರ್ಷಾನುಗಟ್ಟಲೆ ಬಾಕಿ ಉಳಿದಿರುವ ಕೇಸ್‌ಗಳನ್ನು ಕ್ಲಿಯರ್ ಮಾಡಲು ಹೇಳಿದ್ದೆವು. ಅದರಲ್ಲಿ ಹುಬ್ಬಳ್ಳಿಯಲ್ಲಿ 32 ಕೇಸುಗಳು ಪೆಂಡಿಂಗ್ ಇತ್ತು. ಅದನ್ನು ಓಪನ್ ಮಾಡಿ ಕ್ಲಿಯರ್ ಮಾಡುವ ವೇಳೆ ಈ ಕೇಸ್ ಬಂದಿದೆ ಎಂದು ತಿಳಿಸಿದರು.

ಈ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಅರೆಸ್ಟ್ ಮಾಡಿ ಕಸ್ಟಡಿಗೆ ಕೊಟ್ಟಿದ್ದಾರೆ. ಎಲ್ಲರಿಗೂ ಹೇಗೆ ಮಾಡಿದ್ದಾರೋ? ಈ ಕೇಸ್‌ನಲ್ಲೂ ಹಾಗೇ ಮಾಡಿದ್ದಾರೆ. ಇದರಲ್ಲಿ ಬೇರೆ ಉದ್ದೇಶವನ್ನು ಇಟ್ಟುಕೊಂಡಿಲ್ಲ. ಅದು ತಪ್ಪು ಕಲ್ಪನೆಯಾಗಿದೆ. ಇದನ್ನು ಬಿಟ್ಟರೆ ಬೇರೆ ಏನಿಲ್ಲ. ಹಿಂದು ಕಾರ್ಯಕರ್ತರು, ಇನ್ನೊಂದು ಕಾರ್ಯಕರ್ತರು ಎನ್ನುವ ಟಾರ್ಗೆಟ್ ಮಾಡಿ ಮಾಡುವ ಪ್ರಯತ್ನ ಮಾಡಿಲ್ಲ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

ಕಾನೂನಿನ ಪ್ರಕಾರ ಯಾವ ಕ್ರಮ ಆಗಬೇಕು ಎಂಬುದನ್ನು ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ. ಇದಕ್ಕೆ ಕೋಮು ಬಣ್ಣ ಕಟ್ಟುವುದು ಸೂಕ್ತ ಅಲ್ಲ. ಆಕಸ್ಮಿಕವಾಗಿ ಆಗಿರಬಹುದು ಅಷ್ಟೇ. ಅವರೊಬ್ಬರನ್ನೇ ಟಾರ್ಗೆಟ್‌ ಮಾಡಿದ್ದರೆ ಒಪ್ಪಿಕೊಳ್ಳಬಹುದಿತ್ತು. ಆದರೆ, ಬೇರೆ ಬೇರೆ ಎಲ್ಲ ಹಳೇ ಪ್ರಕರಣಗಳನ್ನು ಕ್ಲಿಯರ್ ಮಾಡುವ ಸಂದರ್ಭದಲ್ಲಿ ಈ ಕೇಸ್ ಕೂಡ ಬಂದಿದೆ ಎಂದು ಡಾ. ಜಿ. ಪರಮೇಶ್ವರ್‌ ಹೇಳಿದರು.

ಇದನ್ನೂ ಓದಿ: Liquor Shop: MSILನಿಂದ ಪ್ರೀಮಿಯಂ ಮದ್ಯ ಮಾರಾಟ ಮಳಿಗೆ; ಲಿಕ್ಕರ್‌ ಶಾಪ್‌ಗೆ ಕಾರ್ಪೊರೆಟ್ ಟಚ್‌!

ಆದರೆ, ಈ ಬಗ್ಗೆ ಕಮಿಷನರ್‌ ಬಳಿ ನಾನು ಮಾತನಾಡುತ್ತೇನೆ. ಅಂಥದ್ದು ಏನಿತ್ತು ಈ ಪ್ರಕರಣದಲ್ಲಿ ಅನ್ನೋದರ ಕುರಿತಾಗಿ ಮಾತನಾಡುತ್ತೇನೆ ಎಂದು ಪರಮೇಶ್ವರ್‌ ಹೇಳಿದರು.

Exit mobile version