ಬಾಗಲಕೋಟೆ: ಬೈಕ್ ಸವಾರರಿಗೆ ಲಾರಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ. ಇದೇ ಲಾರಿ ಚಾಲಕ ವೇಗ ಹಾಗೂ ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿ ಇನ್ನೊಂದು ಕಾರಿಗೆ ಗುದ್ದಿಗೆ ಸವಾರರನ್ನು ಗಾಯಗೊಳಿಸಿ ಪರಾರಿಯಾಗಿದ್ದೂ ಪತ್ತೆಯಾಗಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ಬಳಿ ಅಪಘಾತ ನಡೆದಿದೆ. ಬೈಕ್‌ಗೆ ಡಿಕ್ಕಿ ಹೊಡೆದು ಬಳಿಕ ಲಾರಿ ಪಲ್ಟಿಯಾಗಿದೆ. ಬೈಕ್ ಸವಾರ ಶ್ರೀಕಾಂತ್ ಮಾದರ್ (39) ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರರಾಗಿದ್ದ ಶಾಂತವ್ವ ಕಟ್ಟಿಮನಿ (43), ಮಾಂತವ್ವ ಮುರಡಿ (75) ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮದ್ಯೆ ಸಾವಿಗೀಡಾಗಿದ್ದಾರೆ. ಮೂವರೂ ಮೃತರು ರಕ್ಕಸಗಿ ಗ್ರಾಮದ ನಿವಾಸಿಗಳು. ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಅಪಘಾತಕ್ಕೂ ಮುಂಚೆ ಅಮೀನಗಡದಲ್ಲಿ ಕಾರೊಂದಕ್ಕೆ ಈ ಲಾರಿ ಚಾಲಕ ಗುದ್ದಿಸಿದ್ದಾನೆ. ಅದೃಷ್ಟವಶಾತ್ ಕಾರಲ್ಲಿದ್ದವರಿಗೆ ಏನೂ ಆಗಿರಲಿಲ್ಲ. ಸಾರ್ವಜನಿಕರಿಂದ ಧರ್ಮದೇಟು ಬೀಳುತ್ತದೆ ಎಂದು ಲಾರಿ ಚಲಾಕ ಪರಾರಿಯಾಗಿದ್ದ. ನಂತರ ಇಲ್ಲಿಂದ 3 ಕಿ.ಮೀ ದೂರದ ರಕ್ಕಸಗಿ ಬಳಿ ಬೈಕ್‌ಗೆ ಗುದ್ದಿದ್ದಾನೆ.
ಬಸ್ಸಿಗೆ ಕ್ರೂಸರ್ ಡಿಕ್ಕಿ, ಗಾಯ
ಧಾರವಾಡ: ಖಾಸಗಿ ಬಸ್ ಹಾಗೂ ಕ್ರೂಸರ್ ನಡುವೆ ಡಿಕ್ಕಿ ಸಂಭವಿಸಿದ್ದು, ಭಾರಿ ಪ್ರಾಣಾಪಾಯ ಸ್ವಲ್ಪದರಲ್ಲೇ ತಪ್ಪಿದೆ. ಧಾರವಾಡ ತಾಲೂಕಿನ ತೇಗೂರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ನಡೆದಿದ್ದು, ಖಾಸಗಿ ಬಸ್ಸಿಗೆ ಕ್ರೂಸರ್ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ.
ಕ್ರೂಸರ್‌ನಲ್ಲಿದ್ದ 5 ಜನರಿಗೆ ಗಂಭೀರ ಗಾಯಗಳಾಗಿವೆ. ಇನ್ನುಳಿದ ಜನರಿಗೆ ಅಲ್ಪ ಸ್ವಲ್ಪ ಗಾಯವಾಗಿದೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ರೂಸರ್‌ನಲ್ಲಿದ್ದವರು ಹಾವೇರಿಯಿಂದ ಇಶಾಲ್‌ಘಡಕ್ಕೆ ತೆರಳುತ್ತಿರುವಾಗ ಅಪಘಾತ ನಡೆದಿದೆ. ಗದಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಹಾವು ಕಚ್ಚಿ ಕರ್ತವ್ಯನಿರತ ಅರಣ್ಯ ಅಧಿಕಾರಿ ಸಾವು; ಅಪ್ಪನಿಗೇನಾಯ್ತು ಎಂಬ 3 ವರ್ಷದ ಮಗಳ ಪ್ರಶ್ನೆಗೆ ಅಮ್ಮ ನಿರುತ್ತರ