ಹುಬ್ಬಳ್ಳಿ: ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ (Dr Vijaya Sankeshwar) ಅವರ ಬಹುದಿನಗಳ ಸಂಕಲ್ಪ ಸಾಕಾರಗೊಂಡಿದೆ. ಶ್ರೀ ಶಿವಶಕ್ತಿ ಧಾಮದ (Shivshakti Dhama) ಲೋಕಾರ್ಪಣೆಯು ಗುರುವಾರ ವಿಧ್ಯುಕ್ತವಾಗಿ ನೆರವೇರಿತು. ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು (Jagadguru Sri Vidhushekhara Bharathi Mahaswamiji) ಶಿವಶಕ್ತಿಧಾಮವನ್ನು ಉದ್ಘಾಟಿಸಿದರು.
ಹಿಂದು ಸಂಸ್ಕೃತಿಯ ಪ್ರಚಾರ ಮತ್ತು ಐಕ್ಯತೆ ದೃಷ್ಟಿಯಿಂದ ಹುಬ್ಬಳ್ಳಿ ಸಮೀಪದ ಪಾಲಿಕೊಪ್ಪದಲ್ಲಿ ನಿಮಿರ್ಸಲಾಗಿರುವ ದೇವಾಲಯಗಳ ಸಮುಚ್ಛಯಕ್ಕೆ “ಶ್ರೀಶಿವಶಕ್ತಿ ಧಾಮ’ ಎಂದು ನಾಮಕರಣ ಮಾಡಿದ ಶೃಂಗೇರಿ ಜಗದ್ಗುರುಗಳು, ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಿವಲಿಂಗಕ್ಕೆ “ಆನಂದೇಶ್ವರ’, ಚಂಡಿಕೇಶ್ವರಿ ಮಾತೆಗೆ “ಜ್ಞಾನಾಂಬಿಕೆ’, ವಿನಾಯಕನಿಗೆ “ವಿಜಯ ಗಣಪತಿ’ ಎಂದು ನಾಮಕರಣ ಮಾಡಿದ್ದಾರೆ. ಜತೆಗೆ ಆದಿತ್ಯಾದಿ ನವಗ್ರಹಗಳು, ಶನೈಶ್ಚರ ಸ್ವಾಮಿ ಮತ್ತು ಕ್ಷೇತ್ರಪಾಲಕ ಕಾಲಭೈರವೇಶ್ವರನ ಮೂರ್ತಿಗಳನ್ನು ಮಾ ಶುದ್ಧ ತ್ರಯೋದಶಿಯ ರಾಜಯೋಗದ ಸುಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಿ, ಸ್ವತಃ ಜಗದ್ಗುರುಗಳು ಕುಂಭಾಭಿಷೇಕ ಸಹಿತ ಬ್ರಹ್ಮಕಳಸಾರೋಹಣ ಮಾಡಿದರು.
ಬುಧವಾರ ಸಂಜೆಯೇ ಪಾಲಿಕೊಪ್ಪ ಕ್ಷೇತ್ರಕ್ಕೆ ಆಗಮಿಸಿದ ಶೃಂಗೇರಿ ಜಗದ್ಗುರುಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ದೇವಾಲಯದ ಪೂರ್ಣ ಪರಿಸರವನ್ನು ನೋಡಿದ ಶ್ರೀಗಳು ಇದೊಂದು ದೊಡ್ಡ ಕ್ಷೇತ್ರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು. ಶೃಂಗೇರಿ ಪೀಠದ 100ಕ್ಕೂ ಹೆಚ್ಚು ಋತ್ವಿಜರ ತಂಡವು ಕಳೆದೆರಡು ದಿನಗಳಿಂದ ಧಾರ್ಮಿಕ ಕಾರ್ಯಕ್ರಮದ ವೈದಿಕತ್ವವನ್ನು ವಹಿಸಿ, ಸ್ಥಲಶುದ್ಧಿ, ನಾಂದಿಪೂಜೆಯಿಂದ ಆರಂಭಿಸಿ ವಿವಿಧ ಹೋಮ ಮತ್ತು ಹವನ ಹಾಗೂ ಗುರುಪಾದುಕಾ ಪೂಜೆಯೊಂದಿಗೆ ಅಷ್ಟಬಂಧ ಪ್ರಾಣಪ್ರತಿಷ್ಠಾಪನೆಯನ್ನು ನೆರವೇರಿಸಿತು.
ಗುರುವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಆರಂಭವಾದ ಧಾರ್ಮಿಕ ವಿಧಿವಿಧಾನಗಳು ಅಂತಿಮವಾಗಿ ಜಗದ್ಗುರುಗಳ ಅಮೃತ ಹಸ್ತದಿಂದ ಬ್ರಹ್ಮಕಲಶತೀರ್ಥದ ಅಭಿಷೇಕ ಹಾಗೂ ಮಹಾಪೂಜೆಯೊಂದಿಗೆ ಸಂಪನ್ನಗೊಂಡವು. ಬೃಹತ್ ಗರ್ಭಗೋಪುರ ಮತ್ತು ರಾಜಗೋಪುರದ ಮೇಲೆ ಪ್ರತಿಷ್ಠಾಪಿಸಲಾಗಿರುವ ಪಂಚಕಲಶಗಳಿಗೆ ಸ್ವತಃ ಜಗದ್ಗುರುಗಳು ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ವಾಣಿ ಆನಂದ ಸಂಕೇಶ್ವರ, ವಿಜಯಾನಂದ ಟ್ರಾವೆಲ್ಸ್ ಎಂ.ಡಿ. ಶಿವಾ ಸಂಕೇಶ್ವರ ಹಾಗೂ ಸಂಕೇಶ್ವರ ಕುಟುಂಬದ ಎಲ್ಲ ಸದಸ್ಯರು, ಬಂಧುಗಳು ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಬಿಜೆಪಿ ವಕ್ತಾರರಾದ ಹರಿಪ್ರಕಾಶ್ ಕೋಣೆಮನೆ, ಶೃಂಗೇರಿ ಪೀಠದ ಆಡಳಿತಾಧಿಕಾರಿ ಪಿ.ಎ. ಮುರುಳಿ, ಆಡಳಿತ ಸಲಹೆಗಾರರಾದ ಡಾ. ಗೌರಿಶಂಕರ್ ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ವಿಜಯ ಸಂಕೇಶ್ವರರ ಧರ್ಮಶ್ರದ್ಧೆ ಎಲ್ಲರಿಗೂ ಮಾದರಿ: ಶೃಂಗೇರಿ ಜಗದ್ಗುರುಗಳು
ಶಿವಶಕ್ತಿ ಧಾಮದ ಕರ್ತೃಗಳಾದ ಡಾ. ವಿಜಯ ಸಂಕೇಶ್ವರ ಅವರಿಗಿರುವ ಧರ್ಮಶ್ರದ್ಧೆ ಇತರರಿಗೆ ಮಾದರಿ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಧಾರ್ಮಿಕ ವಿಧಿಗಳನ್ನು ಪೂರೈಸಿದ ನಂತರ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು, ಮನುಷ್ಯ ದೊಡ್ಡ ಸ್ಥಾನಕ್ಕೆ ತಲುಪಿದ ನಂತರ ತಾನು ಬೆಳೆದು ಬಂದ ಹಾದಿಯನ್ನು ಮರೆಯುತ್ತಾನೆ. ಜತೆಗೆ ಧರ್ಮ, ಸಂಸ್ಕಾರವನ್ನು ಮರೆಯುತ್ತಾನೆ. ಆದರೆ, ಉದ್ಯಮಿಗಳಾದ ಡಾ. ವಿಜಯ ಸಂಕೇಶ್ವರ ಅವರು ಇಡೀ ದೇಶವೇ ಗುರುತಿಸುವ ಮಟ್ಟಿಗೆ ಸಾಧನೆ ಮಾಡಿದರೂ ಸನಾತನ ಧರ್ಮದ ಮೇಲಿನ ಶ್ರದ್ಧೆಯನ್ನು ಮರೆತಿಲ್ಲ. ಮಾತ್ರವಲ್ಲ, ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಕೂಡಾ ಅದೇ ಸಂಸ್ಕಾರವನ್ನು ನೀಡಿದ್ದಾರೆ. ವಿಜಯ ಸಂಕೇಶ್ವರರ ಸಂಕಲ್ಪದಂತೆ ಶಿವಶಕ್ತಿ ಧಾಮವನ್ನು ಸನಾತನ ಧರ್ಮದ ಕೇಂದ್ರವಾಗಿ ಬೆಳೆಸಲಾಗುವುದು ಎಂದು ಹೇಳಿದರು.
ಹಿಂದುಗಳ ಐಕ್ಯತೆಗೆ ಅಂತರ್ಜಾತಿ ವಿವಾಹ ಅವಶ್ಯ
ಹಿಂದುಗಳಲ್ಲಿರುವ ಮೇಲು ಮತ್ತು ಕೀಳು ಭಾವನೆ ನಿವಾರಣೆಯಾಗಿ ಹಿಂದುಗಳು ಒಗ್ಗಟ್ಟಾಗಲು ಅಂತರ್ಜಾತಿ ವಿವಾಹ ಅವಶ್ಯವೆಂದು ಡಾ. ವಿಜಯ ಸಂಕೇಶ್ವರ ಪ್ರತಿಪಾದಿಸಿದರು.
ಪಾಲಿಕೊಪ್ಪದಲ್ಲಿ ನೂತನವಾಗಿ ನಿರ್ಮಿಸಿರುವ ಶಿವಶಕ್ತಿ ಧಾಮದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಡಾ. ವಿಜಯ ಸಂಕೇಶ್ವರ, ಹಿಂದು ಧರ್ಮದ ಒಗ್ಗಟ್ಟು ಮತ್ತು ಸಂಘಟನೆಗೆ ಸಂಬಂಧಪಟ್ಟಂತೆ ಅನೇಕ ಮಹಾತ್ಮರು ಬಹಳ ಹಿಂದಿನಿಂದಲೂ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ, ಈವರೆಗೆ ಅದು ಪೂರ್ಣ ಪ್ರಮಾಣದಲ್ಲಿ ಫಲ ನೀಡಿಲ್ಲ. ಹಿಂದುಗಳಲ್ಲಿರುವ ಜಾತಿ ಭೇದ, ಅಸ್ಪೃಶ್ಯತೆ, ತಾರತಮ್ಯಗಳಿಂದ ಹಿಂದುಗಳು ಒಂದಾಗಲು ಸಾಧ್ಯವಾಗಿಲ್ಲ. ಅಂತರ್ಜಾತಿ ವಿವಾಹದಿಂದ ಪರಸ್ಪರ ಪ್ರೀತಿ, ಬಾಂಧವ್ಯ ಮೂಡುತ್ತದೆ. ಇದರಿಂದ ಹಿಂದು ಸಮಾಜ ಬಲಿಷ್ಠವಾಗಲು ಸಾಧ್ಯ ಎಂದು ವಿವರಿಸಿದರು.
ಕಳೆದ 10 ವರ್ಷಗಳ ಹಿಂದೆ ರಾಮನ ಹೆಸರು ಹೇಳುವುದಾಗಲೀ, ರಾಮನ ಮಂದಿರ ನಿರ್ಮಾಣ ಮಾಡುವುದಾಗಲೀ ಅಥವಾ ನಾನೊಬ್ಬ ಹಿಂದು ಎಂದು ಹೇಳಿಕೊಳ್ಳುವುದಕ್ಕೂ ಪೂರಕವಾದ ಪರಿಸ್ಥಿತಿ ಇರಲಿಲ್ಲ. ಆದರೆ, ಇಂದು ಜಗತ್ತಿನ ಎಲ್ಲಿ ಬೇಕಾದರೂ ನಾನೊಬ್ಬ ಹಿಂದು ಎಂಬುದನ್ನು ಹೆಮ್ಮೆಯಿಂದ ಹೇಳಬಹುದು. ಇಂತಹ ಪರಿಸ್ಥಿತಿಯನ್ನು ನಿಮಿರ್ಸಿಕೊಟ್ಟ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು.
ಶೃಂಗೇರಿ ಮಠಕ್ಕೆ ಹಸ್ತಾಂತರ
ಶಿವಶಕ್ತಿ ಧಾಮವನ್ನು ಆರಾಧನಾ ಟ್ರಸ್ಟ್ನೊಂದಿಗೆ ಇಂದಿನಿಂದ ಜಗತಸಿದ್ಧ ಶೃಂಗೇರಿ ಶಾರದಾ ಪೀಠದ ಸುಪರ್ದಿಗೆ ಹಸ್ತಾಂತರ ಮಾಡುತ್ತಿದ್ದೇವೆ ಎಂದು ಡಾ. ವಿಜಯ ಸಂಕೇಶ್ವರ ಘೋಷಣೆ ಮಾಡಿದರು. ಆರಾಧನಾ ಟ್ರಸ್ಟ್ ಆಡಳಿತ ಮಂಡಳಿಯ ಸದಸ್ಯರು, ನಮ್ಮ ಎಲ್ಲ ಸಂಬಂಧಿಕರು ಮನಃಪೂರ್ವಕವಾಗಿ ಶೃಂಗೇರಿ ಮಠಕ್ಕೆ ಈ ತೀರ್ಥ ಕ್ಷೇತ್ರವನ್ನು ಹಸ್ತಾಂತರ ಮಾಡಲು ಒಪ್ಪಿದ್ದೇವೆ ಎಂದು ಹೇಳಿದರು.
ಶನಿ ದೇಗುಲ ಕಟ್ಟಿದ್ದು ಏಕೆಂದು ವಿವರಣೆ
ಇಲ್ಲಿ ಶಿವನ ಮೂರ್ತಿಯಲ್ಲದೆ ಬಲಮುರಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಶಿವ ಪಾರ್ವತಿ ದೇವಾಲಯ, ನವಗ್ರಹ, ಕಾಲಭೈರವ ದೇಗುಲ ನಿರ್ಮಾಣ ಮಾಡಲಾಗಿದೆ. ನನಗೆ ಬಹಳ ಇಷ್ಟದ ದೇವರು ಶನಿದೇವರು. ಎಲ್ಲರಿಗೂ ಜೀವನದಲ್ಲಿ ತಾಪತ್ರಯ ಇರುತ್ತವೆ. ಅವರೆಲ್ಲ ಶನಿದೇವರ ದರ್ಶನ ಮಾಡಬೇಕಾದರೆ ತಮಿಳುನಾಡಿನ ತಿರುನೆಲ್ಲೂರು, ಇಲ್ಲವೇ ಮಹಾರಾಷ್ಟ್ರದ ಶನಿಶಿಂಗಣಾಪುರಕ್ಕೆ ಹೋಗಬೇಕು. ಸಾವಿರಾರು ಮಠ, ಮಂದಿರಗಳನ್ನು ನೋಡಿದ್ದೇನೆ. ಆದರೆ, ಶನಿಶಿಂಗಣಾಪುರ ಬಹಳ ಇಷ್ಟವಾಗುತ್ತದೆ. ಅಲ್ಲಿ ಯಾವುದೇ ವಸ್ತು ಕಳ್ಳತನವಾಗುವುದಿಲ್ಲ. ಅನೇಕ ಬಾರಿ ಹೋಗಿ ಬಂದಿದ್ದೇನೆ. ಹಾಗಾಗಿ ಇಲ್ಲಿ ಕೂಡ ಶನಿ ದೇಗುಲ ಇರಬೇಕು ಎನ್ನುವ ಇಚ್ಛೆಯಿಂದ ಕಟ್ಟಲಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಕೊಡುವರು ದೇಣಿಗೆ: ಆನಂದ ಸಂಕೇಶ್ವರ್
ಈ ಸಂದರ್ಭದಲ್ಲಿ ಮಾತನಾಡಿದ ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು, ಹುಬ್ಬಳ್ಳಿಯಿಂದ 21 ಕಿ.ಮೀ. ದೂರದ ಪಾಲಿಕೊಪ್ಪದಲ್ಲಿ ಶ್ರೀ ಶಿವಶಕ್ತಿ ಧಾಮವನ್ನು ನಿಮಿರ್ಸಲಾಗಿದೆ. ನಮ್ಮ ತಂದೆ ಡಾ. ವಿಜಯ ಸಂಕೇಶ್ವರ ಅವರ ಸಂಕಲ್ಪದಂತೆ ಮೊದಲು ಆರಾಧನಾ ಟ್ರಸ್ಟ್ ಸ್ಥಾಪಿಸಲಾಯಿತು. ಬಹಳಷ್ಟು ಜನರು ದೇಣಿಗೆ ನೀಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡ ಈ ಟ್ರಸ್ಟ್ಗೆ ದೇಣಿಗೆ ನೀಡಲಿದ್ದಾರೆ ಎಂದು ತಿಳಿಸಿದರು.
ನಾವು ಶಿವನ ಭಕ್ತರು. ಶಿವಾ ದೇವಾಲಯ ನಿಮಿರ್ಸಬೇಕೆಂದು ಸಂಕಲ್ಪ ಮಾಡಿದ್ದೆವು. ಅದೀಗ ಸಾಕಾರಗೊಂಡಿದೆ. ಶಿವಶಕ್ತಿ ಧಾಮದಲ್ಲಿ ಆನಂದೇಶ್ವರ, ಜ್ಞಾನಾಂಬಿಕೆ, ವಿಜಯ ಗಣಪತಿ, ಶನೈಶ್ಚರ ಸೇರಿ ವಿವಿಧ ಮೂತಿರ್ಗಳಿವೆ. ಮುರುಡೇಶ್ವರ ದೇವಸ್ಥಾನ ನಿಮಿರ್ಸಿದವರನ್ನು ಕರೆಯಿಸಿ ಈ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಪುಷ್ಕರಣಿ, ಹೊರ ಸಭಾಗೃಹ, ಅತಿಥಿಗೃಹ, ರಥಬೀದಿ ಹೀಗೆ ವಿಶೇಷ ಕಟ್ಟಡಗಳು ಇಲ್ಲಿವೆ. ಶೃಂಗೇರಿ ಮಠವು ಇದರ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡಿದೆ ಎಂದರು.
ಸತ್ಸಂಪ್ರದಾಯದ ಸೇತು ಶಿವಶಕ್ತಿಧಾಮ: ಹರಿಪ್ರಕಾಶ್ ಕೋಣೆಮನೆ
ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ಡಾ. ವಿಜಯ ಸಂಕೇಶ್ವರ ಅವರು ಸ್ವತಃ ಧರ್ಮ ಪ್ರಜ್ಞೆ ಇರುವ ವ್ಯಕ್ತಿ, ಆಧ್ಯಾತ್ಮಿಕ ಜೀವಿ ಎಂಬುದು ಎಲ್ಲರಿಗೂ ಗೊತ್ತು. ರಾಜ್ಯ ಮತ್ತು ದೇಶದ ಹಲವು ಕಡೆ ಇಂತಹ ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, ತಮ್ಮ ಧರ್ಮ ಕಾರ್ಯ ನಿರಂತರವಾಗಿ ಮುಂದಿನ ಪೀಳಿಗೆಗೂ ಮುಂದುವರಿಯಬೇಕೆಂಬ ಸಂಕಲ್ಪದಿಂದ ಶಿವಶಕ್ತಿ ಧಾಮವನ್ನು ನಿಮಿರ್ಸಿದ್ದಾರೆ ಎಂದು ಹೇಳಿದರು.
ಸನಾತನ ಧರ್ಮದ ಸತ್ಸಂಪ್ರದಾಯಗಳು ನಿರಂತರವಾಗಿ ಮುಂದುವರಿಯಬೇಕು ಎಂಬುದನ್ನು ಸದಾ ಪ್ರದಿಪಾದಿಸುವ ಡಾ. ವಿಜಯ ಸಂಕೇಶ್ವರ ಅವರು ಅದೇ ಹಾದಿಯಲ್ಲಿ ತಮ್ಮ ಮಗ ಆನಂದ ಸಂಕೇಶ್ವರ ಅವರನ್ನು ಬೆಳೆಸಿದ್ದಾರೆ. ನೂತನವಾಗಿ ನಿರ್ಮಾಣವಾಗಿರುವ ಈ ಬೃಹತ್ ದೇವಾಲಯದ ಹಿಂದೆ ಅವರ ಧರ್ಮಶ್ರದ್ಧೆ ಅಡಕವಾಗಿದೆ ಎಂದು ಹರಿಪ್ರಕಾಶ್ ಕೋಣೆಮನೆ ಹೇಳಿದರು.