ಹುಬ್ಬಳ್ಳಿ: ಯುವಕನೊಬ್ಬನನ್ನು ನಾಯಿ ಪ್ರೀತಿಯೊಂದು (Dog Love) ಬಲಿ ಪಡೆದಿದೆ. ಹುಬ್ಬಳ್ಳಿಯ ಮಿಷನ್ ಕಾಂಪೌಂಡ್‌ನಲ್ಲಿ ವಾಸವಾಗಿರುವ ಯುವಕನೊಬ್ಬ ನಾಯಿಯೊಂದನ್ನು ಕೊಡಿಸುವಂತೆ ಅಮ್ಮನಿಗೆ ಪೀಡಿಸಿ ಪೀಡಿಸಿ ಇಟ್ಟಿದ್ದಕ್ಕೆ ಆಕೆ ಮನೆಯನ್ನೇ ಬಿಟ್ಟು ಹೋದರು. ಇದರಿಂದ ನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Self Harming) ಶರಣಾಗಿದ್ದಾನೆ.
ಅಲೆನ್ ಭಸ್ಮೆ (24) ಆತ್ಮಹತ್ಯೆಗೆ ಶರಣಾದ ಯುವಕ. ಈತ ಎರಡು ಲಕ್ಷ ಮೌಲ್ಯದ ನಾಯಿಮರಿ ಕೊಡಿಸುವಂತೆ ತಾಯಿಯ ಬಳಿ ಹಠ ಮಾಡುತ್ತಿದ್ದ ಎನ್ನಲಾಗಿದೆ. ಆದರೆ, ಆರ್ಥಿಕವಾಗಿ ಅಷ್ಟೊಂದು ಶಕ್ತರಲ್ಲದ ತಾಯಿ ತನಗೆ ಕೊಡಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇಷ್ಟಾದರೂ ತಾಯಿಯ ಮಾತನ್ನು ಕೇಳದೆ ತನಗೆ ನಾಯಿ ಬೇಕೇ ಬೇಕು ಎಂದು ಹಠ ಮಾಡುತ್ತಾ ಬಂದಿದ್ದಾನೆ.
ಇದನ್ನೂ ಓದಿ: Karnataka Weather : ಇಂದು – ನಾಳೆ ಭಾರಿ ಮಳೆ ಮುನ್ಸೂಚನೆ; ಹಾಗೇ ತಾಪಮಾನದಲ್ಲೂ ಏರಿಕೆ!
ಮಗನ ಕಾಟ ತಾಳಲಾರದೆ ತಾಯಿ ಮನೆಯನ್ನೇ ಬಿಟ್ಟು ಹೋಗಿದ್ದಾರೆ. ತನ್ನಿಂದ ತಾಯಿ ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದ ಅಲೆನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Assault Case : ಮಂಕಿ ಕ್ಯಾಪ್ ಧರಿಸಿ ಮಾರಣಾಂತಿಕ ಹಲ್ಲೆ
ಚಿಕ್ಕಮಗಳೂರು : ಮಂಕಿ ಕ್ಯಾಪ್ ಧರಿಸಿ ಮಾರಕಾಸ್ತ್ರದೊಂದಿಗೆ ಮನೆಗೆ ನುಗ್ಗಿದ ಹಂತಕನೊಬ್ಬ ಕೊಲೆಗೆ ಯತ್ನಿಸಿ ಪರಾರಿ ಆಗಿದ್ದಾನೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಕಳೆದ ರಾತ್ರಿ (ನ.30) ನಾಗರಹಳ್ಳಿ ಗ್ರಾಮದ ಬಿಜೆಪಿ ಜಿಲ್ಲಾ ಕಚೇರಿ ಕಾರ್ಯದರ್ಶಿಯ ಮೇಲೆ ಹಲ್ಲೆ (assault Case) ನಡೆದಿದೆ. ಜಿಲ್ಲಾ ಕಾರ್ಯದರ್ಶಿ ದುರ್ಗೇಶ್ ಹಲ್ಲೆಗೊಳಗಾದವರು. ನಾಗರಹಳ್ಳಿಯ ಅವರ ಮನೆಗೆ ನುಗ್ಗಿದ ಕಿರಾತಕ ಮನಬಂದಂತೆ ಥಳಿಸಿದ್ದಾನೆ.
ಮಂಕಿ ಕ್ಯಾಪ್ ಹಾಕಿಕೊಂಡು ಬಂದಿದ್ದ ಅನಾಮಿಕ ಏಕಾಏಕಿ ದುರ್ಗೇಶ್ ಮೇಲೆ ಎರಗಿದ್ದಾನೆ. ಬಳಿಕ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೊಲೆ ಮಾಡಲೆಂದು ಹಂತಕ ಬಂದಿದ್ದ ಆದರೆ ದುರ್ಗೇಶ್ ಇದೇ ವೇಳೆ ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿ ಅಲ್ಲಿಂದ ಪರಾರಿ ಆಗಿದ್ದಾನೆ. ದುರ್ಗೇಶ್ ತಲೆಗೆ ಗಂಭೀರ ಪೆಟ್ಟಾಗಿದ್ದು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾಕಾಗಿ ಈ ಹಲ್ಲೆ ನಡೆದಿದೆ ಎಂಬುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ರಾಜಕೀಯ ದ್ವೇಷಕ್ಕೆ ಹೀಗೆ ಮಾಡಿರಬೇಕೆಂದು ಅಂದಾಜಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಮಾಜಿ ಶಾಸಕ ಸಿ.ಟಿ.ರವಿ ಭೇಟಿ ನೀಡಿದರು. ಗಾಯಾಳು ದುರ್ಗೇಶ್‌ರ ಆರೋಗ್ಯ ವಿಚಾರಿಸಿದರು. ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿಯಾಗಿ ದುರ್ಗೇಶ್ ಕೆಲಸ ಮಾಡುತ್ತಿದ್ದರು. ಮಾರಣಾಂತಿಕ ಹಲ್ಲೆ ನಡೆಸಿದವರ ಮೇಲೆ ಪೊಲೀಸರು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಚಿಕ್ಕಮಗಳೂರು ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ. ಕೊಲೆ ಯತ್ನ ಕೇಸ್ ದಾಖಲಾಗಿದ್ದು, ಹಲ್ಲೆ ಮಾಡಿದವರಿಗಾಗಿ ಹುಡುಕಾಟ ನಡೆದಿದೆ.
ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಅಂಧ ಮುಸ್ಲಿಂ ವ್ಯಕ್ತಿಗೆ ಹಲ್ಲೆ?
ಕೊಪ್ಪಳ: ಯುವಕರ ತಂಡವೊಂದು ಮುಸ್ಲಿಂ ಅಂಧ ವ್ಯಕ್ತಿಯನ್ನು (Blind Muslim old man) ಅಪಹರಿಸಿ ಜೈ ಶ್ರೀ ರಾಮ್ (Jai Shree Ram) ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ (Gangavati News) ನಡೆದಿದೆ. ಗಂಗಾವತಿಯ ಮಹಿಬೂಬ ನಗರದ ನಿವಾಸಿ ಹುಸೇನಸಾಬ ಎಂಬ ವೃದ್ಧನ ಮೇಲೆ ಹಲ್ಲೆ (Attack on Muslim Man) ನಡೆದಿದೆ.
ಹುಸೇನ ಸಾಬ ಅವರಿಗೆ ಎರಡೂ ಕಣ್ಣುಗಳಲ್ಲಿ ದೃಷ್ಟಿ ಇಲ್ಲ. ಅಂಧರಾಗಿರುವ ಅವರು ನವೆಂಬರ್ 25ರಂದು ಕಷ್ಟಪಟ್ಟು ವಾಹನಗಳನ್ನು ಬಳಸಿ ಪೇಟೆ ಕಡೆಗೆ ಬಂದಿದ್ದರು. ಅಲ್ಲಿಂದ ಮನೆಗೆ ತೆರಳಲು ಆಟೋ ರಿಕ್ಷಾಕ್ಕಾಗಿ ಕಾಯುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಕೆಲವರು ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಬಳಿಕ ಅವರನ್ನು ಎತ್ತಾಕಿಕೊಂಡು ನಗರದ ಹೊರವಲಯದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎಂದು ಗಂಗಾವತಿ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ. ನಗರದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಅವರ ಗಡ್ಡಕ್ಕೆ ಬೆಂಕಿ ಹಚ್ಚಲಾಗಿದೆ. ಆದರೆ, ಅವರು ಕೂಡಲೇ ಅದನ್ನು ನಂದಿಸಿಕೊಂಡಿದ್ದಾರೆ. ಬಳಿಕ ಹಲ್ಲೆ ಮಾಡಲಾಗಿದೆ. ಹುಸೇನ ಸಾಬ ಅವರ ಬೆನ್ನಿನಲ್ಲಿ ಹಲ್ಲೆಯಿಂದಾದ ಗಾಯದ ಗುರುತುಗಳು ಕಂಡುಬಂದಿವೆ.
ನವೆಂಬರ್ 25ರಂದು ಸಂಜೆ ಈ ಘಟನೆ ನಡೆದಿದ್ದು, ಆವತ್ತು ರಾತ್ರಿ ಇಡೀ ಹುಸೇನಸಾಬ ಅವರು ಆ ಗುಡ್ಡದಲ್ಲೇ ಇದ್ದರು. ಬೆಳಗ್ಗೆ ಕುರಿ ಕಾಯುವವರು ಬಂದು ನೋಡಿದಾಗ ಇವರು ಬಿದ್ದುಕೊಂಡಿರುವುದು ಕಂಡಿದೆ. ಅವರು ಹುಸೇನ್ ಸಾಬ್ ಅವರನ್ನು ಮನೆಗೆ ಸೇರಿಸಿದ್ದಾರೆ. ಮನೆಯಲ್ಲಿ ಹೀಗೆಲ್ಲ ನಡೆದಿದೆ ಎಂದು ಹೇಳಿದ ಬಳಿಕ ಈಗ ಗಂಗಾವತಿ ನಗರ ಠಾಣೆಗೆ ದೂರು ನೀಡಲಾಗಿದೆ.
ಹಲ್ಲೆ ನಡೆದಿದ್ದು ನಿಜವಾ?
ಹುಸೇನ ಸಾಬ ಅವರನ್ನು ನೋಡಿದರೆ ಯಾರಿಗೂ ಹಲ್ಲೆ ಮಾಡಬೇಕು, ಗಡ್ಡಕ್ಕೆ ಬೆಂಕಿ ಹಚ್ಚಬೇಕು ಎಂದು ಅನಿಸುವ ಹಾಗಿದ್ದಾರೆ. ಒಬ್ಬ ಬಡ ಮುಸ್ಲಿಂ ಮಾತ್ರವಲ್ಲದೆ, ಕಣ್ಣೇ ಕಾಣದ ಅಂಧನಿಗೆ ಹಲ್ಲೆ ಮಾಡುವ ಉದ್ದೇಶವಾದರೂ ಏನು ಎನ್ನುವುದು ಸ್ಪಷ್ಟವಾಗಿಲ್ಲ. ನಿಜಕ್ಕೂ ಯಾರಾದರೂ ಕುಡಿತ ಇಲ್ಲವೇ ನಶೆಯ ಮತ್ತಿನಲ್ಲಿ ಈ ರೀತಿ ನಡೆದುಕೊಂಡರೇ ಎನ್ನುವ ಸಂಶಯವೂ ಇದೆ. ಆ ರೀತಿ ನಡೆದಿದ್ದರೆ ಅವರನ್ನು ಬೈಕ್ ಮೂಲಕ ಎತ್ತಾಕಿಕೊಂಡ ಪ್ರದೇಶದಲ್ಲಿ ಯಾವುದಾದರೂ ಸಿಸಿಟಿವಿಯಲ್ಲಿ ಈ ಘಟನೆ ದಾಖಲಾಗಿರುವ ಸಾಧ್ಯತೆ ಇದೆ. ಇದನ್ನು ಗಮನಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ: DK Shivakumar : ಡಿಕೆಶಿಯನ್ನು ಗೇಟ್ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!
ಒಂದು ವೇಳೆ ಹಲ್ಲೆ ನಡೆದಿರುವುದು ನಿಜವೇ ಆಗಿದ್ದರೆ ಹಲ್ಲೆ ಮಾಡಿದವರು ಯಾರು? ಏನು ಉದ್ದೇಶ ಎನ್ನುವುದು ಅಪರಾಧಿಗಳ ಬಂಧನದ ಬಳಿಕ ಸ್ವಷ್ಟವಾಗಲಿದೆ. ಅಥವಾ ಯಾವುದೋ ಬೇರೆ ಕಾರಣದಿಂದ ಮನೆಯಿಂದ ನಾಪತ್ತೆಯಾದ ಹುಸೇನ ಸಾಬ ಅವರು ಹಲ್ಲೆ, ಜೈಶ್ರೀರಾಮ್ ಹೇಳಿಕೆಯ ಕಥೆಗಳನ್ನು ಕಟ್ಟಿದ್ದರೆ ಅದು ಕೂಡಾ ತನಿಖೆಯಿಂದ ಬಯಲಾಗಲಿದೆ. ಒಂದೊಮ್ಮೆ ದುಷ್ಕರ್ಮಿಗಳ ತಂಡ ಒಬ್ಬ ಅಂಧ ವ್ಯಕ್ತಿಯ ಮೇಲೆ ಈ ರೀತಿ ದೌರ್ಜನ್ಯ ಮಾಡಿದ್ದೇ ಹೌದಾಗಿದ್ದಲ್ಲಿ, ಇದಕ್ಕಿಂತ ದುಷ್ಟ ಕೃತ್ಯ ಬೇರೆ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.