ಬೆಂಗಳೂರು: ಸ್ವಾವಲಂಬಿ ಹೆಣ್ಣು ಮಕ್ಕಳಿಗಾಗಿ ಹುಟ್ಟಿಕೊಂಡಿರುವ “ಧೃತಿ ಮಹಿಳಾ ಮಾರುಕಟ್ಟೆ” (Dhruti Mahila Marukatte) ಇಂದು ಧೃತಿಗೆಡದೆ ಮೂರು ವರ್ಷ ಯಶಸ್ವಿ ಹೆಜ್ಜೆಯನ್ನು ಹಾಕಿದೆ. ಅಲ್ಲದೆ, ನೂರಾರು ಮಹಿಳಾ ಉದ್ಯಮಿಗಳನ್ನು ಹುಟ್ಟುಹಾಕುವಲ್ಲಿ, ಆರ್ಥಿಕ ಸ್ವಾವಲಂಬನೆ ಸಾಧಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಕೊರೊನಾ ಸಂದರ್ಭದಲ್ಲಿ ಹುಟ್ಟಿಕೊಂಡ ಒಂದು ಸಣ್ಣ ಆಲೋಚನೆಯು ಇಂದು ರಾಜ್ಯವ್ಯಾಪಿ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಈಗ ಈ ಸಂಸ್ಥೆಯು ಮೂರು ವರ್ಷವನ್ನು ಯಶಸ್ವಿಯಾಗಿ ಪೂರೈಸಿ ನಾಲ್ಕನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ.
ಅಪರ್ಣಾ ರಾವ್ ಅವರು ಕೊರೊನಾ ಸಂದರ್ಭದಲ್ಲಿ ಆನ್‌ಲೈನ್ ವೇದಿಕೆ ಮೂಲಕ ಸಣ್ಣ ಗುಂಪನ್ನು ರಚನೆ ಮಾಡಿದ್ದು, ಇಂದು ಈ ಹಂತಕ್ಕೆ ಬೆಳೆದು ನಿಂತಿದೆ. 2020 ಮೇ 25 ರಂದು ಧೃತಿ ಮಹಿಳಾ ಮಾರುಕಟ್ಟೆಯನ್ನು ಆನ್‌ಲೈನ್ ಮೂಲಕ ಸ್ಥಾಪನೆ ಮಾಡಲಾಯಿತು. ಈ ಜಾಲತಾಣವು ಮಾರಾಟಗಾರರಷ್ಟೇ ಗ್ರಾಹಕರಿಗೂ ಅನುಕೂಲ ಆಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಂದರೆ, ಈಗಾಗಲೇ 48,000ಕ್ಕೂ ಹೆಚ್ಚು ಗ್ರಾಹಕರು ಈ ಗುಂಪಿನಲ್ಲಿ ಸೇರ್ಪಡೆಯಾಗಿದ್ದರೆ, 200ಕ್ಕೂ ಹೆಚ್ಚು ಮಾರಾಟಗಾರರು ನೋಂದಾಯಿತರಾಗಿದ್ದಾರೆ.
ಹಳ್ಳಿ-ಹಳ್ಳಿಗಳ ಮಹಿಳೆಯರಿಗೆ ಇದು ಆಸರೆ
ಕರ್ನಾಟಕದ ಚಿಕ್ಕ ಚಿಕ್ಕ ಹಳ್ಳಿಗಳಲ್ಲೂ ಈಗ ಮಹಿಳೆಯರೂ ಸೇರಿದಂತೆ ನಾಗರಿಕರು ಧೃತಿ ಮಹಿಳಾ ಮಾರುಕಟ್ಟೆಯ ಫಲಾನುಭವಿಗಳಿದ್ದಾರೆ. ಗುಣಮಟ್ಟದ ವಸ್ತುಗಳಿಗೆ ಆದ್ಯತೆ ಕೊಡಲಾಗುತ್ತಿದ್ದು, ಮನೆಯಿಂದಲೇ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಬಹುದಾಗಿದೆ. ಇಲ್ಲಿ ಕರ್ನಾಟಕದ ಪ್ರಾದೇಶಿಕ ಸೊಗಡನ್ನು ಹೊಂದಿರುವ ಆಹಾರ ಪದಾರ್ಥಗಳು, ಸೀರೆ, ಉಡುಪುಗಳು, ಕಲಾಕೃತಿಗಳು ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಎಲ್ಲರೂ ಒಟ್ಟಾಗಿ ಬೆಳೆಯೋಣ ಬೆಳೆಸೋಣ ಎಂಬ ತತ್ವದ ಮೂಲಕ ಬೆಳವಣಿಗೆಯನ್ನು ಹೊಂದುತ್ತಿದೆ.
ಇದನ್ನೂ ಓದಿ: ಅಸ್ಸಾಂ ಲೇಡಿ ಸಿಂಗಂ ಪೊಲೀಸ್ ಅಧಿಕಾರಿ ಸಾವು; ಆ ರಾತ್ರಿ ಎಲ್ಲಿಗೆ ಹೊರಟಿದ್ದರೆಂದು ಮನೆಯವರಿಗೂ ಗೊತ್ತಿರಲಿಲ್ಲ!
ಮೇ 19ರಿಂದ ಮೂರು ದಿನ ಧೃತಿ ಉತ್ಸವ
ಧೃತಿ ಮಹಿಳಾ ಮಾರುಕಟ್ಟೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ “ಧೃತಿ ಉತ್ಸವ”ವು ಬೆಂಗಳೂರು ತಾಂತ್ರಿಕ ಶಿಕ್ಷಣ ಸಂಸ್ಥೆಯವರ ಸಹಯೋಗದೊಂದಿಗೆ ಈ ಕಾಲೇಜಿನ ಸಭಾಂಗಣದಲ್ಲಿ ಮೇ 19ರಿಂದ ಮೂರು ದಿನ ನಡೆಯಲಿದೆ. ಮೇ 19ರ ಶುಕ್ರವಾರ ಮಧ್ಯಾಹ್ನ 3.30ಕ್ಕೆ ಪ್ರಾರಂಭವಾಗಲಿರುವ ಈ ಉತ್ಸವವು ರಾತ್ರಿ 9 ಗಂಟೆವರೆಗೆ ನಡೆಯಲಿದೆ. ಮೇ 20ರ ಶನಿವಾರ ಹಾಗೂ ಮೇ 21ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9.30ರವರೆಗೆ ಕಾರ್ಯಕ್ರಮ ನಡೆಯಲಿದೆ.
ಉದ್ಘಾಟನೆಯಲ್ಲಿ ಯಾರೆಲ್ಲ ಭಾಗಿ?
ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್ ಮಂಜುನಾಥ್ ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ಧೃತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಿ.ಜೆ. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ. ಪುಟ್ಟಸ್ವಾಮಿ ಅವರು ಹಾಗೂ ಪ್ರಾಂಶುಪಾಲ ಡಾ. ಅಶ್ವಥ್ ಎಂ.ಯು. ಅವರು ಭಾಗಿಯಾಗಲಿದ್ದಾರೆ.
ವಸ್ತು ಪ್ರದರ್ಶನ-ಮಾರಾಟ ಮತ್ತು ಫ್ಯಾಶನ್ ಶೋ
ಈ ವೇಳೆ ಧೃತಿ ಮಹಿಳೆಯರ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಡೆಸಲಾಗುತ್ತಿದೆ. ಧೃತಿ ‘ಧೃತಿ- ಸಾಮಾನ್ಯ ಮಹಿಳೆ’ ಫ್ಯಾಶನ್ ಶೋ ಕೂಡ ಈ ವೇಳೆ ಇರಲಿದೆ. ಅಲ್ಲದೆ, ಈ ಬಾರಿ ವಿಶೇಷವಾಗಿ ‘ ಅಡುಗೆ ಸಡಗರ’ ಎನ್ನುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಆಹಾರ ಪದ್ಧತಿಗಳ ಬಗ್ಗೆ ಮಾಹಿತಿ, ಅನುಭವ ಮುಂತಾದ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಲು ‘ಅಡುಗೆ ಸಡಗರ’ ವೇದಿಕೆ ಬಳಕೆಯಾಗಲಿದೆ.
ಇದನ್ನೂ ಓದಿ: Karnataka CM : ಸಂಜೆ 6 ಗಂಟೆಗೆ ನೂತನ ಸಿಎಂ ಘೋಷಣೆ, ಎಲ್ಲ ಶಾಸಕರು ಬೆಂಗಳೂರಿಗೆ ಬರಲು ಸೂಚನೆ
ಧೃತಿ ಉತ್ಸವದಲ್ಲಿ ನೂರಕ್ಕೂ ಹೆಚ್ಚು ವಿಶಿಷ್ಟ ವಸ್ತುಗಳ ಮಾರಾಟ ಮಳಿಗೆಗಳು ಇರಲಿದೆ. ಪ್ರಾದೇಶಿಕ ಆಟಗಳು, ಯುವ ಮನೋರಂಜನಾ ಕಾರ್ಯಕ್ರಮಗಳು, ಮಣ್ಣಿನ ಆಕೃತಿ, ಮಡಿಕೆ ತಯಾರಿಕಾ ಶಿಬಿರ, ವಾಣಿಜ್ಯೋದ್ಯಮ ಅಭಿವೃದ್ಧಿ ತರಬೇತಿ ಶಿಬಿರ, ಅಡುಗೆ ಸ್ಪರ್ಧೆ, ವಿನೂತನ ಗೃಹೋದ್ಯಮ ಸ್ಪರ್ಧೆ ಸೇರಿದಂತೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.