Site icon Vistara News

Dialysis Service: ಜ. 27ರಂದು 800 ಏಕ ಬಳಕೆಯ ಡಯಾಲೈಸರ್‌ಗಳಿಗೆ ಸಿಎಂ ಚಾಲನೆ

Dialysis service

ಬೆಂಗಳೂರು: ಉಚಿತವಾಗಿ ಉತ್ತಮ ಡಯಾಲಿಸಿಸ್ ಸೇವೆ ಎದುರು ನೋಡುತ್ತಿದ್ದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡ ಜನರಿಗೆ ಸಂತಸದ ಸುದ್ದಿ ಸಿಕ್ಕಿದೆ. ಸೋಂಕು ರಹಿತ ಡಯಾಲಿಸಿಸ್ ಸೇವೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಡಯಾಲಿಸಿಸ್ (Dialysis Service) ಮಾಡಿಸಿಕೊಳ್ಳುವವರಿಗೆ ಇನ್ಮುಂದೆ ಏಕ ಬಳಕೆಯ ಡಯಾಲೈಸರ್ ಆರೈಕೆ ಲಭ್ಯವಾಗಲಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 800 ಏಕಬಳಕೆಯ ಡಯಾಲೈಸರ್ ಯಂತ್ರಗಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಜ.27ರಂದು ಚಾಲನೆ ನೀಡಲಿದ್ದಾರೆ.

ರಾಜ್ಯದಲ್ಲಿ ಡಯಾಲಿಸಿಸ್ ವ್ಯವಸ್ಥೆಯನ್ನು ಉತ್ತಮ ಹಂತಕ್ಕೆ ತರುವಲ್ಲಿ ಕಳೆದ 6 ತಿಂಗಳಿನಿಂದ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೊನೆಗೂ ರಾಜ್ಯದ ಡಯಾಲಿಸಿಸ್ ವ್ಯವಸ್ಥೆಯನ್ನು ಸರಿ ದಾರಿಗೆ ತರುವತ್ತ ಮಹತ್ವದ ಪಾತ್ರ ವಹಿಸಿದ್ದಾರೆ. ಜನಸಾಮಾನ್ಯರಿಗೆ ಸೋಂಕು ರಹಿತ ಡಯಾಲಿಸಿಸ್ ಸೇವೆ ಕಲ್ಪಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದ್ಯತೆ ನೀಡಿದ್ದರು.

ಡಯಾಲಿಸಿಸ್ ಕೇಂದ್ರಗಳಲ್ಲಿ ಅಲ್ಲಲ್ಲಿ ಅಸ್ವಸ್ಥಗೊಂಡಿದ್ದ ಬಹುಬಳಕೆಯ ಡಯಾಲೈಸರ್ ಯಂತ್ರಗಳಿಂದ ಡಯಾಲಿಸಿಸ್ ಪಡೆಯುತ್ತಿದ್ದವರಿಗೆ ಸೋಂಕು ತಗುಲುತ್ತಿರುವುದನ್ನು ಗಮನಿಸಿದ್ದ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಇಡೀ ಡಯಾಲಿಸಿಸ್ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಏಕ ಬಳಕೆಯ ಡಯಾಲೈಸರ್ ಯಂತ್ರಗಳನ್ನ ಅಳವಡಿಸಲು ನಿರ್ಧರಿಸಿದರು. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ 800 ಹೊಸ ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದರು‌.

ಇದನ್ನೂ ಓದಿ | Congress Karnataka: ಈ ನಿಗಮ – ಮಂಡಳಿ ಅವಧಿ ಕೇವಲ 2 ವರ್ಷ; ಸಿಎಂ, ಡಿಸಿಎಂ ಮಾಸ್ಟರ್‌ ಪ್ಲ್ಯಾನ್!

ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಚಾಲನೆ

ಹೊಸ ಡಯಾಲೈಸರ್ಗಳ ಅಳವಡಿಕೆ ಕಾರ್ಯ ಬಹುತೇಕ ಅಂತಿಮ ಘಟ್ಟಕ್ಕೆ ತಲುಪಿದ್ದು, ಜ.27ರಿಂದ ಏಕ ಬಳಕೆಯ ಡಯಾಲಿಸಿಸ್ ಆರೋಗ್ಯ ಸೇವೆ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಸೇವೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಕೆ.ಸಿ‌ಜನರಲ್ ಆಸ್ಪತ್ರೆಯೊಂದರಲ್ಲೇ 20 ಹೊಸ ಏಕ ಬಳಕೆಯ ಡಯಾಲೈಸರ್ ಯಂತ್ರಗಳನ್ನು ಅಳವಡಿಸಲಾಗಿದ್ದು, ಪ್ರತಿ ನಿತ್ಯ 72 ರೋಗಿಗಳಿಗೆ ಡಯಾಲಿಸಿಸ್ ಸೇವೆ ಒದಗಿಸುವ ಸಾಮರ್ಥ್ಯ ಕಲ್ಪಿಸಲಾಗಿದೆ.

ರಾಜ್ಯದಲ್ಲಿದ್ದ 171 ಡಯಾಲಿಸಿಸ್ ಕೇಂದ್ರಗಳನ್ನು 219ಕ್ಕೆ ಹೆಚ್ಚಿಸಲಾಗಿದ್ದು, ಹೊಸದಾಗಿ 48 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸಲಾಗಿದೆ. 219 ಕೇಂದ್ರಗಳಲ್ಲಿ ಒಟ್ಟು 800 ಏಕಬಳಕೆಯ ಡಯಾಲೈಸರ್ ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ವಿಭಾಗದ 57 ಡಯಾಲಿಸಿಸ್ ಕೇಂದ್ರಗಳಲ್ಲಿ 250 ಯಂತ್ರಗಳು, ಮೈಸೂರು ವಿಭಾಗದ 55 ಕೇಂದ್ರಗಳಲ್ಲಿ 222 ಯಂತ್ರಗಳು, ಬೆಳಗಾವಿ ವಿಭಾಗದ 62 ಕೇಂದ್ರಗಳಲ್ಲಿ 201 ಯಂತ್ರಗಳು, ಕಲಬುರಗಿ ವಿಭಾಗದ 45 ಕೇಂದ್ರಗಳಲ್ಲಿ 127 ಯಂತ್ರಗಳು ಸೇರಿದಂತೆ ಒಟ್ಟು 800 ಏಕಬಳಕೆಯ ಡಯಾಲೈಸರ್‌ಗಳ ಅಳವಡಿಕೆ ಕಾರ್ಯ ಅಂತಿಮ ಘಟ್ಟಕ್ಕೆ ತಲುಪಿದೆ. ನಾಳೆಯಿಂದ 475 ಏಕಬಳಕೆಯ ಡಯಾಲೈಸರ್‌ಗಳು ಕಾರ್ಯ ಆರಂಭಿಸಲಿದ್ದು, ರೋಗಿಗಳಿಗೆ ಸೊಂಕು ರಹಿತ ಡಯಾಲಿಸಿಸ್ ಸೇವೆ ಲಭ್ಯವಾಗಲಿದೆ. ಉಳಿದ ಕೇಂದ್ರಗಳಲ್ಲೂ ಒಂದು ತಿಂಗಳೊಳಗೆ ಏಕ ಬಳಕೆಯ ಡಯಾಲಿಸಿಸ್ ಯಂತ್ರಗಳ ಸೇವೆ ಆರಂಭವಾಗಲಿದೆ.

ಇದನ್ನೂ ಓದಿ | Indian Constitution: ಸಂವಿಧಾನ ತಿರುಚಲು ಅವಕಾಶ ನೀಡಬಾರದು: ಡಿ.ಕೆ. ಶಿವಕುಮಾರ್

ಪ್ರತಿಯೊಂದು ಡಯಾಲಿಸಿಸ್ ಸೈಕಲ್‌ಗೆ 1573 ರೂ. ಗಳು ವೆಚ್ಚವಾಗಲಿದ್ದು, ಸರ್ಕಾರವೇ ವೆಚ್ಚವನ್ನು ಭರಿಸಿ ರೋಗಿಗಳಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸಲಿದೆ. 800 ಡಯಾಲಿಸಿಸ್ ಯಂತ್ರಗಳಿಂದ ವಾರ್ಷಿಕ 7.20 ಲಕ್ಷ ಡಯಾಲಿಸಿಸ್ ಸೇವೆಗಳನ್ನು ಒದಗಿಸಲು ಸಾಮರ್ಥ್ಯ ಕಲ್ಪಿಸಲಾಗಿದ್ದು, ಸೊಂಕು ರಹಿತ ಡಯಾಲಿಸಿಸ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

Exit mobile version